ಜನರಲ್ಲಿ ಏಡ್ಸ್ ಜಾಗೃತಿ ಮೂಡಿಸಿ: ವಿ.ಎಫ್. ಅಂಗಡಿ
ಮುಂಡರಗಿ: ಮದ್ದಿಲ್ಲದೇ ಮಸಣಕ್ಕೆ ಒಯ್ಯುವ ರೋಗ ಏಡ್ಸ್. ಅದು ಹೆಗಲೇರಿ ಬಂದಾಗ ಅದನ್ನು ಇಳಿಸಲು ಪ್ರಯತ್ನಿಸುವುದಕ್ಕಿಂತ ಅದು ನಮ್ಮತ್ತ ಸುಳಿಯದಂತೆ ಮುಂಜಾಗ್ರತೆ ವಹಿಸುವುದು ಅವಶ್ಯವಾಗಿದೆ ಎಂದು ಜ. ಅನ್ನದಾನ ಸಂಯುಕ್ತ ಪಪೂ ಕಾಲೇಜಿನ ಪ್ರಾಚಾರ್ಯ ವಿ.ಎಫ್. ಅಂಗಡಿ ಹೇಳಿದರು.
ಅವರು ಸ್ಥಳೀಯ ಜ. ಅನ್ನದಾನ ಸಂಯುಕ್ತ ಪಪೂ ಕಾಲೇಜು ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಇವುಗಳ ಆಶ್ರಯದಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಡ್ಸ್ ಒಂದು ಭಯಾನಕ ಕಾಯಿಲೆ. ಹದಿಹರೆಯದವರು ತಿಳಿವಳಿಕೆಯ ಕೊರತೆಯಿಂದ ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ ಎಂದರು. ಇಂಗ್ಲಿಷ ಉಪನ್ಯಾಸಕಿ ರಾಜೇಶ್ವರಿ ಇನಾಮದಾರ ಮಾತನಾಡಿ, ನಮ್ಮ ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಇಂದು ಏಡ್ಸ್ನಂತಹ ಭಯಾನಕ ರೋಗಕ್ಕೆ ತುತ್ತಾಗಿದ್ದು, ಈ ರೋಗಕ್ಕೆ ಸಂಪೂರ್ಣ ವಾಸಿಯಾಗುವಂತಹ ಯಾವುದೇ ಔಷಧಿಯಿಲ್ಲ. ಜಾಗೃತಿ ಮತ್ತು ಮುನ್ನೆಚ್ಚರಿಕೆಯೇ ಇದಕ್ಕೆ ದಿವ್ಯ ಔಷಧಿಯಾಗಿದೆ. ಏಡ್ಸ್ ಬಂದವರನ್ನು ಮುಟ್ಟುವುದರಿಂದ ಮತ್ತು ಅವರ ಜತೆಗೆ ಮಾತನಾಡುವುದರಿಂದ ಈ ರೋಗ ಬರುವುದಿಲ್ಲ. ಏಡ್ಸ್ ರೋಗಿಗಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಏಡ್ಸ್ ರೋಗದ ಲಕ್ಷಣಗಳು, ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಿದರು. ಎನ್.ಎಫ್. ಅಕ್ಕೂರ ಮುಂತಾದವರು ಉಪಸ್ಥಿತರಿದ್ದರು. ಎನ್ಎಸ್ಎಸ್ ಅಧಿಕಾರಿ ಸಿ.ಎಸ್. ಅರಸನಾಳ ಸ್ವಾಗತಿಸಿದರು. ಸ್ವಯಂ ಸೇವಕ ಲಕ್ಷ್ಮಣ ಮುರಡಿ ನಿರೂಪಿಸಿದರು. ಪ್ರಸಾದ ವಂದಿಸಿದರು.