ಸುದ್ದಿ ಸಂಕ್ಷೇಪ
ಕಾಯಕ ನಿಷ್ಠೆ ಇರಲಿ
ಗದಗ: ಮಾಡುವ ಕಾಯಕದಲ್ಲಿ ನಿಷ್ಠೆ, ಶ್ರದ್ಧೆಯಿಂದ ಮನಪೂರ್ವಕವಾಗಿ ಮಾಡಿದರೆ ಶಾಲೆಯಲ್ಲಿರುವ ಜೀವಂತ ದೇವರುಗಳಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪ್ರಧಾನ ಶಿಕ್ಷಕ ಡಿ.ಎಸ್. ಬಾಪ್ರಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಪಿಪಿಜಿ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಬೆಟಗೇರಿ ಕ್ಲಸ್ಟರ್ ನಂ-3ರ ಸಮಾಲೋಚನೆ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಓರ್ವ ಕ್ರಿಯಾಶೀಲ ಹಾಗೂ ಸೃಜನಶೀಲ ಶಿಕ್ಷಕರನ್ನು ಗುರುತಿಸಿ ಗೌರವಿಸುವುದರಿಂದ ಇತರರಿಗೂ ಕಾರ್ಯ ಮಾಡಲು ಪ್ರೇರಣೆ ದೊರೆತಂತಾಗುತ್ತದೆ ಎಂದರು. ಬಿ.ಬಿ. ಕುಂದಗೋಳ ಮಾತನಾಡಿ, ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ವ್ಯಕ್ತಿ ಎತ್ತರಕ್ಕೆ ಏರಬಹುದೆನ್ನುವುದಕ್ಕೆ ಬಾಪ್ರಿಯವರಿಗೆ ಸಂದ ಪುರಸ್ಕಾರ ಸಾಕ್ಷಿಯಾಗಿದೆ ಎಂದರು.
ಸಾನ್ನಿಧ್ಯವಹಿಸಿದ್ದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಶಿಕ್ಷಕರ ಸೇವೆಯು ಸಮಾಜ ಸೇವೆಯಾಗಿದೆ. ಸಮಾಜವನ್ನು ತಿದ್ದುವುದು ಒಂದು ಪೂಜೆಯಾಗಿದೆ. ಅದನ್ನು ಶ್ರದ್ಧೆಯಿಂದ ಮಾಡಬೇಕು. ಅಂಧ, ಅನಾಥ, ದೀನ ದುರ್ಬಲರ ಸೇವೆಯನ್ನು ಕೈಲಾದಷ್ಟು ಮಾಡಿ ತಮ್ಮ ಪಾಲಿನ ಕರ್ತವ್ಯವನ್ನು ಪೂರ್ಣಗೊಳಿಸಬೇಕು ಎಂದರು. ಕ್ಲಸ್ಟರ್ ಸಂಯೋಜಕ ಶಿವಾನಂದ ಗಿಡ್ನಂದಿ ಸ್ವಾಗತಿಸಿದರು. ಪ್ರಧಾನ ಶಿಕ್ಷಕ ಎಸ್.ಎಂ. ಕದಡಿ ನಿರೂಪಿಸಿ, ವಂದಿಸಿದರು.
ಇಂದು ಮ್ಯಾರಥಾನ್
ಗದಗ: ಬಾಲ್ಯ ವಿವಾಹ ನಿಷೇಧ ಕುರಿತು ಅರಿವು ಹಾಗೂ ಜಾಗೃತಿಗಾಗಿ ಜಿಲ್ಲಾಡಳಿತದ ವತಿಯಿಂದ ಡಿ. 11ರ ಬೆಳಗ್ಗೆ 7 ಗಂಟೆಗೆ ನಗರದ ಗಾಂಧಿ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಈ ಮ್ಯಾರಥಾನ್ ಗದಗ ಜಿಲ್ಲೆಯ ಸಮಸ್ತ ನಾಗರಿಕರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹುಯಿಲಗೋಳ ರಸ್ತೆ, ರೇವಿಂಗಟನ್ ರಸ್ತೆ, ಕಿಲ್ಲಾಓಣಿ, ವಕ್ಕಲಗೇರಿಯಿಂದ ಟೆಂಗಿನಕಾಯಿ ಬಜಾರ್‌ವರಗೆ, ಜವಳಹಳ್ಳದ ಉಳಿದ ಭಾಗಗಳು, ಅಂಭಾಭವಾನಿ ವೃತ್ತ, ಕಲ್ಮಠ ಓಣಿ, ತುಳಜಾಭವಾನಿ ಗುಡಿ, ಬಣ್ಣದ ನಗರ, ಎಸ್.ಎಂ.ಕೆ ನಗರದ ಆಟೋ ಸ್ಟ್ಯಾಂಡ್, ಕ್ರಿಶ್ಚಿಯನ್ ಕಾಲೋನಿ, ಆಧಿಶಕ್ತಿ ಗುಡಿ ಸುತ್ತಮುತ್ತ, ಹುಬ್ಳಿಮಠ ಭಾವಿ ಸುತ್ತಮುತ್ತ, ಚಾಮುಂಡೇಶ್ವರಿ ಗುಡಿ ಸುತ್ತಮುತ್ತ, 12ನೇ ನಂ, ಶಾಲೆ ಸುತ್ತಮುತ್ತಲೂ ಬುಧವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅನುದಾನ ಸದ್ಬಳಕೆಯಾಗಲಿ: ತಳವಾರ
ರೋಣ: ಸರ್ಕಾರ ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿದ ಅನುದಾನ ಸಮರ್ಪಕವಾಗಿ ಸದ್ಬಳಕೆಯಾಗಬೇಕು. ಆ ದಿಸೆಯಲ್ಲಿ ಅಧಿಕಾರಿಗಳ ಕಾರ್ಯ ಪ್ರಮುಖವಾಗಿದೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ, ಹುನಗುಂಡಿ ಗ್ರಾಪಂ ಉಪಾಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಈಚೆಗೆ ತಾಲೂಕಿನ ಹೊನ್ನಿಗನೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಂಘಟನೆಗಳು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಸರ್ಕಾರದಿಂದ ಎಸ್‌ಟಿ ಸಮುದಾಯಕ್ಕೆ ಸಿಗುವಂತಹ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಘಟನೆಗಳ ಪಾತ್ರ ಮುಖ್ಯವಾಗಿದೆ. ಗ್ರಾಪಂ ಮಟ್ಟದಲ್ಲಿ ಪರಿಶಿಷ್ಟ ಪಂಗಡದವರಿಗೆ 13ನೇ ಹಣಕಾಸಿನಲ್ಲಿ ಶೇ. 20ರಷ್ಟು ಅನುದಾನ ಮೀಸಲಿರಿಸಲಾಗಿದೆ. ಅದರ ಲಾಭವನ್ನು ಜನಾಂಗ ಪಡೆದುಕೊಳ್ಳಬೇಕು. ಒಂದು ಜನಾಂಗ ಮುಖ್ಯವಾಹಿನಿಗೆ ಬರಬೇಕಾದಲ್ಲಿ ಶಿಕ್ಷಣ ಅತ್ಯಗತ್ಯವಾಗಿದೆ. ಆ ದಿಸೆಯಲ್ಲಿ ಪ್ರತಿಯೊಬ್ಬರೂ ಶಿಕ್ಷಣವಂತರಾಗಬೇಕು ಎಂದರು.
ಚೆನ್ನಯ್ಯ ಹಿರೇಮಠ, ಶಾಂತಗೌಡ ಗೌಡರ, ಹೂವಪ್ಪ ಮೂಲಿಮನಿ, ವೀರಪ್ಪ ಮೂಲಿಮನಿ, ಹನುಮಪ್ಪ ಸೂಳಿಬಾವಿ, ಶಂಕರಗೌಡ ಪವಾರಗೌಡ್ರ, ಮಲ್ಲಪ್ಪ ಸೂಳಿಬಾವಿ, ವೀರಪ್ಪ ಕೊತಬಾಳ ಮುಂತಾದವರು ಉಪಸ್ಥಿತರಿದ್ದರು. ಹೂವಪ್ಪ ಮೂಲಿಮನಿ ನಿರೂಪಿಸಿ, ವಂದಿಸಿದರು.
ಕಾಲುಜಾರಿ ಬಿದ್ದು ಸಾವು
ನರಗುಂದ: ತಾಲೂಕಿನ ಮುನವಳ್ಳಿ ರಸ್ತೆಯಲ್ಲಿರುವ ಮುಖ್ಯಕಾಲುವೆಯಲ್ಲಿ ಡಿ. 7ರಂದು ನೀರು ತುಂಬಲು ಹೋಗಿದ್ದ ಟಿಪ್ಪರ್ ಚಾಲಕ ಮೈಲಾರಪ್ಪ ನಾಯ್ಕರ (55) ಕಾಲುಜಾರಿ ಬಿದ್ದು, ಕಾಲುವೆಯಲ್ಲಿ ತೇಲಿಕೊಂಡ ಹೋದ ಘಟನೆ ಜರುಗಿತ್ತು, ನಂತರ ಕಳೆದ 3 ದಿನಗಳಿಂದ ಶವ ಪತ್ತೆಯಾಗಿರಲಿಲ್ಲ. ಮಂಗಳವಾರ ಸುಮಾರು 20 ಕಿ.ಮೀ. ದೂರವಿರುವ ತಾಲೂಕಿನ ಹಳ್ಳಿಕೇರಿ ಗ್ರಾಮದ ಬಳಿಯಿರುವ ಕಾಲುವೆಯಲ್ಲಿ ಶವ ಪತ್ತೆಯಾಗಿದ್ದು, ಮೃತನನ್ನು ಸವದತ್ತಿ ತಾಲೂಕಿನ ಚಿಕ್ಕುಂಬಿ ಗ್ರಾಮದ ನಿವಾಸಿಯಾ ಎಂದು ತಿಳಿದು ಬಂದಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.