ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೇಂಗಾ ಬೆಲೆ ಕುಸಿತ: ಕಂಗಾಲಾದ ರೈತ

Lingaraj Badiger
Updated On : 12 Dec 2013, 11:29 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಡಿ. 11
ಬಡವರ ಬಾದಾಮಿ ಎಂದೇ ಕರೆಯುವ ಹಬ್ಬು ಶೇಂಗಾ ಮಾತ್ರ ಈ ಬಾರಿ ರೈತನ ಕೈಹಿಡಿದಿಲ್ಲ.
ಸಮಯಕ್ಕೆ ಸರಿಯಾಗಿ ಮಳೆ ಆಗದಿದ್ದರೂ ಕಷ್ಟಪಟ್ಟು ಬೆಳೆದ ಶೇಂಗಾಕ್ಕೆ ಸೂಕ್ತ ಬೆಲೆ ಸಿಗದೇ ರೈತ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಪಟ್ಟಣದ ಆಯಿಲ್‌ಮಿಲ್ ಹಾಗೂ ತಾಲೂಕಿನ ಲಕ್ಷ್ಮೇಶ್ವರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಶೇಂಗಾ ಆವಕವಾಗುತ್ತಿದೆ. ಪ್ರತಿ ಕ್ವಿಂಟಲ್ ಶೇಂಗಾ ಕನಿಷ್ಠ ರು. 2,200ರಿಂದ 2,500 ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ವರ್ಷ ಶೇಂಗಾಕ್ಕೆ ರು. 3,500-6,000 ಇದ್ದ ಬೆಲೆ ಈ ಬಾರಿ ಕುಸಿತ ಕಂಡಿದ್ದು, ಬೀಜ, ಗೊಬ್ಬರ, ಕೃಷಿ ಕೂಲಿ ಕಾರ್ಮಿಕರಿಗೆಂದು ಖರ್ಚು ಮಾಡಿದ ಹಣವೂ ಬರದಂತಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.
ಅಪಾರ ಬೆಳೆ: ತಾಲೂಕಿನ ಬೆಳ್ಳಟ್ಟಿ ಗ್ರಾಮದ ಸುತ್ತಮುತ್ತಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯಲಾಗಿದ್ದು, ಕಳೆದ ಬಾರಿ ಕೈ ಹಿಡಿದ ವಾಣಿಜ್ಯ ಬೆಳೆ, ಈ ಬಾರಿ ರೈತನ ಮೇಲೆ ಮುನಿಸಿಕೊಂಡಿದ್ದು, ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ಸರ್ಕಾರ ಕಬ್ಬು, ಮೆಕ್ಕೆ ಜೋಳ ಇನ್ನಿತರ ಬೆಳೆಗೆ ನೀಡುವ ಬೆಂಬಲ ಬೆಲೆಯನ್ನು ವಾಣಿಜ್ಯ ಬೆಳೆಯಾಗಿರುವ ಶೇಂಗಾ ಹಾಗೂ ಸೂರ್ಯಕಾಂತಿಗೂ ನೀಡಬೇಕು. ಕಳೆದೆರಡು ವರ್ಷಗಳಿಂದ ಶೇಂಗಾಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ ಬಂದಿದ್ದರಿಂದ ರೈತರು ಶೇಂಗಾ ಬೆಳೆಯಲು ಉತ್ಸುಕತೆ ತೋರಿದ್ದರು. ಅಲ್ಲದೆ ಉತ್ತಮ ಆದಾಯ ಪಡೆದಿದ್ದರು. ಆದರೆ, ಈ ಬಾರಿ ಆ ಪರಿಸ್ಥಿತಿ ಇರದಿರುವುದು ಮಾತ್ರ ಬೇಸರದ ಸಂಗತಿ ಎನ್ನುತ್ತಾರೆ ಬೆಳ್ಳಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ.
ಸಾಲ ಸೋಲ ಮಾಡಿ ಹೆಚ್ಚಿನ ದರದಲ್ಲಿ ಬೀಜ, ಗೊಬ್ಬರ ಖರೀದಿಸಿ ರೈತರು ಶೇಂಗಾ ಬಿತ್ತನೆ ಮಾಡಿದ್ದು, ಈ ಬಾರಿ ಇಳುವರಿಯೂ ಅಷ್ಟಕ್ಕಷ್ಟೇ ಬಂದಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಇಲ್ಲದಂತಾಗಿದೆ. ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಬೆಲೆ ಸಿಗದೇ ಹೋದಲ್ಲಿ ಮುಂದಿನ ದಿನಮಾನದಲ್ಲಿ ಈ ಬೆಳೆ ಬೆಳೆಯಲು ರೈತರು ಹಿಂದೇಟು ಹಾಕುವ ಲಕ್ಷಣಗಳು ಕಾಣುತ್ತಿದ್ದು, ಸರ್ಕಾರ ಕೃಷಿ ಇಲಾಖೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ಪಡೆದು ರೈತರಿಗೆ ಬೆಂಬಲ ಬೆಲೆ ನೀಡಲು ಮುಂದಾಗಬೇಕು ಎಂದು ಗ್ರಾಪಂ ಸದಸ್ಯ ಮೋಹನ್ ಗುತ್ತೆಮ್ಮನವರ ಆಗ್ರಹಿಸುತ್ತಾರೆ.
-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement