ಜೋಡು ರಸ್ತೆ ನಿರ್ಮಾಣಕ್ಕೆ ಆಗ್ರಹ
ನರೇಗಲ್ಲ: ಕರ್ನಾಟಕ ರಕ್ಷಣಾ ವೇದಿಕೆ ರೋಣ ತಾಲೂಕು ಘಟಕ ಹಾಗೂ ನರೇಗಲ್ಲ ನಗರ ಘಟಕದ ವತಿಯಿಂದ ಸ್ಥಳೀಯ ಪೊಲೀಸ್ ಠಾಣೆಯಿಂದ ಕನಕದಾಸ ಶಿಕ್ಷಣ ಸಂಸ್ಥೆವರೆಗೆ ಹಾಗೂ ಹೊಸ ಬಸ್ ನಿಲ್ದಾಣದಿಂದ ಅನ್ನದಾನೇಶ್ವರ ಕಾಲೇಜ್‌ವರೆಗೂ ಜೋಡು ರಸ್ತೆ ಹಾಗೂ ಮಧ್ಯದಲ್ಲಿ ದೀಪಾಲಂಕಾರ ಮಾಡುವಂತೆ ಆಗ್ರಹಿಸಿ ಕರವೇ ಪದಾಧಿಕಾರಿಗಳು ಸೋಮವಾರ ಪಪಂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಮಾತನಾಡಿ, ನರೇಗಲ್ಲ ಮೂಲತಃ ಶಿಕ್ಷಣ ಕೇಂದ್ರ. ಇಲ್ಲಿ 35ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿದ್ದು ಕಾಲೇಜು, ನರ್ಸರಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಿಕ್ಷಣಕ್ಕಾಗಿ ಚಿಕ್ಕ ಚಿಕ್ಕ ಮಕ್ಕಳು ಸ್ಥಳೀಯವಾಗಿ ಹಾಗೂ ರೋಣ ಗಜೇಂದ್ರಗಡ, ನಿಡಗುಂದಿ ಹಾಲಕೇರೆ, ಹಿರೆಮ್ಯಾಗೇರಿ ಅಬ್ಬಿಗೇರಿ ಹೀಗೆ ಹಲವಾರು ಗ್ರಾಮಗಳಿಂದ ಬರುತ್ತಾರೆ. ಬೆಳಗಿನ ವೇಳೆ ಹಾಗೂ ಸಂಜೆ ಶಾಲೆ ಬಿಡುವ ವೇಳೆಯಲ್ಲಿ ಪ್ರಮುಖ ರಸ್ತೆಯುದ್ದಕ್ಕೂ ಮಕ್ಕಳು ಸಾಮಾನ್ಯವಾಗಿ ನಡೆದಾಡುವುದರಿಂದ ಈ ರಸ್ತೆಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆಗಳನ್ನು ಮೊದಲು ಅಗಲೀಕರಣ ಮಾಡುವುದರ ಜತೆಗೆ ಡಬಲ್ ರಸ್ತೆ ಮಾಡಿ, ಪಾದಚಾರಿಗಳಿಗೆ ಪ್ರತ್ಯೇಕ ಮಾರ್ಗ ಮಾಡಬೇಕಾದ ಅನಿವಾರ್ಯತೆ ಇದೆ. ಅದರೊಂದಿಗೆ ಈ ರಸ್ತೆಯಲ್ಲಿ ರಾತ್ರಿ ಪ್ರಯಾಣಿಸುವಾಗ ವಿದ್ಯುತ್ ದೀಪಗಳ ಕೊರತೆಯೂ ಇದೆ. ಕಾರಣ ಡಬಲ್ ರಸ್ತೆಯ ಮಧ್ಯದಲ್ಲಿ ದೀಪಾಲಂಕಾರ ಮಾಡಿದಲ್ಲಿ ನಗರ ಸುಂದರವಾಗಿರುವುದರ ಜತೆಗೆ ಅಪಾಯಗಳನ್ನು ತಡೆಗಟ್ಟಬಹುದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಕಾಳೆ, ಸ್ಥಳೀಯ ಘಟಕದ ಅಧ್ಯಕ್ಷ ಮೌಲಾಸಾಬ್ ಕುಂದಗೋಳ, ಕಾರ್ಯದರ್ಶಿ ರಮೇಶ ಕಾಟಿ, ಮಹ್ಮದಸಾಬ್ ನಸೇಖಾನ, ರಿಯಾಜ ಹೊಸಮನಿ, ರವಿ ಓಲಿ, ಇಸ್ಮಾಯಿಲ್, ಕುಂದಗೋಳ, ರೈಮಾನಸಾಬ್ ಹೊಸಮನಿ, ನಿಂಗಪ್ಪ ಮಡಿವಾಳರ, ಶರಣಪ್ಪ ಮಾರನಬಸರಿ, ರೈಮಾನಸಾಬ್ ಬಾಗವಾನ, ಸುರೇಶ ಗಜಕೋಶ, ಮೈಬೂಸಾಬ್ ನದಾಫ ಮುಂತಾದವರು ಇದ್ದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಾಧಿಕಾರಿ ಕಟಗಿ, ಈ ಮನವಿಯನ್ನು ಸದ್ಯದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಅದಕ್ಕೆ ಸಾಧ್ಯವಾದ ಮಟ್ಟಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ ಎಂದರು.