ಬೇಡಿಕೆ ಈಡೇರಿಕೆ ಭರವಸೆ: ಸಿಪಿಐ(ಎಂ) ಧರಣಿ ಹಿಂದಕ್ಕೆ
ಗಜೇಂದ್ರಗಡ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯ ಎದುರಿನ ಬಯಲು ಜಾಗೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಪುರಸಭೆ ಆಡಳಿತ ಮಂಡಳಿ ಗುರುವಾರ ರಾತ್ರಿ ಭೇಟಿ ನೀಡಿ, ಕೆಲವು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರರತರು ಧರಣಿ ಹಿಂಪಡೆದರು.ಸಿಪಿಐಎಂ ಮುಖಂಡ ಬಸವರಾಜ ಶೀಲವಂತರ ಮಾತನಾಡಿ, ಹಲವಾರು ಬಾರಿ ಹೋರಾಟ ಮಾಡಿದರೂ ಪಟ್ಟಣದ ಜನತಾ ಪ್ಲಾಟ್, ಉಣಚಗೇರಿಯ ನಿವಾಸಿಗಳಿಗೆ ಮನೆ ಹಕ್ಕು ಪತ್ರ ಮತ್ತು ಮೂಲ ಸೌಕರ್ಯ ನೀಡಿಲ್ಲ. 2012-13ನೇ ಸಾಲಿನ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ 1386 ಅರ್ಹ ಕುಟುಂಬಗಳ ವಸತಿಯ ಜೆಪಿಎಸ್ ಸಮೀಕ್ಷೆ ಪೂರ್ಣಗೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ, ಅತಿವೃಷ್ಟಿಯಿಂದ ಹಾನಿಗೀಡಾದ ಮನೆಗಳಿಗೆ ತಕ್ಷಣವೇ ಪರಿಹಾರ ಹಣ ವಿತರಣೆ, ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕನಿಷ್ಠ ಕೂಲಿ, ಪಿಎಫ್, ಇಎಸ್ಐ ಮತ್ತು ಇತರೆ ಕಾರ್ಮಿಕ ಸೌಲಭ್ಯ ಸರ್ಕಾರದ ನಿಯಮಾವಳಿ ಪ್ರಕಾರ ಜಾರಿಗೊಳಿಸಬೇಕೆಂದರು. ಸಿಪಿಐ(ಎಂ) ನಗರ ಕಾರ್ಯದರ್ಶಿ ಬಾಲು ರಾಠೋಡ ಮಾತನಾಡಿ, ಅಭಿವೃದ್ಧಿ ಶುಲ್ಕ ಪಾವತಿಸದಿರುವ ನೂತನ ಬಡಾವಣೆ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದು, ದಲಿತ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರ ನೀಡುವ ಸೌಲಭ್ಯ ಸಮರ್ಪಕವಾಗಿ ನೀಡಲು ಪುರಸಭೆಯಲ್ಲಿ ತಕ್ಷಣವೇ ಸಾಮಾಜಿಕ ನ್ಯಾಯ ಮಂಡಳಿ ರಚಿಸುವುದು, ಪಟ್ಟಣದ ಜನತೆಗೆ ಶಾಶ್ವತ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ವರ್ಷಗಳು ಕಳೆದಿವೆ. ಕೂಡಲೇ ನೀರಿನ ಘಟಕ ಪುನರಾರಂಭಿಸಬೇಕು. ನವನಗರ ಮತ್ತು ತಾಂಡಾಗಳಲ್ಲಿ ಸ್ಥಗಿತಗೊಂಡಿರುವ ಸಾರ್ವಜನಿಕ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವುದರ ಜತೆಗೆ ವಾರ್ಷಿಕ ಆದಾಯದ ಶೇ. 2ರಷ್ಟು ಹಣವನ್ನು ಕ್ರೀಡಾ ನಿಧಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ, ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ, ಸ್ಥಾಯಿ ಸಮಿತಿ ಮುಖ್ಯಸ್ಥ ಅಶೋಕ ವನ್ನಾಲ, ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಸದಸ್ಯ ಎಂ.ಎಸ್. ಹಡಪದ, ಶರಣಪ್ಪ ರೇವಡಿ, ಪ್ರಭು ಚವಡಿ, ಪುರಸಭೆ ಆಡಳಿತ ಸಭೆ ನಡೆಸಿ ಉಣಚಗೇರಿ, ಜನತಾ ಪ್ಲಾಟ್ ನಿವಾಸಿಗಳಿಗೆ ಹಕ್ಕುಪತ್ರವನ್ನು ಒಂದುವಾರದೊಳಗೆ ನೀಡಲಾಗುವುದು. 2ನೇ ನಗರೋತ್ಥಾನ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. 2 ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುವುದು. ವಾರ್ಷಿಕ ಶೇ. 2ರಷ್ಟು ಹಣವನ್ನು ಕ್ರೀಡಾನಿಧಿಗೆ ತೆಗೆದಿಡುವುದು. ಸಾಮಾಜಿಕ ನ್ಯಾಯ ಮಂಡಳಿ ರಚನೆ, ಉದ್ಯಾನವನ ಗುತ್ತಿಗೆ ರದ್ದು ಪಡಿಸಿದ ಕುರಿತು ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿದ ಬಗ್ಗೆ ತಿಳಿಸಿ ಪ್ರತಿಭಟನಾಕಾರರ ಮನವೊಲಿಸಲಾಯಿತು. ಎಂ.ಬಿ. ಸೊಂಪುರ, ಫಯಾಜ್ ತೋಟದ, ಪರಶುರಾಮ ಗದ್ದಿ, ಮೈಬು ಹವಾಲ್ದಾರ್, ಶರಣಯ್ಯ ಸೂಗೀರಯ್ಯಮಠ, ಎಚ್ಚರಪ್ಪ ಬಡಿಗೇರ, ಪ್ರಕಾಶ ಹೆಳವರ, ಶಿವಾಜಿ ಗಡ್ಡದ, ಕಳಕೇಶಿ ರಾಠೋಡ, ಮೌಲಾಸಾಬ್ ಆರಗಿದ್ದಿ, ಮಂಜುಳಾ ರಾಠೋಡ, ಮಲ್ಲಮ್ಮ ಬಡಿಗೇರ, ಶೋಭಾ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.