ಅಪಾಯದ ಟಿಸಿ ಇದೆ ಎಚ್ಚರಿಕೆ..!
ಕನ್ನಡಪ್ರಭ ವಾರ್ತೆ, ಗದಗ, ಡಿ. 9
ತುಕ್ಕು ಹಿಡಿದಿರುವ ವಿದ್ಯುತ್ ಕಂಬ, ಸುಟ್ಟಿರುವ ಕೇಬಲ್, ಹೊರಗಡೆನೇ ಕಾಣುತ್ತಿರುವ ವೈರ್, ತಂತಿಗಳು ಅವಘಡಕ್ಕೆ ಹೇಳಿ ಮಾಡಿಸಿದಂತಾಗಿರುವುದು ಇದು ತಾಲೂಕಿನ ನಾರಾಯಣಪುರ ಗ್ರಾಮದಲ್ಲಿರುವ ಟ್ರಾನ್ಸ್ಫಾರ್ಮರ್ ದುಸ್ಥಿತಿ.
ಕಳೆದ ಹಲವು ವರ್ಷಗಳಿಂದ ಟ್ರಾನ್ಸ್ಫಾರ್ಮರ್ನ ಕಂಬಗಳು ತುಕ್ಕುಹಿಡಿದಿವೆ. ಅಲ್ಲದೇ ಇದರ ಪಕ್ಕದಲ್ಲಿಯೇ ಮನೆಗಳಿದ್ದು, ಈ ಟ್ರಾನ್ಸ್ಫಾರ್ಮರನ್ನು ಸ್ಥಳಾಂತರಿಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಅಳಲಾಗಿದೆ.
ಗದಗ ನಗರ ಪ್ರದೇಶದಿಂದ ಕೇವಲ 20 ಕಿ.ಮೀ. ದೂರದಲ್ಲಿರುವ ನಾರಾಯಣಪುರ ಗ್ರಾಮವು ಚಿಕ್ಕ ಗ್ರಾಮವಾಗಿದ್ದು, ಇದು ಕೋಟುಮಚಗಿ ಗ್ರಾಪಂ ವ್ಯಾಪ್ತಿಗೆ ಒಳಪಡುತ್ತದೆ. ಈ ಗ್ರಾಮಕ್ಕೆ ವಿದ್ಯುತ್ ಕಲ್ಪಿಸುವ ಟ್ರಾನ್ಸ್ಫಾರ್ಮರ್ ಕಳೆದ ಹಲವು ವರ್ಷಗಳಿಂದ ದುಸ್ಥಿತಿಯಲ್ಲಿದೆ.
ರಾಜ್ಯಹೆದ್ದಾರಿ ಬಳಿಯೇ ಟ್ರಾನ್ಸ್ಫಾರ್ಮರ್: ಈ ಟ್ರಾನ್ಸ್ಫಾರ್ಮರ್ ಗದಗದಿಂದ ರೋಣಕ್ಕೆ ಸಂಪರ್ಕಿಸುವ ರಾಜ್ಯಹೆದ್ದಾರಿಯ ಬದಿಯಲ್ಲಿಯೇ ಇದೆ. ರೋಣದಿಂದ ಗದಗಕ್ಕೆ ತೆರಳುವ ಸಂದರ್ಭದಲ್ಲಿ ಈ ಟ್ರಾನ್ಸ್ಫಾರ್ಮರ್ ಕಂಬವು ಕಾಣುವುದಿಲ್ಲ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ವೇಗವಾಗಿ ಸಂಚರಿಸುವ ವಾಹನಗಳು ಆಯತಪ್ಪಿ ಈ ಟ್ರಾನ್ಸ್ಫಾರ್ಮರ್ಗೆ ಡಿಕ್ಕಿ ಹೊಡೆದರೆ ಸ್ಥಳದಲ್ಲಿಯೇ ವಾಹನ ಸುಟ್ಟು ಕರಕಲಾಗುವುದು ಖಂಡಿತ. ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸುವಂತೆ ನಾರಾಯಣಪುರದ ಗ್ರಾಮಸ್ಥರು ಸಂಬಂಧಪಟ್ಟ ಕೆಇಬಿ ಅಧಿಕಾರಿಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ನೆಲದಿಂದ 2 ಅಡಿ ಮೇಲೆ ಟಿಸಿ: ಈ ಟ್ರಾನ್ಸ್ಫಾರ್ಮರ್ ನೆಲದಿಂದ ಕೇವಲ 2 ಅಡಿಯಷ್ಟು ಮೇಲಿದೆ. ಚಿಕ್ಕಮಕ್ಕಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಲ್ಲದೇ ಟ್ರಾನ್ಸ್ಫಾರ್ಮರ್ಗೆ ಅಳವಡಿಸಿರುವ ಕೆಲವು ವೈರ್ಗಳು ಸುಟ್ಟಿವೆ. ಇನ್ನು ಕೆಲವು ಟ್ರಾನ್ಸ್ಫಾರ್ಮರ್ನ ತುಂಬೆಲ್ಲ ಹರಡಿ ಕೆಳಗೆ ಬಿದ್ದಿವೆ. ಇನ್ನು ಟ್ರಾನ್ಸ್ಫಾರ್ಮರ್ನ ಬಿಡಿಭಾಗಗಳು ಹೊರಗಡೆ ಕಾಣುತ್ತಿದ್ದು, ಅಪಘಾತಕ್ಕೆ ಹೇಳಿಮಾಡಿಸಿರುವಂತಹ ಜಾಗದಂತಿದೆ. ಇದರ ಪಕ್ಕದಲ್ಲಿಯೇ ಮನೆಗಳಿದ್ದು, ಯಾವಾಗಬೇಕಾದರೂ ಅಪಘಾತ ಸಂಭವಿಸಬಹುದಾಗಿದೆ.
ವಿದ್ಯುತ್ ಕಂಬದ ಕೆಳಗೆ ನೀರಿನ ಟ್ಯಾಂಕ್: ಗ್ರಾಮದಲ್ಲಿರುವ ಟ್ರಾನ್ಸ್ಫಾರ್ಮರ್ನ ಸ್ಥಿತಿಯಂತೂ ಹೇಳತೀರದಾಗಿದೆ. ಇದರೊಟ್ಟಿಗೆ ಈ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಇನ್ನೆರಡು ವಿದ್ಯುತ್ ಕಂಬಗಳ ಸ್ಥಿತಿಯೂ ಹೀಗೆ ಇದೆ. ಈ ಟ್ರಾನ್ಸ್ಫಾರ್ಮರ್ ಬಳಿಯೇ ಇನ್ನೆರಡು ವಿದ್ಯುತ್ ಕಂಬಗಳನ್ನು ಅಳವಡಿಸಿದ್ದು, ಈ ಕಂಬಗಳ ಕೆಳಗೆ ಸಾರ್ವಜನಿಕರಿಗೆ ನೀರು ಪೂರೈಸುವ ಟ್ಯಾಂಕ್ ಇದೆ. ಈ ಕಂಬದಲ್ಲಿ ಹೈ ವೋಲ್ಟೇಜ್ ಕರೆಂಟ್ ಪ್ರವಹಿಸುತ್ತಿದ್ದು, ಮಳೆಗಾಲದಲ್ಲಿ ನೀರಿನ ತಂಪಿನಿಂದಾಗಿ ಸಿಸ್ಟನ್ಗೆ ಹಲವು ಬಾರಿ ಕರೆಂಟ್ ಪ್ರವಹಿಸಿ ಹಲವು ಜನರಿಗೆ ಶಾಕ್ ನೀಡಿದೆ. ಈ ಕುರಿತು ಕೆಇಬಿ ಹಾಗೂ ಗ್ರಾಪಂಗೆ ತಿಳಿಸಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ.
ಹತ್ತಾರು ವರ್ಷಗಳಿಂದ ಈ ವಿದ್ಯುತ್ ಕಂಬವು ದುಸ್ಥಿತಿಯಲ್ಲಿದ್ದರೂ ಸಂಬಂಧಿಸಿದ ಅಧಿಕಾರಿಗಳು ಈ ಟ್ರಾನ್ಸ್ಫಾರ್ಮರ್ ಸ್ಥಳಾಂತರಿಸಲು ಇಲ್ಲವೇ ದುರಸ್ತಿಗೊಳಿಸಲು ಕ್ರಮ ಕೈಗೊಂಡಿಲ್ಲ. ಈ ಟ್ರಾನ್ಸಫಾರ್ಮರ್ ರಾಜ್ಯ ಹೆದ್ದಾರಿ ಹಾಗೂ ಸಾರ್ವಜನಿಕರ ಮನೆಯ ಅಕ್ಕಪಕ್ಕದಲ್ಲಿಯೇ ಇದೆ. ಕೆಇಬಿ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಸ್ಥರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು.
-ವೀರೇಶ ಮುದೋಳಮಠ
ಗ್ರಾಮಸ್ಥ
-ಅಜೀಜಅಹ್ಮದ ಬಳಗಾನೂರ