ಹದಗೆಟ್ಟ ರಸ್ತೆ ಸುಧಾರಣೆಗೆ ಕ್ರಮಕೈಗೊಳ್ಳಿ
ಗದಗ ಹಾಗೂ ರೋಣ ಪಟ್ಟಣಗಳ ಮಧ್ಯೆ ಸಂಪರ್ಕ ಕಲ್ಪಿಸುವ ಸವಡಿ, ಹುಯಿಲಗೋಳ ರಸ್ತೆ ಕಳೆದ ಹಲವಾರು ವರ್ಷಗಳಿಂದ ದುಸ್ಥಿತಿಗೆ ತಲುಪಿದೆ. ಇದನ್ನು ದುರಸ್ತಿ ಮಾಡುವ ನಿಟ್ಟಿನಲ್ಲಿ ಈ ಹಿಂದಿನ ಶಾಸಕರಿಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಶಾಸಕರು ಇದಕ್ಕೆ ಅನುದಾನವನ್ನು ನೀಡಿದ್ದರು. ಆದರೆ, ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುವುದೇ ತಿಳಿಯುತ್ತಿಲ್ಲ. ಇದಕ್ಕೂ ಮೊದಲೇ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ.
ಚಿಕ್ಕಮಣ್ಣೂರ, ಮಲ್ಲಾಪುರ, ಸಂದಿಗವಾಡ, ಹಿರೇಮಣ್ಣೂರ, ಡ.ಸ.ಹಡಗಲಿ, ಗುಜಮಾಗಡಿ, ಹುಯಿಲಗೋಳ, ಚಿಕ್ಕೊಪ್ಪ, ಹಿರೇಕೊಪ್ಪ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಸಾವಿರಾರು ಸಾರ್ವಜನಿಕರು ಪ್ರತಿ ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇವರೆಲ್ಲರೂ ನಿತ್ಯವೂ ಪರದಾಡುವಂತಾಗಿದೆ. ಈ ಕುರಿತು ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಲಿಖಿತವಾಗಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಅಭಿವೃದ್ಧಿಯಲ್ಲಿ ಆಗುತ್ತಿರುವ ಹಿನ್ನಡೆಯಿಂದಾಗಿ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಈ ಮಾರ್ಗದಲ್ಲಿ ಸರಿಯಾಗಿ ಬಸ್ ಓಡಿಸುತ್ತಿಲ್ಲ. ಕೇವಲ 2 ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಖಾಸಗಿ ವಾಹನಗಳತ್ತ ಮುಖ ಮಾಡಿದ್ದಾರೆ.
ಈ ಎಲ್ಲ ಸಮಸ್ಯೆಗಳ ಬಗ್ಗೆ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕೂಡಲೇ ಗಮನ ನೀಡಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಈ ಮಾರ್ಗ ಮಧ್ಯದಲ್ಲಿ ಬರುವ 10 ಕ್ಕೂ ಹೆಚ್ಚು ಗ್ರಾಮಗಳ 300ಕ್ಕೂ ಹೆಚ್ಚಿನ ಮಕ್ಕಳು ನಿತ್ಯ ಶಿಕ್ಷಣಕ್ಕಾಗಿ ಗದಗ ನಗರವನ್ನು ಆಶ್ರಯಿಸಿದ್ದಾರೆ. ಸರಿಯಾದ ಸಮಯಕ್ಕೆ ಬಸ್ ಓಡದಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಈ ಬಗ್ಗೆ ಕೂಡಲೇ ಪರಿಹರಿಸಬೇಕು.
ಗದಗ-ಬೆಟಗೇರಿ ಅವಳಿ ನಗರದ ಹಲವಾರು ಬಡಾವಣೆಯಲ್ಲಿ ಸಮರ್ಪಕವಾದ ರೀತಿಯಲ್ಲಿ ಕುಡಿವ ನೀರು ಪೂರೈಕೆ ಮಾಡುತ್ತಿಲ್ಲ. ಅದರಲ್ಲಿಯೂ ಬಡವರೆ ವಾಸಿಸುವ ಎಸ್.ಎಂ. ಕೃಷ್ಣಾ ನಗರ ಮುಂತಾದ ಹಿಂದುಳಿದ ಜನರು ವಾಸಿಸುವ ಭಾಗಗಳಲ್ಲಿ ಕುಡಿವ ನೀರು ಪೂರೈಕೆ ಮಾಡುತ್ತಿಲ್ಲ. ಕುಡಿವ ನೀರಿನ ವಿಷಯವಾಗಿ ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಶ್ರೀಮಂತರು ವಾಸಿಸುವ ಬಡಾವಣೆಗಳಿಗೆ ಪದೇ ಪದೇ ನೀರು ಪೂರೈಸಲಾಗುತ್ತಿದೆ. ಆದರೆ, ಹಿಂದುಳಿದ ವರ್ಗಗಳು ಹಾಗೂ ಬಡವರು ವಾಸಿಸುವ ಬಡಾವಣೆಗಳನ್ನು ಕಡೆಗಣಿಸಲಾಗುತ್ತಿದೆ. ಕೂಡಲೇ ಅವಳಿ ನಗರಕ್ಕೆ ಸಮರ್ಪಕವಾಗಿ ಕುಡಿವ ನೀರು ಪೂರೈಕೆ ಮಾಡುವತ್ತ ಅಧಿಕಾರಿಗಳು ಗಮನ ನೀಡಬೇಕು.
-ಗದಗ ನಿವಾಸಿ