ಜನಸ್ಪಂದನ ಸಭೆಯಿಂದ ಸಮಸ್ಯೆ ಪರಿಹಾರ
ಲಕ್ಷ್ಮೇಶ್ವರ: ಸಾರ್ವಜನಿಕರ ಸಮಸ್ಯೆಗಳಿಗೆ ನಿಮ್ಮೂರಿನಲ್ಲಿ ಶೀಘ್ರವಾಗಿ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಜನಸ್ಪಂದನ ಸಭೆಯನ್ನು ಆಯೋಜಿಸಿದೆ. ಅದಕ್ಕಾಗಿ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ತಹಸೀಲ್ದಾರ್ ಆರ್.ಬಿ. ನಿಂಗನಗೌಡರ ಹೇಳಿದರು.
ಅವರು ಸಮೀಪದ ಬಟ್ಟೂರ ಗ್ರಾಮದಲ್ಲಿ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಜನರಿಗೆ ನೀಡಿರುವ ಸೌಲಭ್ಯಗಳ ಮಾಹಿತಿಯನ್ನು ನೀಡುವುದರ ಜತೆಯಲ್ಲಿ ಯಾವ ಯಾವ ಸೌಲಭ್ಯಗಳನ್ನು ಹೇಗೆ ಪಡೆದುಕೊಳ್ಳಬೇಕು. ಅದಕ್ಕೆ ಅನುಸರಿಸಬೇಕಾದ ಮಾರ್ಗ ಸೂತ್ರಗಳ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವ ಕಾರ್ಯವನ್ನು ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಮಾಡಬೇಕು. ಗ್ರಾಮಮಟ್ಟದ ಸಮಸ್ಯೆಗಳಿಗೆ ಸ್ಥಳೀಯ ಅಧಿಕಾರಿಗಳು ಯೋಗ್ಯ ತೀರ್ಮಾನ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿದ್ದರೆ ಅದನ್ನು ಬಗೆಹರಿಸಬೇಕು ಎಂದು ಹೇಳಿದರು. ತಾಲೂಕು ಪಂಚಾಯಿತಿಯ ಇಒ ವೈ.ಎಲ್. ಹಂಪಣ್ಣ ಮಾತನಾಡಿ, ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು. ಗ್ರಾಮೀಣ ಮಟ್ಟದಲ್ಲಿ ಎಲ್ಲ ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ತಾಲೂಕು ಪಂಚಾಯಿತಿ ಸನ್ನದ್ಧವಾಗಿದೆ. ಗ್ರಾಮದ ಪ್ರತಿಯೊಂದು ಮನೆ ಶೌಚಾಲಯ ಹೊಂದಬೇಕು ಎನ್ನುವ ದೃಷ್ಟಿಯಿಂದ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಈಗ ಹೆಚ್ಚಿನ ಅನುದಾನ ನೀಡುತ್ತಿದೆ. ಬಯಲು ಶೌಚ ಮುಕ್ತ ಗ್ರಾಮವನ್ನು ಮಾಡಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಊರಿನ ಪ್ರಮುಖರು ಕಾಳಜಿವಹಿಸಬೇಕಾಗಿದೆ ಎಂದರು.
ತಾಲೂಕಿನ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಿತ್ತಿ, ಕಂದಾಯ ನಿರೀಕ್ಷಕ ಎಫ್.ಎನ್. ಹುಬ್ಬಳ್ಳಿ, ಬಟ್ಟೂರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಫಕ್ಕಿರಮ್ಮ ಮಾಳಗಿಮನಿ, ಉಪಾಧ್ಯಕ್ಷ ನಾಗರಾಜ ಪಾಟೀಲ ಹಾಗೂ ಗ್ರಾಪಂ ಸದಸ್ಯರು ಹಾಜರಿದ್ದರು.