ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಗನಿಗಾಗಿ ಹೆತ್ತವರ ಗೋಳಾಟ

Vishwanath S
Updated On : 8 Dec 2013, 11:29 am

ಕನ್ನಡಪ್ರಭ ವಾರ್ತೆ, ಗದಗ, ಡಿ. 7
ಕಾರ್ಯಕ್ರಮವೊಂದಕ್ಕೆ ತೆರಳಿದ ಬಾಲಕನೋರ್ವ ಮರಳಿ ಮನಗೆ ಬಾರದಿರುವುದು ತಂದೆ-ತಾಯಿ ನೋವು ಹೇಳತೀರದಂತಾಗಿದೆ.
ಅಂತಹ ಘಟನೆಯೊಂದು ಗದಗ ನಗರದಲ್ಲಿ ನಡೆದಿದ್ದು, ಅದರಲ್ಲಿಯೂ ಮನೆಯಿಂದ ಹೋಗಿರುವ ಮಗು ಅಲ್ಪ ಬುದ್ಧಿಮಾಂದ್ಯನಾಗಿದ್ದು, ಇದು ಪಾಲಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ನಗರದ ಮಕಾನ್ಗಲ್ಲಿಯ ನಿವಾಸಿಗಳಾದ ನಾಗರಾಜ ಹಾಗೂ ಮೀನಾಕ್ಷಿ ದಂಪತಿ ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದು, 3 ಮಕ್ಕಳಲ್ಲಿ ಹಿರಿಯ ಮಗನೇ ಶಂಕರ. 12 ವರ್ಷದವನಾದ ಶಂಕರ ಪ್ರಾರಂಭದಿಂದಲೂ ಅತ್ಯಂತ ಚುರುಕಿನ ಸ್ವಭಾವದ ಹುಡುಗ, ಆದರೆ, ನಂತರದ ದಿನಗಳಲ್ಲಿ ಆಗಾಗ್ಗೆ ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದ. ಆದರೆ ಶಾಲೆಗೆ ಹೋಗುವುದು ಮತ್ತು ನಿತ್ಯ ಪಾಠದ ಚಟುವಟಿಕೆಯಲ್ಲಿ ಮಾತ್ರ ಎಲ್ಲ ಮಕ್ಕಳಂತೆಯೇ ಇದ್ದ.
ನವೆಂಬರ್ 18ರಂದು ಕಾಣೆ: ಕಳೆದ ನ. 18 ರಂದು ಜಿಲ್ಲಾಮಟ್ಟದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನು ನಗರಸಭೆಯ ಆವರಣದಲ್ಲಿ ಆಯೋಜಿಸಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಮಕಾನಗಲ್ಲಿ ಭಾಗದಿಂದ ಒಂದು ದೊಡ್ಡ ಮೆರವಣಿಗೆ ಹೊರಡಿಸಲಾಗಿತ್ತು. ಮೆರವಣಿಗೆಯಲ್ಲಿ ವಿವಿಧ ವೇಷಭೂಷಣ ಹಾಕಿದ ಮಕ್ಕಳನ್ನು ಕರೆದುಕೊಂಡು ಹೋಗಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಲಾಗಿತ್ತು. ಅಂದು ಅಲ್ಲಿನ ಕೆಲ ಮಕ್ಕಳೊಂದಿಗೆ ಟ್ರ್ಯಾಕ್ಟರ್ ಮೂಲಕ ಸ್ಟೇಶನ್ ರಸ್ತೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಂದಿದ್ದಾನೆ. ಅಂದು ಮನೆಯಿಂದ ಹೊರ ಹೋದ ಶಂಕರ ಮರಳಿಗೆ ಮನೆಗೆ ಬಂದೇ ಇಲ್ಲ.
ಪಾಲಕರಿಗೆ ಹೆಚ್ಚಿದ ಚಿಂತೆ: 12 ವರ್ಷದ ಬಾಲಕ ಶಂಕರ ತಿಳಿವಳಿಕೆ ಇದ್ದರೆ ಮನೆಗೆ ಬರುತ್ತಿದ್ದ. ತನ್ನ ತಂದೆ-ತಾಯಿ ಹೆಸರು ಮತ್ತು ವಿಳಾಸವನ್ನೂ ಹೇಳುತ್ತಿದ್ದ. ಅವನು ಅಲ್ಪಮಟ್ಟಿನ ಬುದ್ಧಿಮಾಂದ್ಯತೆ ಹೊಂದಿರುವುದರಿಂದ, ಯಾರಾದರೂ ಅವನನ್ನು ಮಾತನಾಡಿಸಿದರೆ ಭಯಭೀತನಾಗುತ್ತಾನೆ. ಎಷ್ಟೇ ಕೇಳಿದರೂ ಏನೂ ಮಾತನಾಡುವುದಿಲ್ಲ. ತನ್ನ ಕೈಯನ್ನೇ ಕಡಿದುಕೊಳ್ಳುವ ಮೂಲಕ ಸಿಟ್ಟನ್ನು ತೋರ್ಪಡಿಸುತ್ತಾನೆ. ಇಂತಹ ಬಾಲಕ ಕಾಣೆಯಾಗಿರುವುದರಿಂದ ಪಾಲಕರು ತೀವ್ರ ಚಿಂತೆಗೊಳಗಾಗಿದ್ದಾರೆ.
ನ. 18ರಿಂದ ಪಾಲಕರು ಕಂಡ ಕಂಡವರಿಗೆ ಮಗುವಿನ ಭಾವಚಿತ್ರ ತೋರಿಸಿ ಹುಡುಕಾಡುತ್ತಿದ್ದಾರೆ. ಮಗುವಿನ ತಂದೆ ನಾಗರಾಜ ಮಾತ್ರ ರಾತ್ರಿ, ಹಗಲೆನ್ನದೇ ಮಗನ ಹುಡುಕಾಟದಲ್ಲಿ ತೊಡಗಿದ್ದು, ಇಂದಿಗೂ ಮಗ ಸಿಗುತ್ತಿಲ್ಲ. ನಾಗರಾಜ ಹಾಗೂ ಆತನ ಪತ್ನಿ ಮೀನಾಕ್ಷಿ ಅವಳಿ ನಗರದಲ್ಲಿ ಪ್ರತ್ಯೇಕವಾಗಿ ನಿತ್ಯವೂ ಹುಡುಕುತ್ತಿದ್ದಾರೆ.
ವದಂತಿ: ನಿಮ್ಮ ಮಗನನ್ನು ಅಲ್ಲಿ ನೋಡಿದ್ದೇವೆ, ಇಲ್ಲಿ ನೋಡಿದ್ದೇವೆ ಎಂದು ಹಲವರು ಈ ಕುಟುಂಬಕ್ಕೆ ಹೇಳಿದ್ದಾರೆ. ಆದರೆ ಬಾಲಕ ಸಿಕ್ಕಾಗ ಅವನನ್ನು ಹಿಡಿದು ಪಾಲಕರಿಗೆ ನೀಡಲು ಯಾರೂ ಮುಂದಾಗಿಲ್ಲ. ಆದರೆ, ನಿಮ್ಮ ಹುಡುಗನನ್ನು ನೋಡಿದ್ದೇವೆ ಎಂದು ಹೇಳುತ್ತಿರುವುದು ಪಾಲಕರಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಈ ರೀತಿಯ ವದಂತಿ ಹರಡುತ್ತಿದ್ದಂತೆ ರಾತ್ರಿ, ಹಗಲೆನ್ನದೆ ಹೆತ್ತವರು ಅವಳಿ ನಗರದಲ್ಲಿ ಮಗನಿಗಾಗಿ ಅಲೆಯುತ್ತಿದ್ದಾರೆ.
ಪ್ರಕರಣ ದಾಖಲಾಗಿದೆ: ಈ ಕುರಿತು ತಂದೆ ನಾಗರಾಜ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮಗನನ್ನು ಹುಡುಕಿಕೊಡುವಂತೆ ವಿನಂತಿಸಿದ್ದಾರೆ. ಆದರೆ ಕುಟುಂಬದವರ ಪ್ರಕಾರ ಪೊಲೀಸರು ಬಾಲಕನನ್ನು ಹುಡುಕುವಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ.
 ಎಲ್ಲ ಮಕ್ಕಳಂತೆ ತನ್ನ ಮಗ ಶಂಕರನೂ ಇದ್ದಿದ್ರೆ ತಮಗೆ ಚಿಂತೆಯಿರಲಿಲ್ಲ. ಅವನಿಗಿರೋ ಬುದ್ಧಿಮಾಂದ್ಯತೆಯೇ ತಮಗೆಲ್ಲ ಈಗ ಚಿಂತಿಸುವಂತೆ ಮಾಡಿದೆ. ಮಗ ಸಿಗುತ್ತಿಲ್ಲ ಚಿಂತೆಯ ಜತೆಗೆ ಎಲ್ಲಿ ನಮ್ಮನ್ನೆಲ್ಲ ಮರೆತು ಬಿಡುತ್ತಾನೋ ಎನ್ನುವ ಭಯ ಕಾಡುತ್ತಿದೆ. ಕೂಡಲೇ ನನ್ನ ಮಗನನ್ನು ಹುಡುಕಲು ಸಹಾಯ ಮಾಡಿ.
 ಮೀನಾಕ್ಷಿ
ಕಾಣೆಯಾದ ಮಗುವಿನ ತಾಯಿ



-ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement