ಹತ್ತಿ ಬೆಳೆ ನಷ್ಟಕ್ಕೆ ಪರಿಹಾರ ಕೊಡದಿದ್ರೆ ಉಗ್ರ ಹೋರಾಟ
ಕನ್ನಡಪ್ರಭ ವಾರ್ತೆ, ನರಗುಂದ, ಡಿ. 10
ಮಹಿಕೊ ಕಂಪನಿಯ ಕನಕ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿ, ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರೈತ ಸಮುದಾಯದ ನೇತೃತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಯುವ ಮುಖಂಡ ಚನ್ನು ನಂದಿ ಹೇಳಿದರು.
ಅವರು ಮಂಗಳವಾರ ತಾಲೂಕಿನ ರೈತರ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಮಾತನಾಡಿದರು.
ಈ ವರ್ಷ ಮುಂಗಾರು ಮಳೆ ಸಂಪೂರ್ಣವಾಗಿ ಕೈ ಕೊಟ್ಟಿದ್ದು, ಇದರಿಂದಾಗಿ ರೈತರು ತೊಂದರೆಗೆ ಸಿಲುಕಿದ್ದರು. ಇನ್ನು ಮಲಪ್ರಭಾ ಜಲಾಶಯ ಕಾಲುವೆಗೆ ಹೊಂದಿಕೊಂಡಿರುವ ಕೆಲ ಜಮೀನಿನ ರೈತರು ಈ ಕಾಲುವೆ ನೀರನ್ನೇ ಅವಲಂಬಿಸಿ ಮಹಿಕೋ ಕಂಪನಿಯ ಕನಕ ಬಿಟಿ ಹತ್ತಿ ಬಿತ್ತನೆ ಮಾಡಿದ್ದು, ಬಿತ್ತನೆ ಮಾಡಿ 3-4 ತಿಂಗಳು ಗತಿಸಿದರೂ ಹತ್ತಿ ಗಿಡದಲ್ಲಿ ಹೂ, ಕಾಯಿ ಬಿಡದೇ ರೈತರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಈ ರೀತಿಯಾಗಿ ಕಳಪೆ ಬೀಜಗಳನ್ನು ವಿತರಿಸಿದ ಮಹಿಕೋ ಕಂಪನಿಯ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಹತ್ತಿ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ ರು. 60 ಸಾವಿರದಂತೆ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ರೈತರೆಲ್ಲ ಬೀದಿಗಿಳಿದು ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಗಣಿಗಾರಿಕೆ ನಿಲ್ಲಿಸಿ: ಪಟ್ಟಣದ ಪುರಸಭೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ರಾತ್ರಿಯ ವೇಳೆಯಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು ಸಾಗಾಣಿಕೆ ನಡೆಯುತ್ತಿದೆ. ಈ ಕುರಿತು ಹಲವು ಬಾರಿ ಪುರಸಭೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾರಣ ಸಂಬಂಧಪಟ್ಟ ಮೇಲಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಿ, ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಮಂಜುನಾಥ ಜಮಖಂಡಿ, ಶರಣಪ್ಪ ವಾಲ್ಮೀಕಿ, ಸಿದ್ಧಲಿಂಗಯ್ಯ ಮಾಲನಮಠ, ವಿ.ಎಸ್. ದಾನಪ್ಪಗೌಡರ, ಶ್ರೀಶೈಲ ನಂದಿ, ಶರಣಪ್ಪ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.