ಶರಣ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ
ಮುಂಡರಗಿ: ಡಿ. 27, 28 ಹಾಗೂ 29ರಂದು ಧಾರವಾಡದ ಮುರುಘಾಮಠದಲ್ಲಿ 11ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಜರುಗಲಿದೆ. ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನರು ಸಮ್ಮೇಳನದಲ್ಲಿ ಪಾಲ್ಗೊಂಡು ಶರಣ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಚಂದ್ರಕಾಂತ ಬೆಲ್ಲದ ಮನವಿ ಮಾಡಿದರು.
ಅವರು ಈಚೆಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 3 ದಿನಗಳು ಈ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ರು. 100 ಪ್ರತಿನಿಧಿ ಶುಲ್ಕ ನಿಗದಿಗೊಳಿಸಲಾಗಿದ್ದು, ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಎಲ್ಲ ಪ್ರತಿನಿಧಿಗಳಿಗೆ ಊಟ, ಉಪಾಹಾರ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಬಸವಣ್ಣನವರ ಜಯಂತಿಯನ್ನು ಆಚರಿಸುವುದನ್ನು ಜಾರಿಗೆ ತಂದವರಲ್ಲಿ ಮುರಘಾಮಠದ ಮೃತುಂಜ್ಯಯ ಶ್ರೀಗಳು ಒಬ್ಬರು. ಬಸವಣ್ಣನವರ ಜಯಂತಿ ಶತಮಾನೋತ್ಸವ ಆಚರಿಸುವ ಈ ಸಮಯದಲ್ಲಿ ಮುರುಘಾಮಠದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ಸ್ತುತ್ಯವಾದುದು ಎಂದರು. ಡಿ. 8ರಂದು ಧಾರವಾಡದ ಆಲೂರು ವೆಂಕಟರಾವಸಭಾ ಭವನದಲ್ಲಿ ಎಸ್. ನಿಜಲಿಂಗಪ್ಪನವರ ಪುಣ್ಯಸ್ಮರಣೆ ನಿಮಿತ್ತ ಸಾರ್ವಜನಿಕ ಜೀವನದಲ್ಲಿ ಪರಿಶುದ್ಧತೆ ಕುರಿತು ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮದಲ್ಲಿ ತಾಲೂಕಿನ ಜನತೆ ಪಾಲ್ಗೊಳ್ಳಬೇಕು ಎಂದರು. ಮಾಜಿ ಸಚಿವ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಉಪಾಧ್ಯಕ್ಷ ಎಸ್.ಎಸ್. ಪಾಟೀಲ ಮಾತನಾಡಿ, ಶರಣ ಸಾಹಿತ್ಯ ಪರಿಷತ್ತನ್ನು ಕೆಳ ಹಂತದಿಂದ ಗಟ್ಟಿಗೊಳಿಸಬೇಕಾಗಿದೆ. ಅದಕ್ಕೆ ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳನ್ನು ಸ್ಥಳೀಯ ಕಾರ್ಯಕರ್ತರು ಹಾಕಿಕೊಳ್ಳಬೇಕು. ಅದಕ್ಕೆ ಬೇಕಾಗುವ ಸಂಪನ್ಮೂಲಗಳನ್ನು ತಾಲೂಕಿನ ಹಿರಿಯರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಭಿಮಾನಿಗಳು ಕ್ರೋಡೀಕರಿಸಿಕೊಳ್ಳೋಣ ಎಂದರು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಅ.ಓಂ. ಪಾಟೀಲ, ತಾಲೂಕು ಘಟಕದ ಅಧಕ್ಷ ಆರ್.ಎಲ್.ಪೊಲೀಸ್ಪಾಟೀಲ, ಪ್ರಧಾನ ಕಾರ್ಯದರ್ಶಿ ಭಾಗ್ಯಲಕ್ಷ್ಮಿ ಇನಾಮತಿ, ರಾಜ್ಯ ಶ್ರೇಷ್ಠ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ, ಡಾ. ವಿ.ಎಸ್. ಕೋಳೂರಮಠ, ಜಿ.ಆರ್. ಕಲಬರ್ಗಿ, ಎಸ್.ಎಂ. ಕಮ್ಮಾರ, ಎಂ.ಡಿ. ಭಾವಿಮನಿ, ಎಸ್.ಡಿ. ಪೂಜಾರ, ವಿ.ಸಿ. ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.