ನಿರ್ಮಲ ಭಾರತ: ಮುಂಚೂಣಿಯಲ್ಲಿ ರಾಮಾಪುರ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ. ಡಿ. 8
ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬಯಲು ಶೌಚ ತೊಡೆದುಹಾಕಿ ಗ್ರಾಮಗಳಲ್ಲಿ ಸ್ವಚ್ಛ-ಸುಂದರ ಹಾಗೂ ನಿರ್ಮಲ ಪರಿಸರ ರೂಪಿಸಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಮಹಾತ್ಮ ಗಾಂಧೀಜಿ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮೀಪದ ರಾಮಾಪುರ ಗ್ರಾಪಂ ಮುಂಚೂಣಿಯಲ್ಲಿದೆ. ಈಗ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣದ ಕಾರ್ಯ ಜೋರಾಗಿದೆ.
ಆರೋಗ್ಯ ಕಾಪಾಡುವ ಉದ್ದೇಶ: ಕೇಂದ್ರ ಸರ್ಕಾರ 2005 ಅಕ್ಟೋಬರ್ 2ರಂದು ನಿರ್ಮಲ ಭಾರತ ಅಭಿಯಾನ ಯೋಜನೆಯನ್ನು ದೇಶದ ಉದ್ದಗಲಕ್ಕೂ ಜಾರಿ ಮಾಡಿದೆ.
ಗ್ರಾಮೀಣ ಪ್ರದೇಶದ ಜನತೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಗ್ರಾಮದಲ್ಲಿನ ಬಯಲು ಶೌಚ, ಕೊಳಚೆ, ಗಲೀಜು ತೊಡೆದುಹಾಕಿ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಿ ಅನಾರೋಗ್ಯ ಮುಕ್ತ ಗ್ರಾಮವನ್ನಾಗಿಸುವ ಉದ್ದೇಶ ಈ ಅಭಿಯಾನದ್ದಾಗಿದೆ. ಗ್ರಾಮೀಣ ಪ್ರದೇಶದ ಎಲ್ಲ ಕುಟುಂಬಗಳ ಮನೆಯಲ್ಲಿ ಶಾಲೆ, ಅಂಗನವಾಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯ ಕಡ್ಡಾಯಗೊಳಿಸಿದೆ.
ಅಧಿಕಾರಿಗಳ ಪ್ರಶಂಸೆ: ಮಹಾತ್ಮ ಗಾಂಧೀಜಿ ಕನಸಾದ ನಿರ್ಮಲ ಭಾರತ ಯೋಜನೆ ಸಾಕಾರಗೊಳಿಸುವಲ್ಲಿ ರಾಮಾಪುರ ಗ್ರಾಪಂ ದಿಟ್ಟ ಹೆಜ್ಜೆ ಹಾಕಿದೆ. ಜೆಲ್ಲೆಯಲ್ಲಿಯೇ ಮಾದರಿ ಗ್ರಾಮ ಎಂಬ ಹೆಗ್ಗಳಿಗೆ ಪಾತ್ರವಾದ ಈ ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಕಾರ್ಯ ಶ್ಲಾಘನೀಯ.
ಗ್ರಾಪಂ ಅಧ್ಯಕ್ಷ ಶರಣಪ್ಪ ಕಡಬಲಕಟ್ಟಿ ಸ್ವತಃ ಕಟ್ಟಡ ಕಾರ್ಮಿಕರಾಗಿದ್ದು, ತಮ್ಮ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಮನೆ ಮನೆಗೆ ತೆರಳಿ ಶೌಚಾಲಯ ನಿರ್ಮಿಸಿಕೊಳ್ಳುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಇದು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ.
ರಾಮಾಪುರ ಮಾದರಿ
ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ವಾಭಿಮಾನಕ್ಕಾಗಿ ಸ್ವಚ್ಛತೆ ಎಂಬ ಘೋಷಣೆಯೊಂದಿಗೆ ಕೈಗೊಂಡ ನಿರ್ಮಲ ಭಾರತ ಅಭಿಯಾನ ಯೋಜನೆ ರೋಣ ತಾಲೂಕಿನ ರಾಮಾಪುರ ಗ್ರಾಪಂ ವ್ಯಾಪ್ತಿಗೊಳಪಡುವ ಚಿಲಝರಿ 209, ಹಿರೇಕೊಪ್ಪ 140, ಕೊಡಗಾನೂರು 235, ಪುರ್ತಗೇರಿ 124, ರಾಮಾಪುರ 271, ಹಾಗೂ ವೀರಾಪುರ 147 ಸೇರಿದಂತೆ ಒಟ್ಟು 1,126 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಗ್ರಾಪಂ ಆಡಳಿತ ಅಕ್ಟೋಬರ್ 2, 2013ರಂದು ಯೋಜನೆಗೆ ಚಾಲನೆ ನೀಡಿದ 2 ತಿಂಗಳಲ್ಲಿ ಶೇ. 80ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಮಾಪುರ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ರೋಣ ತಾಪಂ ವ್ಯಾಪ್ತಿಯಲ್ಲಿ 37 ಸಾವಿರ ಶೌಚಾಲಯ ನಿರ್ಮಾಣ ಗುರಿ ಹೊಂದಿದ್ದು, ಅದಕ್ಕೆ ರಾಮಾಪುರ ಗ್ರಾಮ ಪಂಚಾಯಿತಿಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.
- ಎಸ್.ಎಂ. ಪಿಡಶೆಟ್ಟಿ, ರೋಣ ತಾಪಂ ಇಒ
ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಶೌಚ ಪದ್ಧತಿ ತೊಡೆದು ಹಾಕಿ ಶೌಚಾಲಯ ನಿರ್ಮಾಣ ಕಡ್ಡಾಯ ಎಂದು ಜಿಪಂ ನೀಡಿದ ಆದೇಶದನ್ವಯ ರಾಮಾಪುರ ಗ್ರಾಪಂಗೆ 1,126 ಶೌಚಾಲಯ ನಿರ್ಮಿಸಲು ಅನುದಾನ ಮಂಜೂರಾಗಿದೆ. ಅದರಂತೆ ಕಾಮಗಾರಿ ತೀವ್ರಗತಿಯಲ್ಲಿ ಸಾಗಿದೆ. 2014 ಮಾರ್ಚ್ ಅಂತ್ಯಕ್ಕೆ ಎಲ್ಲ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಲಾಗುವುದು.
- ಶರಣಪ್ಪ ಕಡಬಲಕಟ್ಟಿ, ರಾಮಾಪುರ ಗ್ರಾಪಂ ಅಧ್ಯಕ್ಷ
ಡಿ.ಜೆ. ಮೋಮಿನ್