ಮಕ್ಕಳ ಗ್ರಾಮಸಭೆ ಯಶಸ್ವಿ
ಗದಗ: ತಾಲೂಕಿನ ಬಳಗಾನೂರ ಗ್ರಾಪಂ ವತಿಯಿಂದ ಸ್ಥಳೀಯ ಎಚ್‌ಪಿಕೆಬಿಎಸ್ ಶಾಲೆಯಲ್ಲಿ ಇತ್ತೀಚಿಗೆ ಮಕ್ಕಳ ಗ್ರಾಮಸಭೆ ಯಶಸ್ವಿಯಾಗಿ ಜರುಗಿತು.
ಗ್ರಾಪಂ ಅಧ್ಯಕ್ಷರು, ಸದಸ್ಯರ ಹಾಗೂ ಪಿಡಿಒ ಸಮ್ಮುಖದಲ್ಲಿ ಜರುಗಿದ ಮಕ್ಕಳ ಗ್ರಾಮಸಭೆಯಲ್ಲಿ ಶಾಲೆಗಳಲ್ಲಿ ಉದ್ಭವಿಸುವ ತೊಂದರೆಗಳ ಬಗೆಗೆ ಚರ್ಚಿಸಲಾಯಿತು.
ಶಾಲೆಗಳಲ್ಲಿನ ಕೊರತೆಗಳನ್ನು ನಿವಾರಿಸಿ ಮಕ್ಕಳ ಕಲಿಕೆಯಲ್ಲಿ ಪ್ರಗತಿಯಾಗುವಂತೆ ನೋಡಿಕೊಳ್ಳಬೇಕೆಂದು ಗ್ರಾಪಂ ಆಡಳಿತ ಮಂಡಳಿ ತಿಳಿಸಿತು.
ವಿದ್ಯಾರ್ಥಿ ಬಸವರಾಜ ಹೊಂಬಳ ಅಧ್ಯಕ್ಷತೆಯಲ್ಲಿ ಜರುಗಿದ ಮಕ್ಕಳ ಗ್ರಾಮಸಭೆಯಲ್ಲಿ ಪೂರ್ಣಿಮಾ ಗುರಿಕಾರ ಉಪಾಧ್ಯಕ್ಷರಾಗಿ ಹಾಗೂ ಇನ್ನೂಳಿದ ವಿದ್ಯಾರ್ಥಿಗಳು ಸದಸ್ಯರಾಗಿ ಭಾಗವಹಿಸಿದ್ದರು. ಸಭೆಯಲ್ಲಿ ಮುಖ್ಯವಾಗಿ ಶಾಲೆಯಲ್ಲಿ ಗ್ರಂಥಾಲಯ, ಆಟದ ಮೈದಾನದ ಅಭಿವೃದ್ಧಿ, ಸಮರ್ಪಕವಾದ ಶೌಚಾಲಯ, ದೈಹಿಕ ಶಿಕ್ಷಕರ ಕೊರತೆಯನ್ನು ನಿವಾರಿಸಬೇಕೆಂದು ಶಾಲಾ ವಿದ್ಯಾರ್ಥಿಗಳು ಬೇಡಿಕೆಗಳನ್ನು ತಿಳಿಸಿದರು. ಈ ಸಮಸ್ಯೆಗಳಿಗೆ ಸ್ಪಂದಿಸಿದ ಗ್ರಾಪಂ ಅಧ್ಯಕ್ಷೆ ಕಲಾವತಿ ಚಟ್ರಿ ಪರವಾಗಿ ಸದಸ್ಯ ಪ್ರಭುರಾಜು ಗೂಳರೆಡ್ಡಿ ಈ ಕುರಿತು ಸಮಾಲೋಚನೆ ನಡೆಸಿ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಗ್ರಾಪಂ ಮಟ್ಟದಲ್ಲಿ ಆಯೋಜಿಸಿದ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಸ್ವಚ್ಛತಾ ಉತ್ಸವ ಆಚರಣೆ ನಿಮಿತ್ತ ಜರುಗಿದ ಕಾರ್ಯಕ್ರಮದಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ಸ್ವಚ್ಚ ಹಾಗೂ ಸುಂದರ ಗ್ರಾಮ ನಿರ್ಮಾಣ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದರು.
ತಾಪಂ ಸದಸ್ಯ ಶೇಖಪ್ಪ ಅಗಸಿಮನಿ, ಸಿಆರ್‌ಪಿ ಬಿ.ವೈ. ಡೊಳ್ಳಿನ, ಗ್ರಾಪಂ ಸದಸ್ಯ ಪ್ರಭುರಾಜ ಗೂಳರೆಡ್ಡಿ, ಬಸವರಾಜ ಚಟ್ರಿ, ಶಾಂತಯ್ಯನಮಠ, ಪಿಡಿಒ ಎಸ್.ಎಸ್. ಅಂಗಡಿ, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯ, ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕ, ಶಿಕ್ಷಕಿಯರು, ಶಾಲಾ ಮಕ್ಕಳು ಮುಂತಾದವರು ಪಾಲ್ಗೊಂಡಿದ್ದರು. ಚಂದ್ರು ಗೌಳಿಯರ ನಿರೂಪಿಸಿ, ವಂದಿಸಿದರು.