ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಯಳವತ್ತಿಯಲ್ಲಿ ಸಂಗೀತ ಕಾರ್ಯಕ್ರಮ

Vishwanath S
Updated On : 8 Dec 2013, 11:29 am

 ಕನ್ನಡಪ್ರಭ ವಾರ್ತೆ, ಗದಗ. ಡಿ. 7
ಸಂಗೀತವನ್ನು ಕೇಳದ ಕಿವಿಗಳಿಲ್ಲ. ಸಂಗೀತವೆಂಬುದು ತನುಮನ ಸೆಳೆಯುವ ವಿಶಿಷ್ಟ ಕಲೆಯಾಗಿದ್ದು, ಪ್ರತಿಯೊಬ್ಬರೂ ಸಂಗೀತ ಆಲಿಸಿ ಅದರ ರುಚಿ ಸವಿಯುವಂತೆ ಮುಖ್ಯೋಪಾಧ್ಯಾಯ ಎಲ್.ಜಿ. ಪಾಟೀಲ ಹೇಳಿದರು.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗದಗ ಜಿಲ್ಲೆ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದೆ. ಇಲ್ಲಿ ಹಲವು ಸಂಗೀತ ಕಲಾವಿದರು ಸಂಗೀತ ಲೋಕದಲ್ಲಿ ಗುರುತಿಸಿಕೊಂಡು ಅಜರಾಮರರಾಗಿದ್ದಾರೆ ಎಂದರು. ಸಂಗೀತಕ್ಕೆ ಯಾವುದೇ ಜಾತಿ, ಲಿಂಗ ಭೇದ-ಭಾವವಿಲ್ಲ. ಪ್ರತಿಯೊಬ್ಬರೂ ಸಂಗೀತ ಆಲಿಸಿ, ಕಲಿತುಕೊಳ್ಳುವಂತೆ ಕೋರಿದರು.
ಸಂಗೀತ ಶಿಕ್ಷಕ ಡಿ.ಎಚ್. ಅಣ್ಣಿಗೇರಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಪ್ರಕಾಶ ಬ್ಯಾಟಿ ಹಾರ್ಮೋನಿಯಂ ಹಾಗೂ ಮಂಜುನಾಥ ತಬಲಾ ಸಾಥ್ ನೀಡಿದರು. ಶಾಲಾ ಶಿಕ್ಷಕ, ಶಿಕ್ಷಕಿಯರು, ಸಿಬ್ಬಂದ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಿ.ಎನ್. ಮಂಚಗಣಿ ಸ್ವಾಗತಿಸಿ, ವಂದಿಸಿದರು.
ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ
ಗಜೇಂದ್ರಗಡ:  ವಿದ್ಯಾರ್ಥಿಗಳು ಪಠ್ಯದ ಜತೆ ಕ್ರಿಯಾಶೀಲತೆಯನ್ನು ರೂಢಿಸಿಕೊಂಡು ವಿದ್ಯೆ ಸಂಪಾದಿಸಿ ದೇಶದ ಸಮರ್ಥ ನಾಯಕರಾಗಿ ಹೊರಹೊಮ್ಮಿ ಎಂದು ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಬಂಕದ ಹೇಳಿದರು.
ಈಚೆಗೆ ಸ್ಥಳೀಯ ಸರ್ಕಾರಿ ಮಾದರಿ ಕೇಂದ್ರ ಶಾಲೆ ನಂ 1ರಲ್ಲಿ ಪ್ರಸಕ್ತ ಸಾಲಿನ ಉಚಿತ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಇಂದು ಶೈಕ್ಷಣಿಕ ಕ್ಷೇತ್ರ ಅತ್ಯಂತ ಸ್ಪರ್ಧಾ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಸಿದ್ಧರಿರಬೇಕು. ಜತೆಗೆ ಶಿಕ್ಷಕರು ಪಾಲಕರು ಅವರಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಿದಾಗ ವಿದ್ಯಾರ್ಥಿ ಜೀವನದ ಗುರಿ ಸಾಧಿಸಲು ಸಾಧ್ಯ ಎಂದ ಅವರು, ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಂಬಂಧ ಹಾಲು ಸಕ್ಕರೆಯಂತಾದಾಗ ಮಾತ್ರ ಶೈಕ್ಷಣಿಕ ರಂಗದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗುಣಾತ್ಮಕ ಶಿಕ್ಷಣ ಪಡೆದು ಪ್ರತಿಭಾವಂತ ವಿದ್ಯಾರ್ಥಿಗಳಾಗಿ ತಾಂತ್ರಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಅವಕಾಶ ಪಡೆದು ದೇಶದ ಹೆಮ್ಮೆಯ ನಾಗರಿಕರಾಗಿ ಬಾಳಿ ಎಂದರು.
ಮುಖ್ಯೋಪಾಧ್ಯಾಯ ಎಲ್.ಕೆ. ರಾಠೋಡ ಮಾತನಾಡಿದರು. ನಾಗರಾಜ ಚಲಮಲ್, ಚಂದ್ರಶೇಖರ ಬಂಕದ, ರಾಜೇಸಾಬ ಬಳ್ಳಾರಿ, ಸುಮಿತ್ರಾ ತೊಂಡಿಹಾಳ, ರತ್ನಾ ಮಂಗಳೂರ, ಲಕ್ಷ್ಮವ್ವ ತಳವಾರ, ದುರಗಪ್ಪ ಕಲ್ಲೊಡ್ಡರ, ಆರ್.ವ್ಹಿ. ನಿರಂಜನ, ಎ.ಎಸ್. ಕವಡಿಮಟ್ಟಿ, ಎಸ್.ಟಿ. ಪೂಜಾರ ಉಪಸ್ಥಿತರಿದ್ದರು.
ರೋಗ ಮುಕ್ತರಾಗಲು ಯೋಗ ಅವಶ್ಯ
ಮುಳಗುಂದ: ರೋಗಮುಕ್ತರಾಗಲು ಪ್ರತಿನಿತ್ಯ ಯೋಗ ಪ್ರಾಣಾಯಾಮದ ಅವಶ್ಯಕತೆಯಿದೆ ಎಂದು ಎಪಿಎಂಸಿ ಸದಸ್ಯ ಎಸ್.ಎಂ. ನೀಲಗುಂದ ಹೇಳಿದರು. ಈಚೆಗೆ ಅವರು ಪಟ್ಟಣದ ವಿದ್ಯಾನಗರದಲ್ಲಿರುವ ಬಾಲಲೀಲಾ ಮಹಾಂತ ಶಿವಯೋಗಿ ಯುವಕ ಸಂಘ ಹಾಗೂ ಪತಂಜಲಿ ಯೋಗಸವುತಿ ಸಂಯುಕ್ತಾಶ್ರಯದಲ್ಲಿ ನಡೆದ ಯೋಗಶಿಬಿರದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು. ಹಿಂದಿನ ಕಾಲದ ಜನರು ಶ್ರಮವಹಿಸಿ ದುಡಿದು ರೋಗಮುಕ್ತರಾಗಿ ಜೀವನ ನಡೆಸುತ್ತಿದ್ದರು. ಆದರೆ ಯಂತ್ರೋಪಕರಣದಿಂದಾಗಿ ಮನುಷ್ಯನ ಶ್ರಮ ಕಡಿಮೆಯಾಗಿದೆ. ಹೀಗಾಗಿ ಅನೇಕ ರೋಗಗಳಿಗೆ ತುತ್ತಾಗಿರುವ ಪರಿಸ್ಥಿತಿ ಬಂದಿದೆ. ರೋಗ ನಿವಾರಣೆಗೆ ಯೋಗ ಪ್ರಮುಖ ಅಸ್ತ್ರವಾಗಿದ್ದು, ಪ್ರತಿಯೊಬ್ಬರೂ ಯೋಗ ಮಾಡುವುದು ಒಳಿತು ಎಂದರು. ಗದಗ ಜಿಲ್ಲಾ ಭಾರತ ಸ್ವಾಭಿಮಾನ ಟ್ರಸ್ಟ್ ಅಧ್ಯಕ್ಷ ರುದ್ರಣ್ಣ ಗುಳಗುಳಿ ಮಾತನಾಡಿದರು. ಪಪಂ ಸದಸ್ಯ ಸಿ.ಬಿ. ಬಡ್ನಿ ಅಧ್ಯಕ್ಷತೆ ವಹಿಸಿದ್ದರು. ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಬಿ.ಎಸ್. ಸಂಗಪ್ಪಶೆಟ್ಟರ, ಯೋಗ ಶಿಕ್ಷಕ ಅಶೋಕ ಸರ್ವದೆ, ಶಿವನಪ್ಪ ಹಾರೋಗೇರಿ, ಎನ್.ಪಿ. ಲಮಾಣಿ, ಎಂ.ಬಿ. ಸುಣಗಾರ, ಶಶಿಕಲಾ ವಡ್ನವರ, ನಾಗರಾಜ ಪವಾರ, ಜಿ.ಎ. ಬಡಿಗಣ್ಣವರ ಉಪಸ್ಥಿತರಿದ್ದರು.
ಇಂದು ಮಹಿಳಾ ಕಲಾಪ್ರತಿಭೋತ್ಸವ
ಗದಗ:  ಭೂಮಿಕಾ ಮಹಿಳಾ ಸಮಾಜ ಗದಗ ಹಾಗೂ ಕಲಾಪರಿಷತ್ ಗದಗ ಸಂಯುಕ್ತವಾಗಿ ನಗರದ ಮರಾಠಾ ಮಂಡಳದಲ್ಲಿ ಡಿ. 8ರ ಸಂಜೆ 4.30 ಗಂಟೆಗೆ ಪದ್ಮವಿಭೂಷಣ ಡಾ. ಗಂಗೂಬಾಯಿ ಹಾನಗಲ್ ಜನ್ಮಶತಮಾನೋತ್ಸವ ಆಚರಣೆಯ ಅಂಗವಾಗಿ ಕಲಾಪ್ರತಿಭೋತ್ಸವ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ ನೆರವೇರಿಸುವರು. ಭೂಮಿಕಾ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಕಡೇಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನಗರಸಭೆಯ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟದ, ಅಂದಾನೆಪ್ಪ ವಿಭೂತಿ, ಗಜಾನನ ವರ್ಣೇಕರ ಮುಂತಾದವರು ಆಗಮಿಸುವರು.
 ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಬಣ್ಣದ ಅವರನ್ನು ಸನ್ಮಾನಿಸಲಾಗುವುದು.
 ಕಲಾ ಪ್ರತಿಭೋತ್ಸವದಲ್ಲಿ ರಾಜೇಶ್ವರಿ ಕಲಾ ಕುಟೀರದ ಬಾಲ ಕಲಾವಿದರಾದ ನಮ್ರತಾ ಹಬೀಬ, ಮೇಘನಾ ವಾಲ್ಮೀಕಿ, ಸೃಷ್ಟಿ ತೆಂಬದಮನಿ, ಭಾಗ್ಯ ಹಬೀಬ, ಅನುಷಾ ಹಬೀಬ, ಪೂರ್ಣಿಮಾ ಮಾಳಗೊಂಡ, ಸಹನಾ ಕಲಾಲ, ಅನನ್ಯ ಹಂಪಿಮಠ ಇವರಿಂದ ವಚನ ನೃತ್ಯ, ಶಾಲಿನಿ ಪೂಜಾರ, ಜ್ಯೋತಿ ಕಮದೋಡ ಅವರಿಂದ ವಚನ ಸಂಗೀತ ಹಾಗೂ ಅರ್ಚನಾ ಹಿರೇಮಠ, ಸ್ನೇಹಾ ಅಗಸಿಯವರಿಂದ ಕಥಕ ನೃತ್ಯ ಕಾರ್ಯಕ್ರಮ ಜರುಗಲಿದ್ದು, ಆಸಕ್ತರು ಪಾಲ್ಗೊಳ್ಳುವಂತೆ ಕಲಾವಿಕಾಸ ಪರಿಷತ್ ಕಾರ್ಯಾಧ್ಯಕ್ಷ ಸಿ.ಕೆ.ಎಚ್.ಶಾಸ್ತ್ರೀ (ಕಡಣಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಉಚಿತ ಆರೋಗ್ಯ ತಪಾಸಣೆ
ಗದಗ: ಖ್ಯಾತಪುರಾಣ ಕೀರ್ತನಕಾರ ಸಿದ್ಧಲಿಂಗಶಾಸ್ತ್ರಿಗಳು ಹೊಸಮಠ ಅವರ 19ನೇ ಪುಣ್ಮಸ್ಮರಣೆ ಮತ್ತು ಸುಮಿತ್ರಮ್ಮ ಹೊಸಮಠ ಇವರ ಸ್ಮರಣೋತ್ಸವ ಹಾಗೂ ನಗರದ ಜ. ತೋಂಟದಾರ್ಯ ಮಠದ ಆವರಣದಲ್ಲಿರುವ ಬಸವೇಶ್ವರ ಕಾಲೇಜು ಪ್ರಾಂಗಣದಲ್ಲಿ ಡಿಸೆಂಬರ್ 8ರಂದು ಬೆಳಗ್ಗೆ 10.30 ರಿಂದ ಸಂಜೆ 5 ಗಂಟೆವರೆಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ವಿಧವಾದ ಮನೋರೋಗ, ದೈಹಿಕ ರೋಗ, ಚಿಕ್ಕ ಮಕ್ಕಳ ಕಾಯಿಲೆ, ಸ್ತ್ರೀರೋಗ, ಮೂಳೆ ರೋಗ, ನೇತ್ರ ರೋಗ, ಚರ್ಮರೋಗ, ಹಲ್ಲು, ಗಂಟಲು, ಕಿವಿಮೂಗು ವ್ಯಾಧಿಗಳು ಸೇರಿದಂತೆ ಶಸ್ತ್ರಚಿಕಿತ್ಸಕರು ಆಯಾ ವಿಭಾಗದ ಮಹಿಳಾ ಹಾಗೂ ಪುರುಷ ವೈದ್ಯರು ಈ ಶಿಬಿರದಲ್ಲಿ ಉಪಸ್ಥಿತರಿದ್ದು ತಪಾಸಣೆ ನಡೆಸುವರು. ಶಿಬಿರದ ಉದ್ಘಾಟನೆ ಬೆಳಗ್ಗೆ 10ಕ್ಕೆ ತೋಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಐಎಂಎ ಅಧ್ಯಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಆರ್. ಎನ್. ಪಾಟೀಲ ಹಾಗೂ ಹಿರಿಯ ವೈದ್ಯರು ಪಾಲ್ಗೊಳ್ಳುವರು ಎಂದು ಮಹಾಂತೇಶ ಹೊಸಮಠ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಸನ್ಮಾನ, ಗ್ರಂಥ ಬಿಡುಗಡೆ
ಗದಗ: ತೋಂಟದಾರ್ಯ ಮಠದಲ್ಲಿ ಡಿ. 9ರಂದು ಸಂಜೆ 7ಕ್ಕೆ ಲಿಂಗಾಯತ ಪ್ರಗತಿಶೀಲ ಸಂಘ ಹಾಗೂ ಸಿದ್ಧಲಿಂಗ ಶಾಸ್ತ್ರಿ ಹೊಸಮಠ ಪುಣ್ಯಸ್ಮರಣೆ  ಟ್ರಸ್ಟ್ ಆಶ್ರಯದಲ್ಲಿ ನಡೆವ 2149ನೇ ಶಿವಾನುಭವ ಕಾರ್ಯಕ್ರಮದಲ್ಲಿ  ಜಿಲ್ಲಾ ಸರ್ಜನ್ ಹಾಗೂ ಐಎಂಎ ಅಧ್ಯಕ್ಷ ಡಾ. ಆರ್.ಎನ್. ಪಾಟೀಲ, ರೋಟರಿ ಮಾಜಿ ಜಿಲ್ಲಾ ಗೌವರ್ನರ್ ಹಾಗೂ ಹಿರಿಯ ವೈದ್ಯ ಡಾ. ಎನ್.ಬಿ. ಪಾಟೀಲ ಇತರರಿಗೆ ಸನ್ಮಾನ ನಡೆಯಲಿದೆ. ಡಾ. ಶಿವಾನಂದ ವಿರಕ್ತಮಠ ಬರೆದ ಕೊಡೇಕಲ್ಲ ರಾಚಪ್ಪಯ್ಯ ಒಂದು ಆಧ್ಯಯನ ಪುಸ್ತಕ ಬಿಡುಗಡೆ ನಡೆಯಲಿದೆ. ಸಾನ್ನಿಧ್ಯವನ್ನು ತೋಂಟದ ಸಿದ್ಧಲಿಂಗ ಶ್ರೀಗಳು ವಹಿಸುವರು. ಹಾಗೂ ಸಮ್ಮುಖವನ್ನು ಚಿಂಚಣಿ (ತಾ. ಚಿಕ್ಕೋಡಿ) ಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮಿಗಳು, ಸೊಂಡೂರು ವಿರಕ್ತಮಠದ ಪ್ರಭು ಸ್ವಾಮಿಗಳು, ಅರಸಿಕೆರೆಯ ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮಿಗಳು ವಹಿಸುವರು. ಹಂಪಿ ವಿವಿ ಹಸ್ತಪ್ರತಿ ವಿಭಾಗದ ಕೆ. ರವೀಂದ್ರನಾಥ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement