ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದುರವಸ್ಥೆಯತ್ತ ದೇಗುಲಗಳು

Lingaraj Badiger
Updated On : 4 Dec 2013, 11:36 am

ಗಜೇಂದ್ರಗಡ: ಐತಿಹಾಸಿಕ ಪರಂಪರೆಯ ಹಿನ್ನೆಲೆಯುಳ್ಳ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕವಾಗಿ ಹೆಸರಾಗಿದ್ದ ಸಮೀಪದ ಸೂಡಿ ಗ್ರಾಮದ ಐತಿಹಾಸಿಕ ದೇಗುಲಗಳು ಸೂಕ್ತ ನಿರ್ವಹಣೆ ಇಲ್ಲದೆ ಹಾಗೂ ನಿರ್ಲಕ್ಷ್ಯದಿಂದ ಈಗ ಜೂಜಾಟ, ಮದ್ಯ ಸೇವಿಸುವಂತಹ, ದೇಗುಲ ಹೊರ ಆವರಣದಲ್ಲಿ ಜಾನುವಾರು ಮೇಯಿಸಿ ಗಲೀಜು ಮಾಡುತ್ತಿದ್ದು, ಅನೈತಿಕ ಚಟುವಟಿಕೆ ತಾಣವಾದಂತಾಗಿವೆ.
ಗ್ರಾಮದ ಬಸ್ ನಿಲ್ದಾಣ ಪಕ್ಕದಲ್ಲಿ ಪ್ರಾಚ್ಯವಸ್ತು ಇಲಾಖೆ ನಿರ್ವಹಣೆಯಲ್ಲಿರುವ ಐತಿಹಾಸಿಕ ನಂದಿ ಈಶ್ವರ ಲಿಂಗ ವಿಗ್ರಹ, ನಾಗಕುಂಡ, ಹಂಪಿ ಮಾದರಿಯ ಬೃಹದಾಕಾರದ ಏಕಶಿಲೆಯ ಐತಿಹಾಸಿಕ ಕಡಲೆ ಕಾಳು ಗಣಪತಿ ದೇಗುಲ ಆವರಣ ದನಕುರುಗಳ ವಾಸಸ್ಥಾನವಾಗಿದೆ. ಜತೆಗೆ ನಾಗಕುಂಡ ಪುಷ್ಕರಿಣಿಯಲ್ಲಿ ಇಸ್ಫೀಟ್, ಎಲ್ಲೆಂದರಲ್ಲಿ ಮದ್ಯ ಬಾಟಲಿ, ಸಿಗರೇಟ್ ಸೇದಿ ಬಿಸಾಡಿರುವ ತುಣುಕುಗಳು ಬಿದ್ದು ಅವ್ಯವಸ್ಥೆ ಮಿತಿ ಮೀರುತ್ತಿದೆ. ಇದರ ಸೂಕ್ತ ನಿರ್ವಹಣೆ ಮಾಡದ ಆಡಳಿತದ ಬಗ್ಗೆ ಜನರಲ್ಲಿ ಬೇಸರ ಮೂಡಿದೆ.
ಚರಿತ್ರೆಯ ಕೀರ್ತಿ ಮೆರೆಯುತ್ತಿರುವ ಅದ್ಭುತ ಶಿಲ್ಪಕಲಾ ಸಂಪತ್ತು ಸರ್ವ ಸಮೂದಾಯ ಸಕಲ ವಿದಧ ಉತ್ತಮ ಚಟುವಟಿಕೆ ಜತೆಗೆ ಎಲ್ಲ ಆಗು ಹೋಗುಗಳ ಕೇಂದ್ರವಾಗಿದ್ದವು. ಇಂತಹ ಸ್ಮಾರಕಗಳು ಪ್ರಾಚ್ಯವಸ್ತು ಸಂಗ್ರಹಾಲಯ ಸುಪರ್ದಿಯಲ್ಲಿವೆ. ಆದರೆ, ಸೂಕ್ತ ನಿರ್ವವಣೆ ಇಲ್ಲದೇ ಕೆಲ ದುಷ್ಕರ್ಮಿಗಳ ಅಟ್ಟಹಾಸಕ್ಕೆ ನಲುಗುತ್ತಿರುವುದು ವಿಪರ್ಯಾಸ. ಐತಿಹಾಸಿಕ ದೇವಾಲಯಗಳು ಪ್ರಾಚೀನ ಕಾಲದ ಕುರುಹುಗಳಾಗಿವೆ. ದೇವಾಲಯಗಳ ನಿರ್ಮಾಣವನ್ನು ರಾಜರು, ಗ್ರಾಮದ ಗಣ್ಯರು ಕೂಡಿ ಮಾಡಿದ್ದಾರೆ. ಹೀಗೆ 10ನೇ ಶತಮಾನದ ಚಾಲಕ್ಯ ರಾಣಿ ಅಕ್ಕಾದೇವಿಯ ರಾಜಧಾನಿಯಾಗಿದ್ದ ಸೂಡಿ ಅತ್ಯಂತ ಉಚ್ಚಾರ್ಯ ಸ್ಥಿತಿಯಲ್ಲಿ ಮೆರೆಯುತ್ತಿರುವಾಗ ನಿರ್ಮಾಣಗೊಂಡಿರುವ ಅದ್ಭುತ ಶಿಲ್ಪಕಲೆಗಳು ಭಾರತೀಯ ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷಕ್ಕೊಳಗಾಗಿ ದುಸ್ಥಿತಿಯಲ್ಲಿವೆ.
ದೇಗುಲ ಶಿಥಿಲಾವಸ್ಥೆ: ಕಲ್ಯಾಣದ ಚಾಲುಕ್ಯರ ಆಳ್ವಿಕೆ ಕಾಲದಲ್ಲಿ 200 ವರ್ಷಗಳವರೆಗೆ ವ್ಯಭವಯುತವಾಗಿದ್ದ ಗ್ರಾಮದ ಶಿಲ್ಪಕಲಾ ಸಂಪತ್ತಿನಲ್ಲಿ ಅತ್ಯಂತ ಆಕರ್ಷಣೀಯ ಶಿಲೆಯ ಎರಡು ಗೋಪುರಗಳನ್ನು ಹೊಂದಿರುವ ಜೋಡುಗಳಸದ (ನಾಗೇಶ್ವರ) ದೇಗುಲ ನಿರ್ಲಕ್ಷ್ಯದಿಂದ ಶಿಥಿಲಾವಸ್ಥೆಯಲ್ಲಿದೆ. ದ್ರಾವಿಡ ಶೈಲಿಯ ದ್ವಿಕೂಟಾಚಲ ಮಾದರಿಯ ಈ ದೇವಾಲಯ ಎರಡು ಗರ್ಭಗ್ರಹಗಳನ್ನು ಹೊಂದಿದ್ದು, ಒಂದರಲ್ಲಿ ಅಪೂರ್ವ ಕೆತ್ತನೆಯ ಈಶ್ವರನ ಮೂರ್ತಿ ಕಂಗೊಳಿಸುತ್ತಿದೆ. ವೃತ್ತಾಕಾರದ ಹನ್ನೆರಡು ಶಿಲಾ ಸ್ಥಂಭಗಳ ಮಧ್ಯದ ನವರಂಗದಲ್ಲಿನ ನಂದಿಯ ವಿಗ್ರಹ ಹಾಗೂ ಒಂದು ಶಿಲಾಶಾಸನಕ್ಕೆ ಕಿಡಿಗೇಡಿಗಳು ಬಣ್ಣ ಬಳಿದು ವಿರೂಪಗೊಳಿಸಿ ಅವಸಾನದ ಅಂಚಿಗೆ ದೂಡಿರುವುದು ಇತಿಹಾಸಪ್ರೀಯರ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಐತಿಹಾಸಿಕ ಹಿನ್ನೆಲೆಯ ವಾಸ್ತು ಶಿಲ್ಪಗಳನ್ನು ಸಂರಕ್ಷಿಸುವತ್ತ ಗಮನ ಹರಿಸುವುದು ಅವಶ್ಯವಿದೆ.
-ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement