ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈ ಎತ್ತುಗಳಿಗೆ ಚಿಕ್ಕಾ ಬೇಕಿಲ್ಲ

Mainashree
Updated On : 11 Dec 2013, 11:39 am

ನರಗುಂದ: ಎತ್ತುಗಳು ರೈತನ ಮಿತ್ರ. ಕೆಲವು ಎತ್ತುಗಳು ತಮ್ಮ ವಿಶೇಷ ನಡೆಯಿಂದ ರೈತನ ಪ್ರೀತಿಗೆ ಪಾತ್ರವಾಗುತ್ತವೆ. ಅದರಂತೆ ತಾಲೂಕಿನ ಭೈರನಹಟ್ಟಿ ಗ್ರಾಮದ ಬಸವರಾಜ ಪೂಜಾರ ಎನ್ನುವವರ ಎರಡು ಎತ್ತುಗಳು ಹೊಲದಲ್ಲಿನ ಯಾವುದೇ ಕೆಲಸಕ್ಕೆ ತೆಗೆದುಕೊಂಡು ಹೊದರೂ ಹೊಲದಲ್ಲಿನ ರೈತನ ಬೆಳೆಯನ್ನು ತಿನ್ನದೇ ಕೆಲಸ ಮಾಡುತ್ತಿವೆ. ಇದು ಕೇವಲ ಭೈರನಹಟ್ಟಿ ಮಾತ್ರವಲ್ಲ ಸುತ್ತ ಮುತ್ತಲ ಗ್ರಾಮಗಳ ರೈತರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ.
ಸಾಮಾನ್ಯವಾಗಿ ಎತ್ತುಗಳನ್ನು ಹೊಲದಲ್ಲಿ ಬೆಳೆ ಇರುವ ಸಂದರ್ಭದಲ್ಲಿ ಎಡಿ ಹೊಡೆಯುವುದು ಸೇರಿದಂತೆ ಇನ್ನಿತರ ಕಾರ್ಯಕ್ಕೆ ಬಳಸುವ ವೇಳೆಯಲ್ಲಿ ರೈತರು ಎತ್ತುಗಳಿಗೆ ಚಿಕ್ಕಾ (ಬೆಳೆ ತಿನ್ನದಂತೆ ಎತ್ತುಗಳ ಬಾಯಿಗೆ ಹಾಕುವ ಸಾಧನ) ಹಾಕಿ ಕೆಲಸ ಮಾಡುವುದು ಸಾಮಾನ್ಯ. ಹಾಕದಿದ್ದರೆ ಬೆಳೆಯನ್ನು ಎತ್ತುಗಳು ತಿಂದು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಆದರೆ, ಈ ಎತ್ತುಗಳಿಗೆ ಮಾತ್ರ ಚಿಕ್ಕಾ ಹಾಕುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಕೃಷಿ ಕಾರ್ಯ ಮಾಡುವಾಗ ಇವುಗಳು ತಮ್ಮ ಕೆಲಸವನ್ನು ಮಾತ್ರ ಮಾಡುತ್ತವೆ ಹೊರತಾಗಿ ಬೆಳೆಗಳನ್ನು ಯಾವುದೇ ಕಾರಣಕ್ಕೂ ತಿನ್ನಲು ಹೋಗುವುದಿಲ್ಲ.
ರೈತನಿಗೆ ಆಶ್ಚರ್ಯ: ಮೊದ ಮೊದಲು ರೈತ ಬಸವರಾಜ ಇತರ ಎತ್ತುಗಳಂತೆ ಇವರು ಕೂಡಾ ಚಿಕ್ಕಾವನ್ನು ಬಳಸುತ್ತಿದ್ದರು. ಆದರೆ ಒಂದು ದಿನ ಚಿಕ್ಕಾ ಇಲ್ಲದೆ ಹಾಗೆ ಹೋದ ವೇಳೆ ಈ ಎತ್ತುಗಳು ಒಂದೇ ಒಂದು ಬೆಳೆಯನ್ನು ತಿನ್ನದೇ ಸಂಜೆಯವರೆಗೂ ತಮ್ಮ ಕಾಯಕ ಮಾಡುತ್ತಿದ್ದಂತೆ ಸಹಜವಾಗಿ ರೈತನಿಗೂ ಆಶ್ಚರ್ಯವಾಗಿದೆ. ಇದನ್ನು ತನ್ನ ಗೆಳೆಯರು ಹಾಗೂ ಮನೆಯವರೊಂದಿಗೆ ಹೇಳಿ ನಂತರ ಹಲವಾರು ಬಾರಿ ಪರಿಶೀಲಿಸಿದರೂ ತಿನ್ನಲೇ ಇಲ್ಲ.  
ರೈತ ಹಾಕಿದರೆ ಮಾತ್ರ ತಿನ್ನುತ್ತವೆ: ರೈತರು ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕೆಂದು ನಿಲ್ಲಿಸಿದ ಸಂದರ್ಭದಲ್ಲಿ ಅದೇ ಹೊಲದಲ್ಲಿನ ಬೆಳೆಯನ್ನು ರೈತನೇ ಕಿತ್ತು ಹಾಕಿದರೆ ಮಾತ್ರ ತಿನ್ನುತ್ತವೆ. ಬಾಯಿಗೆ ಚಿಕ್ಕಾ ಹಾಕದೇ ಇದ್ದರೂ ಒಂದು ಕಡ್ಡಿಯನ್ನು ತಿನ್ನುವುದಿಲ್ಲ. ರೈತನೇ ಹಾಕಿದಾಗ ಮಾತ್ರ ತಿನ್ನುತ್ತವೆ. ಮೂಕ ಪ್ರಾಣಿಗಳಲ್ಲಿಯೂ ಈ ಸೂಕ್ಷ್ಮತೆ ಅರಿತು ಬದುಕುತ್ತಿರುವುದು ಬೆರಗುಗೊಳಿಸುತ್ತದೆ.
ಪ್ರಶಸ್ತಿ ಪಡೆದಿವೆ: ಈ ಎತ್ತುಗಳು ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಚಕ್ಕಡಿ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement