ಕಡಲೆ ಬೆಳೆ ಕ್ಷೇತ್ರೋತ್ಸವ
ನರಗುಂದ: ತಾಲೂಕಿನ ಸುರಕೋಡ ಗ್ರಾಮದ ರೈತ ಭೀಮಪ್ಪ ಮುತ್ತಿಣ್ಣನವರ ಹೊಲದಲ್ಲಿ ಕಡಲೆ ಬೆಳೆಗೆ ಬಿದ್ದರುವ ಕೀಟಗಳು ಮತ್ತು ಇತರೆ ಹುಳುಗಳನ್ನು ಸಾವಯವ ಕೃಷಿ ಪದ್ಧತಿ ಆಧಾರದಲ್ಲಿ ನಿಯಂತ್ರಣ ಮಾಡಿ, ಉತ್ತಮ ಬೆಳೆ ಬೆಳೆದಿದ್ದು, ಈಚೆಗೆ ಅವರ ಹೊಲದಲ್ಲಿ ಕಡಲೆ ಬೆಳೆ ಕ್ಷೇತ್ರೋತ್ಸವ ನಡೆಸಲಾಯಿತು. ಕಂಪನಿಯ ಅಧಿಕಾರಿ ಜಿ.ಎಸ್. ಕುಲಕರ್ಣಿ ಮಾತನಾಡಿ, ಪ್ರಚಲಿತದಲ್ಲಿ ಎಲ್ಲ ರೈತರು ವಿಷಪೂರಿತ ಔಷಧಿಗಳನ್ನು ಬೆಳೆಗೆ ಸಿಂಪಡಿಸುವುದರಿಂದ ಅವುಗಳು ಮುಂದೆ ವಿಷ ಪೂರಿತ ಆಹಾರವಾಗಿ ರೂಪವಾಗುತ್ತವೆ. ಅವುಗಳನ್ನು ನಾವು ಆಹಾರಕ್ಕೆ ಬಳಕೆ ಮಾಡುವುದರಿಂದ ಮನುಷ್ಯರಿಗೆ ಹಲವಾರು ಕಾಯಿಲೆ ಬರುತ್ತವೆ. ಅದಕ್ಕೆ ಪ್ರತಿಯೊಬ್ಬ ರೈತರೂ ಈ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು. ಈ ಕ್ಷೇತ್ರೋತ್ಸವಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ 300ಕ್ಕೂ ಹೆಚ್ಚು ರೈತರು ಆಗಮಿಸಿದ್ದು ವಿಶೇಷವಾಗಿತ್ತು.