ಕಾಲುವೆಗೆ ಬಾರದ ನೀರು
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 3
ತಾಲೂಕಿನ ಹದಲಿ ಗ್ರಾಮಕ್ಕೆ 14ನೇ ಬ್ಲಾಕ್‌ನ ಕಾಲುವೆಗೆ ಕಳೆದ 2 ತಿಂಗಳುಗಳಿಂದ ನೀರು ಬರದೇ ಇರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹದಲಿ ಗ್ರಾಮದ ರೈತರು ಸೋಮವಾರ ಡಿವಿಜನ್ ನಂ. 3ರ ನೀರಾವರಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಜರುಗಿಸಿದರು.
ಕಾಲುವೆಗೆ ನೀರು ಬಾರದೇ 2 ತಿಂಗಳು ಗತಿಸಿದರೂ ಇಲ್ಲಿಯವರೆಗೂ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಗಮನಹರಿಸಿಲ್ಲ. ಈ ಕುರಿತು ಹಲವು ಬಾರಿ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬ್ಲಾಕ್ ನಂ. 14ನೇ ಮುಖ್ಯ ಕಾಲುವೆಯಿಂದ ಹದಲಿ ಗ್ರಾಮದ ರೈತರ ಜಮೀನುಗಳಿಗೆ ಬರಬೇಕಾದ ನೀರು ಬರುತ್ತಿಲ್ಲ. ಮೇಲಾಗಿ ಈ ವರ್ಷ ಮುಂಗಾರು ಮಳೆಯು ಕೂಡ ಸಂಪೂರ್ಣವಾಗಿ ವಿಫಲವಾಗಿದೆ. ಈ ಹಿಂದೆ ಹಿಂಗಾರಿ ಮಳೆಯು ಅಲ್ಪಪ್ರಮಾಣದಲ್ಲಿ ಆದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸುಮಾರು 10 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿ.ಟಿ. ಹತ್ತಿ, ಗೋವಿನಜೋಳ, ಸೂರ್ಯಕಾಂತಿ, ಗೋದಿ, ಕಡ್ಲಿ ಬೀಜ ಬಿತ್ತನೆ ಮಾಡಿದ್ದಾರೆ. ಈ ಬೆಳೆ ಸದ್ಯ ನೀರಿಲ್ಲದೇ ಒಣಗುತ್ತಿದೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕಾಲುವೆಗೆ ಸಮರ್ಪಕವಾಗಿ ನೀರನ್ನು ಬಿಡುವ ವರೆಗೂ ಕಚೇರಿಯ ಬೀಗ ತೆಗೆಯುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಮೇಶ ಮಾತನಾಡಿ, ಈ ಕುರಿತು ಕೂಡಲೇ ಚರ್ಚಿಸಿ ಕಾಲುವೆಗೆ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಈ ಸಂದರ್ಭದಲ್ಲಿ ಕಿರಿಯ ಅಭಿಯಂತರ ಗುರುಪ್ರಸಾದ, ಬಸವಂತಪ್ಪ ಹಾದಿಮನಿ, ಅಶೋಕ ಕಲಹಾಳ, ಅಶೋಕ ಹಾದಿಮನಿ, ಯಲ್ಲಪ್ಪ ಚಲವಾದಿ, ಶಿವಪ್ಪ, ಮಲ್ಲಪ್ಪ ಮಾಳವಾಡ, ಬುಡ್ನೆಸಾಬ ತಹಸೀಲ್ದಾರ್, ಸಿದ್ದಯ್ಯ ಹಂಪಿಮಠ ಮುಂತಾದವರು ಉಪಸ್ಥಿತರಿದ್ದರು.