ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಸಭೆ

Vishwanath S
Updated On : 7 Dec 2013, 10:55 am

ನರಗುಂದ: ತಾಲೂಕಿನ ರೈತ ಬಾಂಧವರು ಈ ವರ್ಷ ಮುಂಗಾರು ಹಂಗಾಮಿನಲ್ಲಿ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿ, ಬೆಳೆಯಲ್ಲಿ ನಷ್ಟ ಅನುಭವಿಸಿದಂತಹ ರೈತರ ಸಭೆಯನ್ನು ಪಟ್ಟಣದ ಎಪಿಎಂಸಿ ಆವರಣದಲ್ಲಿ ಡಿ. 7ರ ಮಧ್ಯಾಹ್ನ 4 ಗಂಟೆಗೆ ಕರೆಯಲಾಗಿದೆ. ಈ ಸಭೆಗೆ ರೈತ ಮುಖಂಡರು ಭಾಗವಹಿಸಲಿದ್ದು, ಕಾರಣ ತಾಲೂಕಿನಲ್ಲಿ ಬಿಟಿಹತ್ತಿ ಬಿತ್ತನೆ ಮಾಡಿ ನಷ್ಟಹೊಂದಿರುವ ತಾಲೂಕಿನ ಎಲ್ಲ ರೈತ ಬಾಂಧವರು ಈ ಸಭೆಯಲ್ಲಿ ಪಾಲ್ಗೊಂಡು ಹೋರಾಟದ ಪರಿಹಾರ ಕುರಿತು ಸಲಹೆ ಸೂಚನೆ ನೀಡಬೇಕೆಂದು ರೈತ ಸಂಘ ಹಾಗೂ ಹಸಿರುಸೇನೆಯ ತಾಲೂಕು ಅಧ್ಯಕ್ಷ ಬಸವರಾಜ ಸಾಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಬಲ ಬೆಲೆಯಲ್ಲಿ ಮಾಲ್ದಂಡಿ ಜೋಳ ಖರೀದಿ ಪ್ರಾರಂಭ
ಗದಗ: ಗದಗ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ತೀರ್ಮಾನದಂತೆ ಸರ್ಕಾರದ ಆದೇಶದನ್ವಯ ರು. 280 ಪ್ರೋತ್ಸಾಹಧನ, ರು. 1520 ಬೆಂಬಲಬೆಲೆ ಸೇರಿದಂತೆ ಪ್ರತಿ ಕ್ವಿಂಟಾಲ್ ಮಾಲ್ದಂಡಿ ಜೋಳಕ್ಕೆ ರು. 1800 ದರದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಖರೀದಿ ಆರಂಭಿಸಿದೆ. ಗದಗ, ರೋಣ ಮತ್ತು ಲಕ್ಷ್ಮೇಶ್ವರಗಳಲ್ಲಿನ ಎಪಿಎಂಸಿಗಳ ಆವರಣದಲ್ಲಿರುವ ಕೆಎಫ್‌ಸಿಎಸ್‌ಸಿ ಸಗಟು ಮಳಿಗೆಯ ಗೋದಾಮುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ನಂತರದ ದಿನಗಳಲ್ಲಿ ಮುಂಡರಗಿ ಮತ್ತು ನರಗುಂದಗಳಲ್ಲಿಯೂ ಖರೀದಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಯ ಅಧ್ಯಕ್ಷ ಎನ್.ಎಸ್.ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9ರಿಂದ ಕಾರ್ತಿಕೋತ್ಸವ
ಗದಗ: ತಾಲೂಕಿನ ಸವಡಿ ಗ್ರಾಮದಲ್ಲಿರುವ ಸಂಗಮೇಶ್ವರ ಹಾಗೂ ಎರೇಶಿಗಮ್ಮದೇವಿಯ ಕಾರ್ತಿಕೋತ್ಸವ ಕಾರ್ಯಕ್ರವನ್ನು ಡಿ. 9 ಹಾಗೂ 10ರಂದು ಹಮ್ಮಿಕೊಳ್ಳಲಾಗಿದೆ. ಡಿ. 9ರಂದು ಸಂಗಮೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮ ಜರುಗಲಿದ್ದು, ರಾತ್ರಿ 7 ಗಂಟೆಗೆ ಕಾರ್ತಿಕೋತ್ಸವ ಹಾಗೂ ಡಿ. 10ರಂದು ಬೆಳಗ್ಗೆ 7 ಗಂಟೆಗೆ ಎರೇಶಿಗಮ್ಮ ದೇವಿಯ ವಿಶೇಷಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಜೆ 7 ಗಂಟೆಗೆ ದೇವಿಯ ಕಾರ್ತಿಕೋತ್ಸವ ಜರುಗಲಿದೆ. ಸಾರ್ವಜನಿಕರು ಈ ಕಾರ್ತಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಪ್ರಕಟಣೆ ತಿಳಿಸಿದೆ.
ರಾಜ್ಯಮಟ್ಟಕ್ಕೆ ಆಯ್ಕೆ
ನರಗುಂದ: ಇಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ 17ನೇ ವಯಸ್ಸಿನೊಳಗಿನ ಪ್ರೌಢಶಾಲಾ ವಿದ್ಯಾರ್ಥಿಗಳ ವಾಲಿಬಾಲ್ ಬಾಲಕರ ಪಂದ್ಯಾವಳಿಯಲ್ಲಿ ರೋಣದ ಕೆ.ವಿ. ಶಾಂತಗೇರಿಮಠ ಪ್ರೌಢಶಾಲೆಯ ವಿದ್ಯಾರ್ಥಿಗಳು  ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರತಿಭಾ ಕಾರಂಜಿ ಸಹಕಾರಿ
ಮುಂಡರಗಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿನ ಸೃಜನಾತ್ಮಕ ಪ್ರತಿಭೆಯನ್ನು ಗುರುತಿಸಲು ಪೂರಕ ವಾತಾವರಣ ಅವಶ್ಯ ಎಂದು ಜಿಪಂ ಸದಸ್ಯ ಬೀರಪ್ಪ ಬಂಡಿ ಹೇಳಿದರು.  ಅವರು ಗುರುವಾರ ತಾಲೂಕಿನ ಡಂಬಳ ಗ್ರಾಮದ ಎಂಸಿಎಸ್ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮೂಹ ಸಂಪನ್ಮೂಲ ಕೇಂದ್ರ ಮುಂಡರಗಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿದ್ಯಾರ್ಥಿಗಳಿಗಳಿಗೆ ಗುಣಾತ್ಮಕ ಶಿಕ್ಷಣ ಒದಗಿಸುವ ಉದ್ದೇಶದಿಂದ ಕೋಟ್ಯಂತರ ಹಣ ವೆಚ್ಚ ಮಾಡುತ್ತಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಮಕ್ಕಳಿಗೆ ಹೆಚ್ಚು ಕಲಿಕೆಯ ವಾತಾವರಣ ನಿರ್ಮಾಣ ಮಾಡುವಲ್ಲಿ ಪಾಲಕರು ಹಾಗೂ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಮಲ್ಲಣ್ಣ ಯರಾಶಿ, ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ, ಗೋಣಿಬಸಪ್ಪ ಕೊರ್ಲಹಳ್ಳಿ, ಶಾಲಾ ಮುಖ್ಯೋಪಾಧ್ಯಾಯ ಎಚ್.ಎಸ್.ದಂಡಿದಾಸರ್ ಮಾತನಾಡಿದರು. ಎಂ.ಎಂ. ಬಂಡಿ, ಎಸ್.ಎಚ್. ಕಳ್ಳಿ, ಎನ್.ಎಂ. ಬಡಿಗೇರ, ಬಿ.ಆರ್. ಬೋದ್ಲೇಖಾನ್, ವೈ.ಎನ್.ದೊಡ್ಡಮನಿ, ಆರ್.ಎಚ್. ಹಿರೇಮಠ, ಜಗದೀಶ ಗುಳ್ಳಾರಿ, ವೈ.ಎಸ್. ತಳವಾರ ಮುಂತಾದವರು ಉಪಸ್ಥಿತರಿದ್ದರು. ಸಿಆರ್‌ಪಿ ಕೆ.ಎನ್. ದೇಸಾಯಿ ಸ್ವಾಗತಿಸಿದರು. ಎಂ.ಪಿ. ಶೀರನಹಳ್ಳಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement