ಅದ್ಧೂರಿ ಟಗರಿನ ಕಾಳಗ
ಲಕ್ಷ್ಮೇಶ್ವರ: ಅವು ಒಂದಕ್ಕೊಂದು ಡಿಕ್ಕಿ ಹೊಡೆಯುವುದನ್ನೇ ಬೆರಗುಗಣ್ಣಿನಿಂದ ನೋಡುತ್ತ ಕಾದು ಕುಳಿತಿದ್ದ ಜನತೆ ಪರಸ್ಪರ ತಲೆಯಿಂದ ಡಿಕ್ಕಿ ಹೊಡೆದ ತಕ್ಷಣ ರೋಮಾಂಚನಗೊಂಡಂತೆ ಓಹ್ ಎಂದು ಕೇಕೆ ಹಾಕುತ್ತಿದ್ದ ದೃಶ್ಯ ಅಲ್ಲಿ ಸಾಮಾನ್ಯವಾಗಿತ್ತು. ಇದು ಪಟ್ಟಣದಲ್ಲಿ ನಡೆದಿರುವ ಬೃಹತ್ ಟಗರಿನ ಕಾಳಗದ ದೃಶ್ಯದ ತುಣುಕು.
ಪಟ್ಟಣದ ದೂದಪೀರಾ ಯಂಗ್ ಕಮಿಟಿಯ ವತಿಯಿಂದ ದೂದಪೀರಾ ದರ್ಗಾದ ಎದುರಿನ ಬಯಲು ಜಾಗೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಟಗರಿನ ಕಾಳಗ ಸ್ಪರ್ಧೆ ಭಾನುವಾರ ಮುಂಜಾನೆ ಆರಂಭಗೊಂಡಿತು. ರಾಜ್ಯದ ಬೇರೆ ಬೇರೆ ಭಾಗಗಳಿಂದ ಆಗಮಿಸಿದ್ದ ನೂರಾರು ಕಟ್ಟು ಮಸ್ತಾದ ಟಗರುಗಳು ನೋಡುಗರ ಕಣ್ ಸೆಳೆಯುವಂತಿದ್ದವು. ಗದಗ, ಧಾರವಾಡ, ಸವಣೂರ, ಬ್ಯಾಡಗಿ, ಹಾವೇರಿ, ಹೊಸರಿತ್ತಿ, ಗಜೇಂದ್ರಗಡ, ದಾವಣಗೇರಿ, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಮುಂಡರಗಿ, ಕುಂದಗೋಳ, ನವಲಗುಂದ, ನರಗುಂದ ಮೊದಲಾದ ಪ್ರದೇಶಗಳಿಂದ ಟಗರುಗಳು ಸ್ಪರ್ಧೆಗೆ ಬಂದಿದ್ದವು. 2 ಹಲ್ಲಿನ ಟಗರುಗಳಿಂದ ಹಿಡಿದು 8 ಹಲ್ಲಿನ ಟಗರುಗಳಿಗೆ ಪ್ರತ್ಯೇಕವಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದ ಟಗರುಗಳಿಗೆ ಸಾವಿರಾರು ರುಪಾಯಿಗಳ ಬಹುಮಾನವನ್ನು ಇಡಲಾಗಿತ್ತು. ಸಂಜೆ ವರೆಗೂ ಸ್ಪರ್ಧೆಯು ನಡೆದಿದ್ದು, ನೋಡುಗರಲ್ಲಿ ಉತ್ಸಾಹ ಕೊಂಚವು ಕಡಿಮೆಯಾಗಿರಲಿಲ್ಲ ಎನ್ನುವುದು ವಿಶೇಷವಾಗಿತ್ತು.