ನಿವೇಶನಗಳಿಗೆ ಹಕ್ಕುಪತ್ರ ವಿತರಣೆಗೆ ಆಗ್ರಹ
ಗಜೇಂದ್ರಗಡ: ಪಟ್ಟಣದ ನೈರ್ಮಲ್ಯ ಮನೆ, ನಿವೇಶನಗಳಿಗೆ ಹಕ್ಕುಪತ್ರ ವಿತರಣೆ ಜತೆ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಪುನಾರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಪಿಐ (ಎಂ) ಕಾರ್ಯಕರ್ತರು ಗುರುವಾರ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಎದುರಿನ ಬಯಲು ಜಾಗೆಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಈ ಸಂದರ್ಭದಲ್ಲಿ ಸಿಪಿಐ (ಎಂ) ಮುಖಂಡ ಮಾರುತಿ ಚಿಟಗಿ ಮಾತನಾಡಿ, ಪಟ್ಟಣದಲ್ಲಿ ಹಲವು ತಿಂಗಳಿಂದ ಪುರಸಭೆ ವತಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಪುರಸಭೆ ಸದಸ್ಯರು ಬರಿ ಕಚ್ಚಾಟದಲ್ಲೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಸ್ಥಳೀಯ ಜನತಾ ಪ್ಲಾಟ್, ಉಣಚಗೇರಿಯ ನಿವಾಸಿಗಳಿಗೆ ಮನೆ ಹಕ್ಕು ಪತ್ರ, 2012-13ನೇ ಸಾಲಿನ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ 1386 ಅರ್ಹ ಕುಟುಂಬಗಳ ವಸತಿಯ ಜೆಪಿಎಸ್ ಸಮೀಕ್ಷೆ ಪೂರ್ಣಗೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ, ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ತಕ್ಷಣವೇ ಪರಿಹಾರ ಹಣ ವಿತರಣೆ, ಪುರಸಭೆಯಲ್ಲಿ ಗುತ್ತಿಗೆ ಆಧಾರ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ಕೂಲಿ, ಪಿ.ಎಫ್, ಇಎಸ್‌ಐ ಮತ್ತು ಇತರೆ ಕಾರ್ಮಿಕ ಸೌಲಭ್ಯ ಸರ್ಕಾರದ ನಿಯಮಾವಳಿ ಪ್ರಕಾರ ಜಾರಿಗೊಳಿಸಬೇಕು ಎಂದರು. ಸಿಪಿಐ (ಎಂ) ನಗರ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಅಭಿವೃದ್ಧಿ ಶುಲ್ಕ ಪಾವತಿಸದಿರುವ ನೂತನ ಬಡಾವಣೆ ಮಾಲಿಕರ ವಿರುದ್ಧ ಕ್ರಮ ಜರುಗಿಸುವುದು, ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ಸಮುದಾಯಗಳಿಗೆ ಸರ್ಕಾರ ನೀಡುವ ಸೌಲಭ್ಯ ಸಮರ್ಪಕವಾಗಿ ನೀಡಲು ಪುರಸಭೆಯಲ್ಲಿ ತಕ್ಷಣವೇ ಸಾಮಾಜಿಕ ನ್ಯಾಯ ಮಂಡಳಿ ರಚಿಸುವುದು, ಪಟ್ಟಣದ ಜನತೆಗೆ ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ವರ್ಷ ಕಳೆದಿವೆ ಕೂಡಲೇ ನೀರಿನ ಘಟಕ ಪುನಾರಂಭಿಸಬೇಕು. ನವನಗರ ಮತ್ತು ತಾಂಡಾಗಳಲ್ಲಿ ಸ್ಥಗಿತಗೊಂಡಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ವಾರ್ಷಿಕ ಆದಾಯದ ಶೇ. 2ರಷ್ಟು ಹಣವನ್ನು ಕ್ರೀಡಾ ನಿಧಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಧರಣಿಯಲ್ಲಿ ಪೀರು ರಾಠೋಡ, ಎಂ.ಬಿ. ಸೊಂಪುರ, ಫಯಾಜ ತೋಟದ, ಶರಣಯ್ಯ ಸೂಗೀರಯ್ಯಮಠ, ಎಚ್ಚರಪ್ಪ ಬಡಿಗೇರ, ಪ್ರಕಾಶ ಹೆಳವರ, ಶಿವಾಜಿ ಗಡ್ಡದ, ಕಳಕೇಶಿ ರಾಠೋಡ, ಮೌಲಾಸಾಬ ಆರಗಿದ್ದಿ, ಮಂಜುಳಾ ರಾಠೋಡ, ಮಲ್ಲಮ್ಮ ಬಡಿಗೇರ, ಶೋಭಾ ರಾಠೋಡ ಉಪಸ್ಥಿತರಿದ್ದರು.