ದುರ್ಬಲರ ಸೇವೆ ಮಾಡಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 10
ಸಮಾಜದಲ್ಲಿ ಅಸಹಾಯಕರು, ದುರ್ಬಲರ ಸೇವೆ ಮಾಡುವುದೆಂದರೆ ಅದು ಭಗವಂತನ ಸೇವೆಗೆ ಸಮನಾದುದು ಎಂದು ತೋಂಟದ ಸಿದ್ಧಲಿಂಗ ಶ್ರೀಗಳು ಹೇಳಿದರು.
ಹೈಕೋರ್ಟ್ ನ್ಯಾಯವಾದಿ ಮಹಾಂತೇಶ ಹೊಸಮಠ ಅವರ ತಂದೆ ಲಿಂ. ಸಿದ್ಧಲಿಂಗಶಾಸ್ತ್ರಿಗಳು ಹೊಸಮಠ ಅವರ 19ನೇ ಪುಣ್ಯಸ್ಮರಣೆ ಹಾಗೂ ತಾಯಿ ಸುಮಿತ್ರಮ್ಮ ಹೊಸಮಠ ಅವರ ಸ್ಮರಣೋತ್ಸವದ ಅಂಗವಾಗಿ ಪುಣ್ಯಸ್ಮರಣೆ ಟ್ರಸ್ಟ್ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಮಠದ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ಶಿಬಿರದ ನೇತೃತ್ವವಹಿಸಿದ್ದ ವೈದ್ಯಕೀಯ ತಂಡದ ಹಿರಿಯ ವೈದ್ಯ ಡಾ. ಎನ್.ಬಿ. ಪಾಟೀಲ ಮಾತನಾಡಿ, ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ಹೊಂದಬೇಕು. ಅನಾರೋಗ್ಯದ ಬಳಿಕ ಔಷಧಿ ಸೇವನೆಗಿಂತ ಆರೋಗ್ಯವನ್ನು ಸುಸ್ಥಿರವಾಗಿಸಿಕೊಳ್ಳುವ ಮಾದರಿಯ ಜೀವನ ಶೈಲಿ ಅನುಸರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಐಎಂಎ ಅಧ್ಯಕ್ಷ ಡಾ. ಆರ್.ಎನ್. ಪಾಟೀಲ ಮಾತನಾಡಿ, ಶ್ರಮ, ಸಂಸ್ಕೃತಿಯಿಂದ ವಿಮುಖವಾಗಿರುವುದೇ ಬಹುತೇಕ ಅರೋಗ್ಯ ಸಮಸ್ಯೆಗೆ ಕಾರಣವಾಗಿದೆ ಎಂದರು. ಮಹಾಂತೇಶ ಹೊಸಮಠ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು. ಡಾ. ಗೊಜನೂರು, ಪ್ರಕಾಶ ಕರಿಸೋಮನಗೌಡ್ರ ಮುಂತಾದವರು ಪಾಲ್ಗೊಂಡಿದ್ದರು. ಉಮರ್ಜಿ ನಿರೂಪಿಸಿದರು. ಡಾ. ರಾಧಿಕಾ ಕುಲಕರ್ಣಿ ವಂದಿಸಿದರು.