ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಸಕ, ಸರ್ಕಾರ ಬದ್ಲಾದ್ರೂ ತಪ್ಪದ ಗೋಳು

Mainashree
Updated On : 11 Dec 2013, 11:39 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 10
ಸರ್ಕಾರ ಬದಲಾಯ್ತು, ಶಾಸಕರೂ ಬದಲಾದರು. ಗ್ರಾಮಕ್ಕೆ ಎಲ್ಲ ಮೂಲ ಸೌಲಭ್ಯ ದೊರೆಯುತ್ತವೆ ಎಂಬ ನಿರೀಕ್ಷೆ ಹೊತ್ತ ಗ್ರಾಮಸ್ಥರು ಆಡಳಿತ ವ್ಯವಸ್ಥೆ ವಿರುದ್ಧ ರೋಸಿಹೋಗಿದ್ದಾರೆ. ಹೌದು, ಸೌಲಭ್ಯಕ್ಕಾಗಿ ಪ್ರತಿಭಟಿಸಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಘೇರಾವ್ ಹಾಕಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗದೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಾರ್ಯವೈಖರಿಗೆ ಬೇಸತ್ತು ಮೌನಕ್ಕೆ ಶರಣಾಗಿದ್ದಾರೆ.
ಇದು 3 ಸಾವಿರ ಜನಸಂಖ್ಯೆ ಹೊಂದಿದ ತಾಲೂಕಿನ ರಣತೂರ ಗ್ರಾಮಸ್ಥರ ಗೋಳು. ಅನೇಕ ವರ್ಷಗಳಿಂದ ಯಾವುದೇ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಸಾಕಷ್ಟು ಬಾರಿ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳಿಗೆ ಪಂಚಾಯಿತಿ ಆಡಳಿತ ಮಂಡಳಿಯವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಗ್ರಾಮದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಪ್ಲಾಟ್ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ಪಂಚಾಯಿತಿಯವರು ದೊಡ್ಡ, ದೊಡ್ಡ ದುಂಡಿ ಕಲ್ಲುಗಳನ್ನು ರಸ್ತೆ ಮೇಲೆ ಸುರಿದಿದ್ದು, 2 ತಿಂಗಳು ಕಳೆದರೂ ರಸ್ತೆ ಕಾಮಗಾರಿಗೆ ಮುಂದಾಗಿಲ್ಲ. ಚರಂಡಿಯಿಲ್ಲದೇ ಕಲುಷಿತ ನೀರು ನಿಂತಲ್ಲೇ ನಿಂತಿದ್ದು, ಬಡಾವಣೆ ರೋಗ ಉತ್ಪಾದನೆ ಕೇಂದ್ರವಾಗಿ ಪರಿವರ್ತನೆಯಾಗುತ್ತಿರುವುದು ಕಳವಳಕಾರಿ ಸಂಗತಿ. ಜತೆಗೆ ಸಂಚಾರಕ್ಕೆ ಸಂಚಕಾರ ತಂದಿದೆಯಲ್ಲದೆ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಅನಿವಾರ್ಯತೆ ಬಂದಿದೆ.
ಕಾಮಗಾರಿಯಲ್ಲಿ ಅವ್ಯವಹಾರ: ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೈಗೆತ್ತಿಕೊಂಡ ಬಹುತೇಕ ಕಾಮಗಾರಿಗಳು ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿವೆಯಲ್ಲದೆ ಭಾರೀ ಹಣದ ಅವ್ಯವಹಾರ ನಡೆದ ಬಗ್ಗೆ ಗ್ರಾಮಸ್ಥರಿಂದ ಗಂಭೀರ ಆರೋಪ ಕೇಳಿಬರುತ್ತಿದೆ. ಗ್ರಾಮದಲ್ಲಿರುವ ಕೆರೆ ಹೂಳು ತೆಗೆಯಲು ಪದೇ ಪದೇ ಬಿಲ್ ತೆಗೆಯಲಾಗಿದೆ. ಸಿಸಿ ರಸ್ತೆ ಕಾಮಗಾರಿಯಲ್ಲಿಯೂ ಅವ್ಯವಹಾರ ನಡೆದಿದೆ. ಸಾರ್ವಜನಿಕ ಶೌಚಾಲಯ ಇಲ್ಲದೇ ಮಹಿಳೆಯರು ರಸ್ತೆ ಪಕ್ಕದಲ್ಲಿಯೇ ಬಹಿರ್ದೆಸೆಗೆ ಹೋಗುತ್ತಿದ್ದು, ಜನಪ್ರತಿನಿಧಿಗಳು ಗಮನಹರಿಸಿಲ್ಲ. ಇದರಿಂದ ಜನತೆ ಅಸಮಾಧಾನಗೊಂಡಿದ್ದಾರೆ.
ಗ್ರಾಮದಲ್ಲಿನ ಅವ್ಯವಸ್ಥೆಯನ್ನು ನೋಡಿದರೆ ಮಲೇರಿಯಾ, ಡೆಂಘೀ, ಕಾಲರಾ ರೋಗಗಳು ಬರುವುದರಲ್ಲಿ ಸಂಶಯವಿಲ್ಲ. ಕೇವಲ ವ್ಯವಸ್ಥೆಯನ್ನು ದೂರುವುದರ ಹೊರತಾಗಿ ಏನೂ ಮಾಡದಂತಾಗಿದೆ ಎಂದು ಬಡಾವಣೆಯ ನಿವಾಸಿಗಳಾದ ಶರಣಪ್ಪ ಮುಂಡರಗಿ, ಹನುಮಂತಪ್ಪ ಬಾರಕೇರ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಳೆದ ತಿಂಗಳು 19ರಂದು ಶಾಸಕರು ಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿದಾಗ ರಸ್ತೆಯಲ್ಲಿಯೇ ಗ್ರಾಮಸ್ಥರು ಅವರನ್ನು ತಡೆದು ಮೊದಲು ಗ್ರಾಮದಲ್ಲಿ ಸಂಚರಿಸಿ ನಂತರ ಕಾರ್ಯಕ್ರಮಕ್ಕೆ ಹೋಗಿ ಎಂದು ಆಗ್ರಹಿಸಿದ್ದರು. ಶಾಸಕರು ಗ್ರಾಮಸ್ಥರ ವಿರೋಧದ ನಡುವೆಯೂ ಹಾರಿಕೆ ಉತ್ತರ ನೀಡಿ ಸಭೆಗೆ ಮೊದಲು ಅವಕಾಶ ಮಾಡಿ ಕೊಡಿ, ಗ್ರಾಮದ ಸಮಸ್ಯೆ ಬಗೆಹರಿಸೋಣ ಎಂದು ಹೇಳಿ ಮುಂದೆ ನಡೆದರು ಎಂದು ಗ್ರಾಮದ ಗಾಳೆಪ್ಪ ಸಂಗಮ್ಮನವರ ಹೇಳುತ್ತಾರೆ. ನಿತ್ಯ ರಸ್ತೆ ಮೇಲೆ ಹರಿದು ನಿಂತಿರುವ ಗಲೀಜು ನೀರಿನ ದುರ್ವಾಸನೆಯಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಆಗುತ್ತಿದ್ದು, ಗ್ರಾಮ ಪಂಚಾಯಿತಿಯವರಿಗೆ ಅನೇಕ ಬಾರಿ ತಿಳಿಸಿದರೂ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪವನ್ನು ಬಡಾವಣೆಯ ಮಹಿಳೆಯರು ಮಾಡುತ್ತಾರೆ.
ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ, ಚರಂಡಿ, ರಸ್ತೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತಿಯವರು ಗಮನಹರಿಸಬೇಕಾಗಿದೆ.

ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement