ವಚನ ಸಾಹಿತ್ಯ ಸಾರ್ವಕಾಲಿಕ
ಗದಗ: ಶರಣರು ಕಾಯಕ ಮತ್ತು ದಾಸೋಹಕ್ಕೆ ಮಹತ್ವದ ಸ್ಥಾನ ನೀಡಿದವರು. ಅವರ ವಚನ ಸಾಹಿತ್ಯ, ತತ್ವ ಸಂದೇಶ ಸರ್ವಕಾಲಕ್ಕೂ ಪ್ರಸ್ತುತ ಎಂದು ಶಿವಲಿಂಗಯ್ಯ ಶಾಸ್ತ್ರೀಗಳು ಸಿದ್ದಾಪುರ ಅಭಿಪ್ರಾಯ ಪಟ್ಟರು.
ಅವರು ಈಚೆಗೆ ತಾಲೂಕಿನ ರಾಮೇನಹಳ್ಳಿಯ ಮಾರುತಿ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗದಗ ಸ್ಥಳೀಯ ಪ್ರಾಯೋಜಿತ ಕಾರ್ಯಕ್ರಮ ಯೋಜನೆಯಡಿ ಏರ್ಪಡಿಸಿದ್ದ ಕಥಾ ಕೀರ್ತನ ಕಾರ್ಯಕ್ರಮದಲ್ಲಿ ಶರಣ ಹರಳಯ್ಯನವರ ಕುರಿತು ಕಥಾ ಕೀರ್ತನ ನೆರವೇರಿಸಿ ಮಾತನಾಡಿದರು.ಸಮಾಜದಲ್ಲಿನ ಅಂಕುಡೊಂಕುಗಳನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ಭಕ್ತಿ ರಸಗಳೊಂದಿಗೆ ಬೆರೆಸಿ ವಚನಗಳ ಮೂಲಕ ಸಮಾಜವನ್ನು ತಿದ್ದುವ, ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಸಮಗಾರ ಹರಳಯ್ಯನವರ ಕಾರ್ಯ ಬಹಳ ದೊಡ್ಡದು ಎಂದರು. ಅಧ್ಯಕ್ಷತೆವಹಿಸಿದ್ದ ರಾಮೇನಹಳ್ಳಿಯ ಮಾಜಿ ಸದಸ್ಯ ಬನ್ನೆಪ್ಪ ಗುರುಸಿದ್ಧಪ್ಪ ಬಚ್ಚೇನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮೇನಹಳ್ಳಿ ಗ್ರಾಪಂ ಸದಸ್ಯ ಹುಲ್ಲಪ್ಪ ಪೂಜಾರ ಮುಂತಾದವರು ಪಾಲ್ಗೊಂಡಿದ್ದರು. ಗಾಯಕ ಶಂಕ್ರಯ್ಯ ಗುರುಮಠ ಅವರಿಂದ ಗಾಯನ ಜರುಗಿತು. ಸಂತೋಷಕುಮಾರ್ ಕೊಡ್ಲಿ ತಬಲಾ ಸಾಥ್ ನೀಡಿದರು. ಯಲ್ಲಪ್ಪ ಮೇಟಿ ಸ್ವಾಗತಿಸಿದರು. ಮರಿಯಪ್ಪ ಬಚ್ಚೇನಹಳ್ಳಿ ನಿರೂಪಿಸಿ, ವಂದಿಸಿದರು.