ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಲಾಟರಿ ಮೂಲಕಫಲಾನುಭವಿಗಳ ಆಯ್ಕೆ

Vishwanath S
Updated On : 5 Dec 2013, 11:08 am

ಗದಗ: 2012-13ನೇ ಸಾಲಿನಲ್ಲಿ ರೋಣ ತಾಲೂಕಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಕಾರ್ಯಕ್ರಮದ ತ್ವರಿತ ಮೇವು ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತವಾಗಿ ವಿವಿಧ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಲು ಡಿ. 6ರಂದು ಮಧ್ಯಾಹ್ನ 1 ಗಂಟೆಗೆ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಉಚಿತ ಮೇವು ಕೊಯ್ಲು ಉಪಕರಣ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸದ ರೈತರನ್ನು ಫಲಾನುಭವಿಗಳ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸದ ರೈತ ಬಾಂಧವರು ಅಂದು ರೋಣ ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಗೆ ಹಾಜರಿರಲು ರೋಣದ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಧನ
ಗದಗ:  ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡುವ ಅರ್ಹ ಬಿಪಿಎಲ್, ಅರ್ಹ ಎಪಿಎಲ್ ಕುಟುಂಬಗಳಿಗೆ ರು. 4700 ಪ್ರೋತ್ಸಾಹಧನವನ್ನು ವಿತರಿಸಲಾಗುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವ ಅರ್ಹ ಬಿಪಿಎಲ್ ಕುಟುಂಬಗಳಿಗೆ ರು. 4500 ಅನುದಾನ ವಿತರಿಸಲಾಗುವುದು. ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಇಚ್ಛಿಸುವ ಕುಟುಂಬದವರು, ಸಂಬಂಧಪಟ್ಟ ಗ್ರಾಪಂಗೆ ಅರ್ಜಿ ಸಲ್ಲಿಸಿ, ಶೌಚಾಲಯ ನಿರ್ಮಾಣದ ನಂತರ ಈ ಅನುದಾನದ ಪ್ರಯೋಜನವನ್ನು ಪಡೆಯಬಹುದಾಗಿದೆ ಎಂದು ಸಿಇಓ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬೈಕ್ ರ್ಯಾಲಿ
ಲಕ್ಷ್ಮೇಶ್ವರ:  ನವಭಾರತ ಕಟ್ಟೋಣ ಬನ್ನಿ, ನರೇಂದ್ರ ಮೋದಿಯನ್ನು ಬೆಂಬಲಿಸೋಣ ಬನ್ನಿ ಎನ್ನುವ ಉದ್ದೇಶದೊಂದಿಗೆ ಪಟ್ಟಣದ ನಮೋ ಬ್ರಿಗೇಡ್‌ನಿಂದ ಯುಥ್ ಬೈಕ್ ರ್ಯಾಲಿಯು ಡಿ. 5ರ ಬೆಳಗ್ಗೆ 11ಕ್ಕೆ ಪ್ರಾರಂಭವಾಗುತ್ತದೆ ಎಂದು ಸಂಘಟನೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಟ್ಟಣದ ಸೋಮೇಶ್ವರ ತೇರಿನ ಮನೆಯಿಂದ ಆರಂಭವಾಗುವ  ಬೈಕ್ ರ್ಯಾಲಿಯು  ಹಲವು ಪ್ರದೇಶಗಳಲ್ಲಿ ಸಂಚರಿಸಿ ಲಕ್ಷ್ಮೀಲಿಂಗನ ದೇವಸ್ಥಾನಕ್ಕೆ ಮರಳಿ ಮುಕ್ತಾಯಗೊಳ್ಳುವುದು.  
ಸುಶೀಲಾಬಾಯಿ ನಿಧನ
ನರಗುಂದ:  ಪಟ್ಟಣದ ದಂಡಾಪುರ ಓಣಿಯ ಸುಶಿಲಾಬಾಯಿ ಪೂಜಾರ (65) ಈಚೆಗೆ ನಿಧನರಾದರು. ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಕನ್ನಡಕ್ಕೆ 2 ಸಾವಿರ ವರ್ಷದ ಇತಿಹಾಸ
ನರಗುಂದ:  ಭಾಷೆಯಲ್ಲಿ ಅತಿ ಶ್ರೀಮಂತ ಭಾಷೆ ಕನ್ನಡ ಭಾಷೆ. ಈ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸ ಇದೆ. ಇಂತಹ ಭಾಷೆಯಲ್ಲಿ ಶರಣರು ಹಲವಾರು ಗ್ರಂಥ ರಚಿಸಿದ್ದಾರೆಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗಶ್ರೀಗಳು ಹೇಳಿದರು.
ಅವರು ಪಟ್ಟಣದ ಪತ್ರೀವನಮಠದಲ್ಲಿ ನಿಜಗುಣ ಶಿವಯೋಗಿಗಳ 535ನೇ ಜಯಂತ್ಯುತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು. ಪತ್ರೀವನ ಮಠದ ಸಿದ್ದವೀರ ಶ್ರೀಗಳು ಮಾತನಾಡಿ, ಆಧ್ಯಾತ್ಮ ಜ್ಞಾನ ಎಲ್ಲಾ ಜ್ಞಾನಕ್ಕಿಂತ ದೊಡ್ಡದು. ಇಂಥ ಜ್ಞಾನವನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕೆಂದರು. ಕಗಧಾಳದ ವೀರಭದ್ರಯ್ಯ ಶಾಸ್ತ್ರೀಗಳು ಮಾತನಾಡಿದರು. ಇದೇ ಸಂದರ್ಭ ಸಂಗೀತ ಕಾರ್ಯಕ್ರಮಗಳು ಜರುಗಿದವು. ತುಪ್ಪದ ಕುರಹಟ್ಟಿ ವಾಗೀಶ ಶ್ರೀಗಳು, ಎಫ್.ಆರ್. ಪಾಟೀಲ, ವೆಂಕಣ್ಣ ಹೂಲಿ, ಶೇಷಣ್ಣ ಶಿಂಧೆ, ದ್ಯಾಮಣ್ಣ ಸವದತ್ತಿ ಹಾಜರಿದ್ದರು. ಶ್ರೀನಿವಾಸ ಇನಾಮದಾರ ಸ್ವಾಗಿತಿಸಿದರು. ಶಂಕ್ರಪ್ಪ ಹೂಗಾರ ನಿರೂಪಿಸಿ, ವಂದಿಸಿದರು.
ಸಂಗೀತದಿಂದ ದುಃಖ ದೂರ
ಲಕ್ಷ್ಮೇಶ್ವರ: ಸಂಗೀತವು ಮನಸ್ಸಿನ ದುಃಖವನ್ನು ದೂರ ಮಾಡಿ ನೆಮ್ಮದಿಯನ್ನು ನೀಡುತ್ತದೆ. ದೇವರನ್ನು ಒಲಿಸಿಕೊಳ್ಳಲು ಸಂಗೀತದಿಂದ ಸಾಧ್ಯವಿದೆ ಎಂದು ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ ಹೇಳಿದರು.
ಪಟ್ಟಣದ ಶಾರದಾ ಸಂಗೀತ ಕಲಾ ಬಳಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಸಂಜೆ ಶಾಂತಯ್ಯ ಶಿಗ್ಲಿಮಠ ಇವರ ಕಟ್ಟಡದಲ್ಲಿ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರೊ. ವಸಂತ ಸವದಿ ಮಾತನಾಡಿ, ಸಂಗೀತಕ್ಕೆ ಪ್ರೋತ್ಸಾಹಕರು ಕಡಿಮೆಯಾಗುತ್ತಿರುವುದು ಸಂಗೀತ ಸೊರಗುವುದಕ್ಕೆ ಕಾರಣವಾಗಿದೆ. ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹವನ್ನು ನೀಡುವ ಕಾರ್ಯವನ್ನು ನಾವು ಮಾಡಬೇಕಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೂಡಾ ಎಲೆಮರೆಯ ಕಾಯಂತೆ ಉಳಿದಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕಿದೆ ಎಂದು ಹೇಳಿದರು.  ಸಾಹಿತಿ ಪೂರ್ಣಾಜಿ ಖರಾಟೆ ಮಾತನಾಡಿದರು. ಕುಂದಗೋಳದ ಹನಮಂತಪ್ಪ ಅಳಗೋಡಿ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ ಕಾರ್ಯಕ್ರಮವು ಜರುಗಿತು. ಪುರಸಭೆಯ ಸದಸ್ಯ ಸೋಮಣ್ಣ ಸುತಾರ, ಶಾಂತಯ್ಯ ಶಿಗ್ಲಿಮಠ, ವಿ.ವಿ. ಗೊಲ್ಲರ
ಮೊದಲಾದವರು ಹಾಜರಿದ್ದರು. ನಾಗರಾಜ ಹಣಗಿ ಸ್ವಾಗತಿಸಿ, ನಿರೂಪಿಸಿದರು. ಅಶೋಕ ಸೊರಟೂರ ವಂದಿಸಿದರು.
ಶಾದಿಭಾಗ್ಯದಿಂದ ದ್ವೇಷ ನಿರ್ಮಾಣ
ಗದಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಶಾದಿಭಾಗ್ಯ ಯೋಜನೆ ಜಾರಿಗೆ ತಂದಿರುವುದು ಖಂಡನಾರ್ಹವಾಗಿದೆ. ಈ ಯೋಜನೆ ಜಾರಿಯಾದಲ್ಲಿ ರಾಜ್ಯದಲ್ಲಿರುವ ಎಲ್ಲ ಸಮಾಜದ ಜನರಲ್ಲಿ ದ್ವೇಷ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಹೇಳಿದರು. ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ತಾರತಮ್ಯವಿಲ್ಲದೇ ಆಡಳಿತ ನಡೆಸಬೇಕಾದ ರಾಜ್ಯ ಸರ್ಕಾರವು ಮುಂಬರುವ ಚುನಾವಣೆ ಗಮನದಲ್ಲಿಟ್ಟು, ಅಲ್ಪಸಂಖ್ಯಾತರ ವೋಟುಗಳನ್ನು ಗಮನದಲ್ಲಿಟ್ಟುಕೊಂಡು ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದಿರುವುದು ಖಂಡನಾರ್ಹ. ಬಡವರು ಎಲ್ಲ ಜಾತಿಯಲ್ಲಿದ್ದಾರೆ. ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೇ ಎಲ್ಲ ಜಾತಿ ವರ್ಗದವರಿಗೂ ವಿಸ್ತರಿಸಲಿ.  ಎಂದರು. ಸರ್ಕಾರವು ಮೂಢನಂಬಿಕೆ ನಿಷೇಧ ಕಾಯ್ದೆ ಹೆಸರಿನಲ್ಲಿ ರಾಜ್ಯ ಸರ್ಕಾರವು ಹಿಂದೂಗಳ ಧಾರ್ಮಿಕ ಭಾವನೆಗೆ ದಕ್ಕೆ ತರಲು ಹೊರಟಿದೆ. ಕರಡು ಪ್ರತಿಯನ್ನು ರಚಿಸುವ ಮೊದಲು ಸರ್ಕಾರವು ವಿವಿಧ ಮತ, ಸಂಪ್ರದಾಯ, ಶ್ರೀಗಳು ಹಾಗೂ ಧಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ನಿರ್ಣಯ ಕೈಗೊಳ್ಳಬೇಕಿತ್ತು. ವಿಶ್ವಹಿಂದೂ ಪರಿಷದ್, ಬಜರಂಗದಳ ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಜಾರಿಯಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ಶ್ರೀಧರ ಕುಲಕರ್ಣಿ, ಶಂಕರ ದಹಿಂಡೆ, ಮಾರುತಿ ಪವಾರ ಮುಂತಾದವರು ಇದ್ದರು.
ವಿದ್ಯಾರ್ಥಿಗಳಿಗೆ ಬಿ.ಇಡಿ. ಅಭ್ಯಸಿಸಲು ಅವಕಾಶ
ಗದಗ:  2013-14ನೇ ಸಾಲಿಗೆ ಅನ್ವಯವಾಗುವಂತೆ ಯುಜಿಸಿಯಿಂದ ಅಂಗೀಕೃತ ಪಡೆದ ಯಾವುದೇ ಪದವಿ ಅಂದರೆ ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಸಿಎ ಅಥವಾ ತತ್ಸಮಾನ ಪದವಿಯ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರಿಗೆ ಈ ವರ್ಷದಿಂದ ಬಿಇಡಿ ತರಗತಿ ಓದಲು ಅವಕಾಶ ಕಲ್ಪಿಸಿರುತ್ತಾರೆ. ಪದವಿಯಲ್ಲಿ ಶೇ. 50ರಷ್ಟು ಅಂಕ ಪಡೆಯದೇ ಇರುವ ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿಯಲ್ಲಿ ಶೇ. 50ರಷ್ಟು ಅಂಕ ಪಡೆದಿರಬೇಕು. ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಾಪುರ ಆದೇಶದ ಅನ್ವಯ ಈ ಪ್ರಕಟಣೆ ನೀಡಲಾಗಿದ್ದು, ಬಿಇಡಿ ತರಗತಿಯ ಪ್ರವೇಶದ ಮಾಹಿತಿಗಾಗಿ ಪ್ರಾಚಾರ್ಯರು ಶಾಸ್ತ್ರೀಜಿ ವಸತಿ ಶಿಕ್ಷಣ ಮಹಾವಿದ್ಯಾಲಯ ರಾಚೋಟೇಶ್ವರ ನಗರ, ಒಕ್ಕಲಗೇರಿ ಗದಗ ಅವರನ್ನು ಸಂಪರ್ಕಿಸಲು ತಿಳಿಸಲಾಗಿದೆ ಅಥವಾ ಮಹಾವಿದ್ಯಾಲಯದ ಕಾರ್ಯಾಲಯದ ವೇಳೆಯಲ್ಲಿ 9341028488 ಅಥವಾ 08372-220035 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಶಿಕ್ಷಕರ ಪಾತ್ರ ಪ್ರಮುಖ
ಮುಳಗುಂದ: ಸಾಂಸ್ಕೃತಿಕ ಕಾರ್ಯಗಳನ್ನು ಸಂಘಟಿಸುವು ಜತೆಗೆ ಪ್ರಾಥಮಿಕ ಹಂತದಿಂದಲೇ ಪ್ರತಿಭೆಗಳನ್ನು ಗುರುತಿಸಿ ಹೊರತರುವಲ್ಲಿ ಶಿಕ್ಷಕರ ಪಾತ್ರ ಮಹತ್ವವಿದ್ದು, ಅಂದಾಗ ಮಾತ್ರ ಉತ್ತಮ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಖಾಜಾಹುಸೇನ ಮುಧೋಳ ಅಭಿಪ್ರಾಯಪಟ್ಟರು.
ಅವರು ಈಚೆಗೆ ಸ್ಥಳೀಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಲಾದ ಗ್ರಾಮೀಣ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರತಿಭಾ ಕಾರಂಜಿಯಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಡುವುದರಿಂದ ಮಕ್ಕಳು ಉತ್ಸುಕತೆಯಿಂದ ಭಾಗವಹಿಸುವುದು ಅಗತ್ಯ ಎಂದರು. ಪಪಂ ಮುಖ್ಯಾಧಿಕಾರಿ ವಿ.ಜಿ. ಸುಲಾಕೆ ಮಾತನಾಡಿದರು. ವಿ.ವಿ. ವಾಲಿ, ಎಚ್.ಆರ್. ಸಕ್ಕರಿ, ಎಸ್.ಸಿ. ಅಮರಶೆಟ್ಟಿ, ವೈ.ಪಿ. ಸೋಮಾಪೂರ, ಬಿ.ಪಿ. ದೊಡ್ಡಮನಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ವಿವಿಧ ಶಾಲಾ ಮಕ್ಕಳು ಹಲವು ವೇಶಭೂಷಣ ಧರಿಸಿ ಉತ್ಸುಕತೆಯಿಂದ ಭಾಗವಹಿಸಿದ್ದು ಪ್ರಮುಖವಾಗಿತ್ತು. ಎಂ.ಎಂ. ಮೆಗಲಮನಿ ಪ್ರಾಸ್ತಾವಿಕ ಮಾತನಾಡಿದರು. ಸಿ.ಕೆ. ಪಾಟೀಲ ನಿರೂಪಿಸಿದರು. ಎಸ್.ಎಚ್. ಎರೆಸೀಮೆ ವಂದಿಸಿದರು.
ರಕ್ತದಾನದ ಅರಿವು ಅಗತ್ಯ
ಗದಗ: ರಕ್ತದಾನ ಮಾಡಿದರೆ ಅಶಕ್ತರಾಗುವುದಿಲ್ಲ, ಸಶಕ್ತರಾಗುತ್ತೇವೆ. ರಕ್ತದಾನ ಮಾಡುವ ಬಗ್ಗೆ ಎಲ್ಲರೂ ಅರಿವು ಪಡೆಯಬೇಕು ಎಂದು ಹಮ್ಮಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಹೇಳಿದರು. ನೆಹರು ಯುವ ಕೇಂದ್ರ, ಗದಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಘಟಕ, ರೆಡ್ ಕ್ರಾಸ್ ಸಂಸ್ಥೆ, ಐಎಂಎ ರಕ್ತನಿಧಿ, ಕೊರ್ಲಹಳ್ಳಿ ಗ್ರಾಮ ಪಂಚಾಯಿತಿ, ಕೊರ್ಲಹಳ್ಳಿಯ ಅರುಣೋದಯ ಯುವಕ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ನಿರ್ಮಲ ಗ್ರಾಮ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು. ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ಗೋಡಬೋಲೆ, ಗ್ರಾಪಂ ಅಧ್ಯಕ್ಷ ಪರಶುರಾಮ ಸಿಳ್ಳಿಕ್ಯಾತರ, ಮಾರುತಿ ಎಸ್. ಶಾಸ್ತ್ರಿ, ಡಾ. ಶಿವಪುರ, ಕೊಟ್ರಗೌಡ ಪಾಟೀಲ ಉಪಸ್ಥಿತರಿದ್ದರು.
ಇಂದು ಸಿಪಿಐ(ಎಂ)ನಿಂದ ಧರಣಿ ಸತ್ಯಾಗ್ರಹ
ಗಜೇಂದ್ರಗಡ:  ಪಟ್ಟಣದ ನೈರ್ಮಲ್ಯ ಮನೆ, ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಶುದ್ಧ ಕುಡಿಯುವ ನೀರಿನ ಘಟಕ ಪುನರಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಡಿ. 5ರ ಬೆಳಗ್ಗೆ 11ಕ್ಕೆ ಸ್ಥಳೀಯ ಸಾರ್ವಜನಿಕ ಗ್ರಂಥಾಲಯ ಎದುರಿನ ಬಯಲು ಜಾಗೆಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಪಕ್ಷದ ನಗರ ಕಾರ್ಯದರ್ಶಿ ಬಾಲು ರಾಠೋಡ ಹೇಳಿದರು. ಅವರು ಬುಧವಾರ ಪಟ್ಟಣದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಹಲವು ತಿಂಗಳಿಂದ ಪುರಸಭೆ ವತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಪುರಸಭೆ ಸದಸ್ಯರು ಬರಿ ಕಚ್ಚಾಟದಲ್ಲೆ ಕಾಲಹರಣ ಮಾಡುತಿದ್ದಾರೆಂದು ಆರೋಪಿಸಿದರು. ಸ್ಥಳೀಯ ಜನತಾ ಪ್ಲಾಟ್, ಉಣಚಗೇರಿಯ ನಿವಾಸಿಗಳಿಗೆ ಮನೆ ಹಕ್ಕುಪತ್ರ, 2012-13ನೇ ಸಾಲಿನ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ 1386 ಅರ್ಹ ಕುಟುಂಬಗಳ ವಸತಿಯ ಜೆಪಿಎಸ್ ಸಮೀಕ್ಷೆ ಪೂರ್ಣಗೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ, ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ತಕ್ಷಣವೇ ಪರಿಹಾರ ಹಣ ವಿತರಣೆ ಪುರಸಭೆಯಲ್ಲಿ ಗುತ್ತಿಗೆ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ಕೂಲಿ ಇತರೆ ಸೌಲಭ್ಯ ಸರ್ಕಾರದ ನಿಯಮಾವಳಿ ಪ್ರಕಾರ ಜಾರಿಗೊಳಿಸಬೇಕೆಂದರು. ಸಿಪಿಐ(ಎಂ)  ಬಿ.ಎಸ್. ಶೀಲವಂತರ, ಪೀರು ರಾಠೋಡ, ಕಳಕೇಶ ಉಕ್ಕಿಸಲು, ಫಯಾಜ ತೋಟದ, ಸಕ್ರಪ್ಪ ಮಾಳೋತ್ತರ, ಕುಬೇರ ಅಜಮೀರ, ರಜಾಕ್ ಗೋಡೆಕಾರ, ಮಾನವ್ವ ರಾಠೋಡ ಇದ್ದರು.
ಕನ್ನಡ ಭಾಷೆ ಪ್ರಗತಿಗೆ ಶ್ರಮಿಸಿ: ಗಂಗಮ್ಮ
ಲಕ್ಷ್ಮೇಶ್ವರ: ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಮನ್ನಣೆ ದೊರಯಬೇಕು. ಜ್ಞಾನಕ್ಕಾಗಿ ಬೇರೆ ಭಾಷೆಗಳನ್ನು ಕಲಿತರೂ ಮಾತೃಭಾಷೆಯಾಗಿ ಕನ್ನಡಕ್ಕೆ ಹೆಚ್ಚಿನ ಸ್ಥಾನಮಾನ ಸಿಗಬೇಕು ಎಂದು ಪುರಸಭೆಯ ಅಧ್ಯಕ್ಷೆ ಗಂಗಮ್ಮ ಫಕ್ಕಿರಸ್ವಾಮಿಮಠ ಹೇಳಿದರು.  ಅವರು ಶನಿವಾರ ಸಂಜೆ ಪಟ್ಟಣದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಸ್ವಾಭಿಮಾನಿ ಕನ್ನಡಿಗರ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಸರ್ಕಾರ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಕನ್ನಡ ಕಣ್ಮೆರೆಯಾಗುವ ದಿನಗಳು ದೂರವಿಲ್ಲ ಎಂದರು. ಸಾಹಿತಿ ಡಾ. ಎಸ್.ವಿ. ತಮ್ಮನಗೌಡರ ಮಾತನಾಡಿ, ಕನ್ನಡ ಭಾಷೆಯ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ  ತೋರಿಸುತ್ತಿರುವುದನ್ನು ನಿಲ್ಲಿಸಬೇಕು. ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಸ್ಥಾನಗಳನ್ನು ಮೀಸಲು ಇಡುವ ಕಾರ್ಯವಾಗಬೇಕು. ರಾಜ್ಯಕ್ಕೆ ಕೇಂದ್ರದಿಂದ ಸಾಕಷ್ಟು ಅನ್ಯಾಯವಾಗುತ್ತಿದೆ. ಅದಕ್ಕಾಗಿ ಕನ್ನಡಿಗರು ಜಾಗ್ರತರಾಗಬೇಕಾಗಿದೆ ಎಂದರು. ಪುರಸಭೆಯ ಸದಸ್ಯ ಮಹೇಶ ಹೊಗೆಸೊಪ್ಪಿನ, ಪ್ರಶಾಂತ ನೆಲುವಿಗಿ, ಪ್ರೇಮ ಶೇಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆಯ ಉಪಾಧ್ಯಕ್ಷ ಎಂ.ಆರ್. ಪಾಟೀಲ, ಸದಸ್ಯ ಗಣೇಶ ಬೇವಿನಮರದ, ವಿಜಯ ಹತ್ತಿಕಾಳ, ಆನಂದ ವಾಚದಮಠ, ವೇದಿಕೆಯ ಅಧ್ಯಕ್ಷ ಬಸವರಾಜ ಹೊಗೆಸೊಪ್ಪಿನ ಉಪಸ್ಥಿತರಿದ್ದರು. ಅಶೋಕ ಹಳ್ಳಿಕೇರಿ ಸ್ವಾಗತಿಸಿದರು. ಕಿರಣ ನಾಯಕ ನಿರೂಪಿಸಿದರು. ಮಂಜುನಾಥ ಹೊತಗಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement