ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದಿನಿಂದ ಪ್ರತಿಭಾ ಕಾರಂಜಿ

Lingaraj Badiger
Updated On : 12 Dec 2013, 11:30 am

ನರೇಗಲ್ಲ:  ಸ್ಥಳೀಯ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಕೇಂದ್ರ ಶಾಲೆಯಲ್ಲಿ ಡಿ. 12 ಹಾಗೂ 13ರಂದು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳಲಾಗಿದೆ. ಡಿ. 12ರ ಬೆಳೆಗ್ಗೆ ಪ್ರಾರಂಭವಾಗುವ ಕಾರ್ಯಕ್ರಮವನ್ನು ರೋಣ ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ತಾಪಂ ಉಪಾಧ್ಯಕ್ಷೆ ಶೈಲಜಾ ಯರಗೇರಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಎಡಳ್ಳಿ, ಪಪಂ ಅಧ್ಯಕ್ಷೆ ಬಸವ್ವ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣ ಗಿಂಡಿ, ಪಪಂ ಸದಸ್ಯ ವರುಣ ಸಂಗನಾಳ, ತಾಲೂಕಿನ ಎಲ್ಲ ಕ್ಲಸ್ಟರ್‌ಗಳ ಸಿಆರ್‌ಪಿಗಳು ಹಾಗೂ ಗಣ್ಯಮಾನ್ಯರು ಭಾಗವಹಿಸಲಿದ್ದಾರೆಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಸಿದ್ನೆಕೊಪ್ಪ ಹಾಗೂ ಶಾಲಾ ಮುಖ್ಯೋಪಾಧ್ಯಾಯ ಬಿ.ಸಿ. ಲಕ್ಷಕೊಪ್ಪದ ತಿಳಿಸಿದ್ದಾರೆ.
ಶ್ರೀಕಂಠದತ್ತ ಒಡೆಯರ್ ನಿಧನ: ಸಂತಾಪ
ಗದಗ: ಮೈಸೂರು ಯದುವಂಶ ರಾಜಮನೆತನದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ ನಿಧನಕ್ಕೆ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಒಡೆಯರ ರಾಜವಂಶಸ್ಥರಾಗಿದ್ದರೂ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವುದರ ಜತೆಗೆ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಗೌರವಿಸುವ ಗುಣವುಳ್ಳವರಾಗಿದ್ದರು. ಎಂ.ಎ. ರಾಜ್ಯಶಾಸ್ತ್ರ ಹಾಗೂ ಕಾನೂನು ಪದವಿಯನ್ನು ಪಡೆದಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈಸೂರಿನ ಮಹಾರಾಜ ಕಾಲೇಜು ಹಾಗೂ ಶಾರದಾ ವಿಲಾಸ್ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಕಲೆ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀಕಂಠದತ್ತ ಅವರು ಪಾಶ್ಚಿಮಾತ್ಯ ಸಂಗೀತದಲ್ಲಿ ಹಿರಿಯ ಪದವಿ ಪಡೆದಿದ್ದರು. ಲಂಡನ್ನಿನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ಮೆರಿಟ್ ಪಡೆದಿದ್ದರು. ಮೈಸೂರಿನಲ್ಲಿರುವ ಜಯಚಾಮರಾಜೇಂದ್ರ ಶಿಕ್ಷಣ ಟ್ರಸ್ಟ್‌ಗಳ ಚೇರ್‌ಮನ್ ಆಗಿದ್ದರು. ಮೈಸೂರು ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗಷ್ಟೇ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀಕಂಠದತ್ತ ಒಡೆಯರ್ ಅವರು 4 ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಜನಸೇವೆ ಮಾಡಿದ್ದನ್ನು ಮರೆಯುವಂತಿಲ್ಲ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ದೇವರು ನೀಡಲಿ ಎಂದು ಸಂಸ್ಥೆಯಿಂದ ಸಂತಾಪ ವ್ಯಕ್ತಪಡಿಸಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವೀರಣ್ಣ ಬೇವಿನಮರದ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement