ಮಾನವ ಹಕ್ಕು ಉಲ್ಲಂಘನೆ ನಿಲ್ಲಲಿ
ಕನ್ನಡಪ್ರಭ ವಾರ್ತೆ, ಗದಗ, ಡಿ. 10
ಸಮಾಜ ಹಾಗೂ ಅಧಿಕಾರಿ ವರ್ಗದ ನಿರ್ಲಕ್ಷ್ಯದಿಂದ ಎಲ್ಲ ರಂಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ.ಎಚ್. ಆವಿನ್ ಹೇಳಿದರು.
ಅವರು ಮಂಗಳವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘ ಇವುಗಳ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
1948ರಿಂದ ವಿಶ್ವಮಾನವ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಮಾಜದಲ್ಲಿ ಜಾಗೃತಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಭಾವದಿಂದಾಗಿ ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ ಸಮರ್ಪಕವಾಗಿ ಜಾರಿಯಾಗಿಲ್ಲ. ನಾಗರಿಕ ಸಮಾಜ ಮತ್ತು ಮಾಧ್ಯಮರಂಗ ಈ ಕುರಿತು ಪ್ರಾಮಾಣಿಕ ಹೊಣೆಗಾರಿಕೆ ನಿರ್ವಹಿಸಿ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ದೇಶದಲ್ಲಿ ವ್ಯಾಪಕ ಭ್ರಷ್ಟಾಚಾರದಿಂದ ಸರ್ಕಾರದ ಯೋಜನೆಗಳು ಫಲಾನುಭವಿಗಳಿಗೆ ತಲುಪದೇ ಮಾನವ ಹಕ್ಕುಗಳ ಉಲ್ಲಂಘನೆ ಜರುಗುತ್ತಿದೆ.
ಸಮಾಜದಲ್ಲಿನ ಲೋಪದೋಷ ತಿದ್ದುವ ಕಾರ್ಯಕ್ಕೆ ಪಾರದರ್ಶಕ ಆಡಳಿತಕ್ಕೆ ಸರ್ಕಾರಗಳು ಪ್ರಾಧಾನ್ಯತೆ ನೀಡಬೇಕಾಗಿದೆ. ಈ ಕುರಿತು 1993ರಲ್ಲಿಯೇ ದೇಶದಲ್ಲಿ ಮಾನವ ಹಕ್ಕುಗಳ ರಚನೆಯಾಗಿದ್ದರೂ ಪರಿಣಾಮ ಪ್ರಗತಿದಾಯಕವಾಗಿ ಅನುಷ್ಠಾನವಾಗದೇ ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ಜರುಗುತ್ತಿದೆ. ದೇಶದಲ್ಲಿ ಸಮಾಜಪರ ನೈಜ ಹೋರಾಟಗಾರರ ರಕ್ಷಣೆಗೆ ಆದ್ಯತೆ ನೀಡಬೇಕಿದೆ. ಅಧಿಕಾರಿಗಳು, ಸಂಘ-ಸಂಸ್ಥೆಗಳು ಹಾಗೂ ಸಮಾಜದ ಎಲ್ಲ ಸ್ತರದ ನಾಗರಿಕರು ಉತ್ತಮ ಆಡಳಿತ ನಿರ್ವಹಣೆ ಹಾಗೂ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸುವ ಮೂಲಕ ಮಾನವ ಹಕ್ಕುಗಳ ರಕ್ಷಣೆಗೆ ಶ್ರಮಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ. ಜಾರಿಗೊಳಿಸುವ ಅಧಿಕಾರಿಗಳಲ್ಲಿ ಈ ಕುರಿತು ಪ್ರಾಮಾಣಿಕ ಪ್ರಯತ್ನ ನಡೆಯಬೇಕಿದೆ. ಸಮಾಜದಲ್ಲಿ ಇನ್ನೂ ಬಾಲ್ಯವಿವಾಹ, ಭ್ರೂಣಹತ್ಯೆಯಂತಹ ಅಮಾನವೀಯ ಘಟನೆಗಳು ಕಂಡುಬರುತ್ತಿವೆ. ನಾಗರಿಕರು, ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು ಆಡಳಿತದೊಂದಿಗೆ ಕೈಜೋಡಿಸುವ ಮೂಲಕ ಮಾನವ ಹಕ್ಕುಗಳ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಿರ್ವಹಿಸಬೇಕಿದೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಕಾನೂನು ವಿವಿಯ ಡೀನ್ ಪ್ರೊ. ಸಿ.ಎಸ್. ಪಾಟೀಲ ಮಾತನಾಡಿ, ಸಮುದಾಯದಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಬೆಳವಣಿಗೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಕ್ಕುಗಳ ರಕ್ಷಣೆ ಸಂವಿಧಾನದ ಕಾರ್ಯವಲ್ಲ. ಇದು ನಮ್ಮ ಮೂಲಭೂತ ಹಕ್ಕು ಎಂಬ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಿರಂತರವಾಗಿ ಜರುಗಬೇಕಿದೆ. ಮಾನವ ಹಕ್ಕುಗಳ ಕುರಿತ ನ್ಯಾಯಾಲಯ ಸ್ಥಾಪಿಸುವ ಮೂಲಕ ರಾಜ್ಯ ದೇಶದಲ್ಲಿಯೇ ಪ್ರಥಮ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಸಮಾಜದ ಪ್ರತಿಯೊಬ್ಬರೂ ಈ ಕುರಿತು ಜಾಗೃತಿ ಬೆಳೆಸಿಕೊಂಡು ಹಕ್ಕುಗಳ ರಕ್ಷಣೆಯೊಂದಿಗೆ ಸಮೃದ್ಧ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕಿದೆ ಎಂದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಜಿ.ಸಿ. ರೇಶ್ಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಟುಂಬ ನ್ಯಾಯಾಲಯ ಪ್ರಧಾನ ನ್ಯಾಯಾಧೀಶೆ ಎಂ. ಶೋಭಾ, ಸಿಇಒ ವೀರಣ್ಣ ತುರಮರಿ, ಡಿವೈಎಸ್‌ಪಿ ವಿಜಯಕುಮಾರ್ ಡಂಬಳ, ಅಪರ ಜಿಲ್ಲಾಧಿಕಾರಿ ನಾಗರಾಜ ಮುಂತಾದವರು ಉಪಸ್ಥಿತರಿದ್ದರು. ಪೊಲೀಸ್, ಕಂದಾಯ, ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭವಾನಿ ಗರುಡ ಪ್ರಾರ್ಥಿಸಿದರು. ಉಪವಿಭಾಗಾಧಿಕಾರಿ ಐ.ಜೆ. ಗದ್ಯಾಳ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ನಿರೂಪಿಸಿ, ವಂದಿಸಿದರು.