ನಾರಿಯರಿಗೆ ಕುಂಕುಮ ಸಂಸ್ಕೃತಿ ಪ್ರತೀಕ
ಕನ್ನಡಪ್ರಭ ವಾರ್ತೆ, ಗದಗ, ಡಿ. 9
ಭಾರತೀಯ ನಾರಿಯರಿಗೆ ಕುಂಕುಮ ಆಧ್ಯಾತ್ಮಿಕ ಹಾಗೂ ಸಂಸ್ಕೃತಿಯ ಪ್ರತೀಕವಾಗಿದ್ದು, ಇಂದಿನ ಕಲಬೆರಕೆ ಯುಗದಲ್ಲಿ ಧಾರ್ಮಿಕತೆಯ ಮಹತ್ವ ಪಡೆದ ಕುಂಕುಮ ಕೂಡ ಕಲಬೆರಕೆಯಿಂದ ಕೂಡಿದ್ದು, ಶುದ್ಧ ಕುಂಕುಮವನ್ನು ಮನೆಯಲ್ಲಿಯೇ ತಯಾರಿಸಿ ಧರಿಸಬಹುದಾಗಿದೆ ಎಂದು ಗೌರಕ್ಕ ಪಾಟೀಲ ಹೇಳಿದರು.
ಅವರು ಈಚೆಗೆ ಸುವರ್ಣ ಲೇಡಿಸ್ ಕ್ಲಬ್ ವತಿಯಿಂದ ನಗರದ ವಕೀಲ ಚಾಳನಲ್ಲಿರುವ ಮರಾಠಿ ಪ್ರೇಮಿ ಮಂಡಳದಲ್ಲಿ ಶುದ್ಧ ಕುಂಕುಮ ತಯಾರಿಕಾ ವಿಧಾನ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಶುದ್ಧ ಕುಂಕುಮ ತಯಾರಿಕಾ ವಿಧಾನ, ಅದರ ಮಹತ್ವದ ಕುರಿತು ತಿಳಿಸಿದರು. ಇಂದಿನ ಯುವತಿಯರು ಫ್ಯಾಶನ್‌ಗೆ ಮಾರುಹೋಗಿ ಕುಂಕುಮ ಧರಿಸುವುದನ್ನು ನಿರಾಕರಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯೋಗಶಾಸ್ತ್ರದ ಪ್ರಕಾರ ಹಣೆಯಲ್ಲಿ ಧರಿಸುವ ಕುಂಕುಮವು ದುಷ್ಟ ಶಕ್ತಿಗಳ ವಿನಾಶಕಾರಕ ಸಂಕೇತ ಹಾಗೂ ಧಾರ್ಮಿಕತೆಯ ಸ್ವರೂಪ ಚಿಹ್ನೆಯಾಗಿದೆ. ಆದ್ದರಿಂದ ಮಾತೆಯರು ಆಧುನಿಕ ಯುವತಿಯರಿಗೆ ಕುಂಕುಮ ಧರಿಸುವುದರ ಮಹತ್ವದ ಕುರಿತು ಮನದಟ್ಟು ಮಾಡಿಕೊಡಬೇಕಾಗಿದೆ. ಭಾರತೀಯ ಸಂಪ್ರದಾಯದಲ್ಲಿ ತಲೆಯ ಮೇಲೆ, ಹಣೆಯ ಮಧ್ಯ, ಉದ್ದ, ಅಡ್ಡ, ವೃತ್ತಾಕಾರದ ವಿವಿಧ ರೀತಿಯಲ್ಲಿ ಕುಂಕುಮ ಧರಿಸುವ ಸಂಪ್ರದಾಯವಿದ್ದು, ಪ್ರತಿಯೊಂದಕ್ಕೂ ತನ್ನದೇ ಆದ ವಿಶಿಷ್ಟತೆಯಿದೆ ಎಂದರು. ಬಸವಾ, ಛಾಯಾ ಪವಾರ, ಸುಷ್ಮಾ ಅಬ್ಬಿಗೇರಿ, ಪದ್ಮಜಾ ಕುಲಕರ್ಣಿ, ಪ್ರತಿಮಾ ಶೆಟ್ಟಿ, ಭಾರತಿ ಬದಿ, ಅನುರಾಧಾ ಬಸವಾ, ರಜನಿಬಾಯಿ ಪಾಟೀಲ, ಲತಾ ಬಸವಾ, ಸುಮನ ಪಾಟೀಲ, ಜಾನಕಿ ರಂಗಾಪುರ ಮುಂತಾದವರು ಪಾಲ್ಗೊಂಡಿದ್ದರು. ರಾಜೇಶ್ವರಿ ಕುಲಕರ್ಣಿ ಪ್ರಾರ್ಥಿಸಿದರು. ಸುವರ್ಣ ಲೇಡಿಸ್ ಕ್ಲಬ್‌ನ ಅಧ್ಯಕ್ಷೆ ಶೈಲಜಾ ಕವಲೂರ ಸ್ವಾಗತಿಸಿದರು. ಗಿರಿಜಾ ಅಕ್ಕೂರ ನಿರೂಪಿಸಿದರು. ವಿಜಯಾ ವೈದ್ಯ ವಂದಿಸಿದರು.
--
ಉರ್ದು ಶಾಲೆಗೆ ವಾಟರ್ ಫಿಲ್ಟರ್ ದೇಣಿಗೆ
ಗಜೇಂದ್ರಗಡ: ಸರ್ಕಾರಿ ಸ್ವಾಮ್ಯದ ದೇಶದ ಉನ್ನತ ಶ್ರೇಣಿಯ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಗ್ರಾಹಕರ ಅಭ್ಯುದಯ ವ್ಯವಹಾರ ಜತೆ ಸಾಮಾಜಿಕ ಸೇವೆಗೂ ಆದ್ಯತೆ ನೀಡಿದೆ ಎಂದು ಸ್ಥಳೀಯ ಎಸ್.ಬಿ.ಎಚ್. ಶಾಖಾ ಪ್ರಬಂಧಕ ಎಂ.ವ್ಹಿ. ದೀಕ್ಷಿತ್ ಹೇಳಿದರು. ಪಟ್ಟಣದ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಗೆ ಈಚೆಗೆ ವಾಟರ್ ಫಿಲ್ಟರ್ ದೇಣಿಗೆ ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಕೈಗಾರಿಕೆಗಳಿಗೆ, ಉದ್ಯಮದಾರರಿಗೆ ಹಾಗೂ ರೈತರಿಗೆ ಬ್ಯಾಂಕ್ ಸೌಲಭ್ಯ ನೇರವಾಗಿ ಜತೆಗೆ ಗ್ರಾಹಕರಿಗೆ ತ್ವರಿತ ಸೇವೆ ನೀಡುವಲ್ಲಿ ಮುಂಚೂಣಿ ಸಾಧಿಸಿರುವ ಎಸ್.ಬಿ.ಎಚ್. ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡಿದೆ ಎಂದರು. ದೇಶದಲ್ಲಿ ಶೇ. 50ರಷ್ಟು ಮಂದಿಗೆ ಬ್ಯಾಂಕಿಂಗ್ ಸೌಲಭ್ಯ ಹೊಂದಲು ಸಾಧ್ಯವಾಗಿಲ್ಲ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಎಸ್.ಎಂ. ಆರಗಿದ್ದಿ ಮಾತನಾಡಿ, ರಾಷ್ಟ್ರದ ಅರ್ಥವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸುವ ಎಸ್.ಬಿ.ಎಚ್. ಬ್ಯಾಂಕ್ ಸೇವೆ ಸಮಾಜಕ್ಕೆ ಸಾಮೂಹಿಕ ತೃಪ್ತಿ ನೀಡುವಲ್ಲಿ ಯಶಸ್ವಿಯಾಗಿದೆ. ಈ ದಿಸೆಯಲ್ಲಿ ವ್ಯಾವಹಾರಿಕ ಜತೆ ಬ್ಯಾಂಕ್ ಸಾಮಾಜಿಕ ಕಳಕಳಿ ಹೊಂದಿ ಶಾಲಾ ಮಕ್ಕಳಿಗೆ ಶುದ್ಧ ಕುಡಿವ ನೀರು ನೀಡುವ ಸದುದ್ದೇಶದಿಂದ ನೀಡಿದ ಈ ಸೇವೆಯನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಮುಖ್ಯೋಪಾಧ್ಯಾಯ ಬಿ.ವೈ. ಕರ್ನೂಲ, ಅಶ್ರಫಲಿ ಗೊಡೇಕಾರ, ಫಕ್ರುದ್ದೀನ್ ಕಾತರಕಿ, ಬಿ.ಎಚ್. ಬಾಗವಾನ, ಟಿ.ಐ. ಹಣಗಿ, ಎಸ್.ಕೆ. ಖಾಡಗಿ, ಎಸ್.ಬಿ. ಹನಮಕ್ಕನವರ ಉಪಸ್ಥಿತರಿದ್ದರು.