ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಿತ್ತ ಪೈಪ್‌ಲೈನ್: ನೀರಿಗೆ ಬರ

Lingaraj Badiger
Updated On : 4 Dec 2013, 11:54 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 3
ಮುಂಡರಗಿ ಪಕ್ಕದ ಕೊರ್ಲಹಳ್ಳಿ ಹತ್ತಿರ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದರೂ 15 ದಿನಗಳಿಂದ ಪಟ್ಟಣದ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆ ಎದುರಾಗಿದೆ.
ಗದಗ-ಮುಂಡರಗಿ ರಸ್ತೆ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಮುಂಡರಗಿಯ ಜಲಮಂಡಳಿ ಕಚೇರಿಯಿಂದ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಸರಬರಾಜು ಆಗುವ ತುಂಗಭದ್ರಾ ನದಿ ನೀರಿನ ಪೈಪ್‌ಲೈನ್ ರಸ್ತೆ ಪಕ್ಕದಲ್ಲೇ ಇರುವುದರಿಂದ ಕಾಮಗಾರಿಯ ವೇಳೆ ಪೈಪ್‌ಲೈನ್ ಕಿತ್ತು ಹೋಗಿದ್ದೇ ಈ ತೊಂದರೆಗೆ ಕಾರಣ ಎನ್ನಲಾಗುತ್ತಿದೆ. ಪಟ್ಟಣದಲ್ಲಿ ಮೊದಲು ಬಹುತೇಕ ಕೆಲವು ವಾರ್ಡ್‌ಗಳಲ್ಲಿ 1 ದಿನ ಕುಡಿಯುವ ನೀರು, ಮತ್ತೊಂದು ದಿನ ಬಳಕೆ ನೀರು ಸರಬರಾಜು ಆಗುತ್ತಿತ್ತು. ಇನ್ನು ಕೆಲವು ವಾರ್ಡ್‌ಗಳಲ್ಲಿ ಕೇವಲ ಕುಡಿಯುವ ನೀರು ಮಾತ್ರ ಸರಬರಾಜು ಆಗುತ್ತಿತ್ತು. ಒಂದು ದಿನ ಕುಡಿಯುವ ನೀರು, ಒಂದು ದಿನ ಬಳಕೆ ನೀರು ಬರುತ್ತಿದ್ದರಿಂದ ಅಷ್ಟೊಂದು ನೀರಿನ ಸಮಸ್ಯೆ ಕಂಡು ಬರುತ್ತಿರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಸರಿಯಾಗಿ ನೀರು ಬಾರದಿರುವುದು ಇಲ್ಲಿನ ಜನರನ್ನು ಚಿಂತೆಗೀಡು ಮಾಡಿದೆ. ತಾಲೂಕಿನಾದ್ಯಂತ ವಿವಿಧ ಗ್ರಾಮಗಳು ಸೇರಿದಂತೆ 18 ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಸುಮಾರು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಮುಂಡರಗಿ ಪಟ್ಟಣದಲ್ಲಿ ಮಾತ್ರ ಒಂದೇ ಒಂದು ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವಂತೆ ಇಲ್ಲಿನ ಸಾರ್ವಜನಿಕರು ಅನೇಕ ಬಾರಿ ಪುರಸಭೆಗೆ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪುರಸಭೆಯಲ್ಲಿ ಹಿಂದಿನ ಆಡಳಿತ ಮಂಡಳಿಯ ಅಧಿಕಾರಾವಧಿಯಲ್ಲಿ ಪುರಸಭೆ ಉದ್ಯಾನವನದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಉದ್ಯಾನವನದಲ್ಲಿರುವ ದೊಡ್ಡ ಮರಗಳನ್ನು ಕಡಿದು ಹಾಕಲಾಗಿತ್ತು. ಆದರೆ ಘಟಕ ಮಾತ್ರ ನಿರ್ಮಾಣವಾಗಿಲ್ಲ. ರು. 2ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರನ್ನು ಪಡೆಯಬೇಕಾದ ಇಲ್ಲಿನ ಜನತೆ ಖಾಸಗಿಯವರ ಹತ್ತಿರ 20 ಲೀಟರ್ ನೀರಿಗೆ ರು. 10, 15, 20 ಹೀಗೆ ಅವರು ನಿಗದಿಮಾಡಿದಷ್ಟು ಹಣ ನೀಡಿ ತರುತ್ತಿದ್ದಾರೆ.
ಟ್ಯಾಂಕರ್ ಮೂಲಕ ಸರಬರಾಜು: ಪಟ್ಟಣದಲ್ಲಿ ಕೇವಲ ಕುಡಿಯುವ ನೀರು ಮಾತ್ರ ಸರಬರಾಜು ಆಗುವ ವಾರ್ಡ್‌ಗಳಲ್ಲಿನ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪುರಸಭೆಯವರು ಪ್ರತಿ ದಿನ ಒಂದು ವಾರ್ಡಿಗೆ ತಮ್ಮ ಕಚೇರಿ ಟ್ಯಾಂಕರ್ ಮೂಲಕ ಬಳಕೆ ಮಾಡುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ. ವಾರ್ಡ್‌ಗಳು ಸಾಕಷ್ಟು ಬೆಳವಣಿಗೆಯಾಗಿರುವುದರಿಂದ ಒಂದು ವಾರ್ಡಿಗೆ ಒಂದು ಟ್ಯಾಂಕರ್ ನೀರು ಸಾಲುತ್ತಿಲ್ಲ. ಇದರಿಂದ ಸಾರ್ವಜನಿಕರು ನೀರಿಗಾಗಿ ಬೆಳಗ್ಗೆಯಿಂದಲೇ ಖಾಲಿಕೊಡಗಳನ್ನು ಪಾಳೆಯಲ್ಲಿ ಹಚ್ಚಿ ಟ್ಯಾಂಕರ್ ಬಂದಾಗ ನೀರಿಗಾಗಿ ನೂಕು ನುಗ್ಗುಲು ನಡೆದಿರುವುದು ಕಂಡು ಬರುತ್ತಿದೆ. ಬಸವೇಶ್ವರ ನಗರ, ಅನ್ನದಾನೀಶ್ವರ ನಗರ, ಹುಡ್ಕೋ ಕಾಲೋನಿ, ಸ್ವಾಮಿ ವಿವೇಕಾನಂದ ನಗರ, ಹೆಸರೂರ ಆಶ್ರಯ ಕಾಲೋನಿ, ವಿದ್ಯಾನಗರ ಸೇರಿದಂತೆ ಅನೇಕ ಭಾಗಗಳಲ್ಲಿ ತುಂಗಭದ್ರಾ ನೀರು ಪೊರೈಕೆಯಾಗದೇ ಇರುವುದರಿಂದ ಇಲ್ಲಿನ ಸಾರ್ವಜನಿಕರು ಕುಡಿಯುವ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.


ಪಟ್ಟಣದಲ್ಲಿ ಪೈಪ್‌ಲೈನ್ ಜೋಡಣೆ ಕೆಲಸ ಸಾಕಷ್ಟು ವಿಳಂಬವಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪೈಪ್‌ಲೈನ್ ಜೋಡಣೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿಲ್ಲ. ಶಾಸಕರು ಈ ಕೂಡಲೇ ಪೈನ್‌ಲೈನ್ ಕಾಮಗಾರಿ ಮಾಡುವವರಿಗೆ ಕಾಮಗಾರಿಯನ್ನು ಶೀಘ್ರ ಮುಗಿಸಲು ಎಚ್ಚರಿಕೆ ನೀಡುವ ಮೂಲಕ ಪಟ್ಟಣದ ಸಾರ್ವಜನಿಕರಿಗೆ ಆಗುತ್ತಿರುವ ನೀರಿನ ತೊಂದರೆಯನ್ನು ತಪ್ಪಿಸಬೇಕು.
 ಸುರೇಶ ಮಾಳೆಕೊಪ್ಪ
ಪುರಸಭೆ ಸದಸ್ಯ
ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮುಂಡರಗಿ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ತುಂಗಭದ್ರಾ ನದಿ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಹರಿದು ಹೋಗಿದ್ದು, ಹೊಸದಾಗಿ ಹಾಕಿದ ಪೈಪ್‌ಲೈನ್‌ಗೆ ಜೋಡಣೆ ಕಾರ್ಯ ಜೋರಾಗಿಯೇ ನಡೆದಿದೆ. ವಾರ್ಡ್‌ಗಳು ಹೆಚ್ಚಾಗಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ನೀರಿನ ತೊಂದರೆ ಇರುವ ವಾರ್ಡ್‌ಗಳಿಗೆ ಪುರಸಭೆ ಟ್ಯಾಂಕರ್ ಮೂಲಕ ಬಳಕೆ ಮಾಡುವ ನೀರನ್ನು ಸರಬರಾಜು ಮಾಡುತ್ತಿದ್ದು, ಮುಂದಿನ 2-3 ದಿನದಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಲಾಗುವುದು.
 ಎ.ಎಫ್. ನದಾಫ
ಪುರಸಭೆ ನೀರು ಸರಬರಾಜು ವಿಭಾಗದ ಅಧಿಕಾರಿ
- ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement