ಗುಣಮಟ್ಟದ ಕಾಮಗಾರಿ ನಿರ್ವಹಿಸಿ: ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಡಿ. 8
ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವ ಮೂಲಕ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಗುತ್ತಿಗೆದಾರರಿಗೆ ಸಹಕರಿಸಬೇಕೆಂದು ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಭಾನುವಾರ ಮುಂಡರಗಿ-ಚಿಕ್ಕಹೆಸರೂರ, ಮುದಗಲ್-ಮುಂಡರಗಿ 2013-14ನೇ ಸಾಲಿನ 13ನೇ ಹಣಕಾಸು ಯೋಜನೆಯಡಿ 4 ಕಿ.ಮೀ ರಾಷ್ಟ್ರೀಯ ಹೆದ್ದಾರಿ ರಸ್ತೆ ಮರುಡಾಂಬರೀಕರಣ ಕಾರ್ಯಕ್ರಮಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರಕ್ಕೆ ಮುಂಡರಗಿ ತಾಲೂಕು ಹಾಗೂ ಶಿರಹಟ್ಟಿ ತಾಲೂಕು ಮತ್ತು ಲಕ್ಷ್ಮೇಶ್ವರ ಭಾಗದ ಗ್ರಾಮಗಳು ಒಳಪಡುತ್ತಿದ್ದು, ಎಲ್ಲ ಭಾಗಗಳಲ್ಲಿಯೂ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂಬರುವ ದಿನಗಳಲ್ಲಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಕಾಮಗಾರಿಗಳಿಗೆ ಒತ್ತು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕರಬಸಪ್ಪ ಹಂಚಿನಾಳ, ಧ್ರುವಕುಮಾರ ಹೊಸಮನಿ, ಗುತ್ತಿಗೆದಾರ ಎ.ಕೆ. ಹಂಚಿನಾಳ, ಡಿ.ಡಿ. ಮೋರನಾಳ, ಸೊಲಬಣ್ಣ ಜೋಬಾಳಿ, ಪುರಸಭಾ ಸದಸ್ಯ ಲಿಂಗರಾಜಗೌಡ ಪಾಟೀಲ, ಅಬ್ದುಲ್ ಖುರೇಶಿ, ಪ್ರದೀಪ ಗುಡದಪ್ಪನವರ, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಎಸ್. ಹುಬ್ಬಳಿಮಠ, ಶರಣಪ್ಪ ಕುಬಸದ ಸೇರಿದಂತ ಅನೇಕರು ಉಪಸ್ಥಿತರಿದ್ದರು.