ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶತಮಾನ ಕಂಡ ಶಾಲೆಗೆ ಸೌಲಭ್ಯಗಳೇ ಇಲ್ಲ

Vishwanath S
Updated On : 5 Dec 2013, 11:06 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ.4
ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಆಚರಿಸಿಕೊಂಡಿದ್ದು, ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಮಾತ್ರ ಮೂಲಸೌಲಭ್ಯವಿಲ್ಲದೇ ಶಿಕ್ಷಣದಿಂದ ವಂಚಿತರಾಗುತ್ತಿರುವುದು ಬೆಳಕಿಗೆ ಬಂದಿದೆ.
ಸರ್ಕಾರ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾರ್ಥಿಗಳ ಜಾತಿ, ಮತ, ಪಂಥ ಎಂಬ ಭೇದ ಭಾವವೆಣಿಸದೆ ಉತ್ತಮ ವ್ಯಕ್ತಿತ್ವ, ಭವಿಷ್ಯ ರೂಪಿಸಿಕೊಳ್ಳಲು ಎಲ್ಲ ವರ್ಗದ ಜನರಿಗೆ ಉಚಿತ ಸೈಕಲ್, ಕ್ಷೀರಭಾಗ್ಯ, ಬಿಸಿಯೂಟ ಯೋಜನೆ, ಶಿಷ್ಯವೇತನ, ಪಠ್ಯಪುಸ್ತಕ, ಸಮವಸ್ತ್ರ ಹೀಗೆ ಹತ್ತು ಹಲವು ಯೋಜನೆ ಜಾರಿಗೆ ತಂದಿದೆ.
ಶಾಲಾ ಕೊಠಡಿ ಮತ್ತು ಶೌಚಾಲಯ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ನೀಡುತ್ತಿದೆ. ಪ್ರತಿ ವರ್ಷವೂ ಶಾಲೆಗಳಿಗೆ ಸುಣ್ಣ-ಬಣ್ಣ, ಸಣ್ಣ-ಪುಟ್ಟ ರಿಪೇರಿ ಮತ್ತಿತರ ಖರ್ಚುವೆಚ್ಚಕ್ಕೆಂದು 15 ಸಾವಿರಕ್ಕೂ ಹೆಚ್ಚು ಹಣ ನೀಡುತ್ತಿದೆ. ಆದರೆ, ಸರಿಯಾಗಿ ಬಳಕೆ ಆಗುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಕೊಠಡಿಗಳೇ ಇಲ್ಲ: 1ರಿಂದ 7ನೇ ತರಗತಿ ವರೆಗೆ ಒಟ್ಟು 193 ಮಕ್ಕಳು ಓದುತ್ತಿದ್ದು, ಸುಸಜ್ಜಿತ ಕೊಠಡಿಗಳಿಲ್ಲ. ಶಾಲಾ ಕೊಠಡಿಗಳ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡುಬರುತ್ತಿರುವುದರಿಂದ ಇದ್ದ 5 ಕೊಠಡಿಗಳು ಸಂಪೂರ್ಣ ಹಾಳಾಗಿದ್ದು, ಕೊಠಡಿಗೆ ಹೊದಿಸಿದ ಹಂಚು (ಮೇಲ್ಚಾವಣಿ) ಕಿತ್ತು ಹೋಗಿದೆ. ಮಕ್ಕಳು ಜೀವ ಭಯದಲ್ಲಿ ಅಭ್ಯಸಿಸುವ ವಾತಾವರಣ ನಿರ್ಮಾಣವಾಗಿದೆ. 3 ವರ್ಗದ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡಿ ಹಾಕಿ ಪಾಠ ಹೇಳುವ ಸ್ಥಿತಿ ನಿರ್ಮಾಣವಾಗಿದೆ.
ಬಳಕೆಯಾಗದ ಡೆಸ್ಕ್: ಈ ಶಾಲೆಯಲ್ಲಿ ಸಿಬ್ಬಂದಿ ಕೊರತೆಯೂ ಎದ್ದು ಕಾಣುತ್ತಿದ್ದು, ಕೇವಲ 4 ಜನ ಖಾಯಂ ಹಾಗೂ ಓರ್ವ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿಯೂ 2 ಜನ ರಜೆ ಮೇಲೆ ಹೋಗಿದ್ದಾರೆ. ಮಕ್ಕಳ ಸಂಖ್ಯೆ ಗನುಗುಣವಾಗಿ ಇನ್ನು 3 ಜನ ಖಾಯಂ ಶಿಕ್ಷಕರ ಅಗತ್ಯವಿದೆ. ಶಾಲೆಗೆ ಪೂರೈಸಿದ ಡೆಸ್ಕ್‌ಗಳು ಇಲ್ಲಿಯ ಶಿಕ್ಷಕರ ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಬಳಕೆಯಾಗದೇ ಮೂಲೆಗುಂಪಾಗಿವೆ. ಮಕ್ಕಳು ನೆಲದ ಮೇಲೆ ಕುಳಿತು ಅಭ್ಯಸಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ಮಕ್ಕಳ ಪಾಲಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
2012-13ನೇ ಸಾಲಿನಲ್ಲಿ 16 ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಹೆಚ್ಚುವರಿ ಕೊಠಡಿ, 4 ಮುಖ್ಯೋಪಾಧ್ಯಾಯರ ಕೊಠಡಿ, 7 ಹೆಚ್ಚುವರಿ ಕೊಠಡಿ ಮಂಜೂರಾಗಿದ್ದು, ಶಾಲೆಗಳ ಅಗತ್ಯಕ್ಕೆ ಅನುಸಾರವಾಗಿ ಹಂಚಿಕೆ ಮಾಡಲಾಗಿದೆ. ಬನ್ನಿಕೊಪ್ಪ ಶಾಲೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹೆಚ್ಚುವರಿ ಕೊಠಡಿಯ ಅಗತ್ಯ ಇಲ್ಲದ್ದರಿಂದ ಅಲ್ಲಿ ಕೊಠಡಿ ಹಾಕಿರುವುದಿಲ್ಲ. ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದಾಗಿ ಅವ್ಯವಸ್ಥೆಯಾಗಿದ್ದು, ತುರ್ತಾಗಿ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
- ಆರ್.ಎಸ್. ಬುರಡಿ
ಕ್ಷೇತ್ರ ಶಿಕ್ಷಣಾಧಿಕಾರಿ
ಮಂಗಗಳ ಹಾವಳಿಯಿಂದಾಗಿ ಮೇಲ್ಚಾವಣಿಗೆ ಹೊದಿಸಿದ ಹೆಂಚುಗಳು ಕಿತ್ತು ಹೋಗಿವೆ. ಈಗಾಗಲೇ ಸರ್ವಶಿಕ್ಷಣ ಅಭಿಯಾನದ ಎಂಜಿನಿಯರ್‌ಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿಕೊಂಡು ಹೋಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಜತೆಗೆ ಗ್ರಾಪಂನವರು ರಿಪೇರಿ ಮಾಡಿಸಿ ಕೊಡುವುದಾಗಿ ಕ್ರಿಯಾ ಯೋಜನೆಯಲ್ಲಿ ಹಾಕಿಕೊಂಡಿದ್ದು, ಶೀಘ್ರದಲ್ಲಿಯೇ ಕೊಠಡಿಗಳ ರಿಪೇರಿ ಕಾರ್ಯ ಮಾಡಿಸಲಾಗುವುದು.
 ಗಿರೀಶ ಕೋಡಬಾಳ
ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ)



-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement