ಹಾಸ್ಟೆಲ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ
ಗದಗ: ನಗರದ ಜೆ.ಟಿ. ಮಹಾವಿದ್ಯಾಲಯದಲ್ಲಿ ಎಂಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿಯೋರ್ವ ಕಾಲೇಜಿನ ಹಾಸ್ಟೆಲ್ನಲ್ಲಿ (ವಸತಿ ಗೃಹ)ದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಆನಂದ ರಾಠೋಡ (23) ಎಂದು ಗುರುತಿಸಲಾಗಿದ್ದು, ಈ ವಿದ್ಯಾರ್ಥಿ ಮೂಲತಃ ದಾಂಡೇಲಿ ಪಟ್ಟಣದವನು ಎಂದು ಗುರುತಿಸಲಾಗಿದೆ. ಬಿಎಸ್ಸಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಆನಂದ ಕಾಲೇಜಿನ ಎಲ್ಲ ಉಪನ್ಯಾಸಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ. ಕಳೆದ 2 ದಿನಗಳ ಹಿಂದಷ್ಟೇ ಊರಿಗೆ ಹೋಗಿ, ತಂದೆ ತಾಯಿಯನ್ನು ಭೇಟಿ ಮಾಡಿ ಬಂದಿದ್ದ ಎನ್ನಲಾಗಿದೆ. ಬಿಎಸ್ಸಿಯಲ್ಲಿ ರ್ಯಾಂಕ್ ಪಡೆದಿದ್ದ ಈ ವಿದ್ಯಾರ್ಥಿ ಸರ್ಕಾರಿ ಕೋಟಾದಡಿ ಎಂಎಸ್ಸಿ ಓದಲು ಗದುಗಿಗೆ ಆಗಮಿಸಿದ್ದನು. ಆತ್ಮಹತ್ಯೆ ಕುರಿತು ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ವಿಕಲಚೇತನರಿಗೆ ಅಂಬೇಡ್ಕರ್ ವಿಚಾರಧಾರೆ ಸ್ಫೂರ್ತಿ
ಗದಗ: ಶೋಷಿತರ ನಾಯಕ, ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ದಲಿತರ, ನಿರ್ಗತಿಕರ, ಸಾಮಾಜಿಕ ಸಮಾನತೆಯ ವಂಚಿತರ ಧ್ವನಿಯಾಗಿ ಜೀವನವನ್ನೇ ಮುಡುಪಾಗಿಟ್ಟಂತಹ ಮಹಾನಚೇತನ. ಅವರ ವಿಚಾರಧಾರೆಗಳು ವಿಕಲಚೇತನರಿಗೆ ಸ್ವಾಭಿಮಾನ ತುಂಬುವಂತಹ ಸ್ಫೂರ್ತಿಯನ್ನು ನೀಡುವಂತಾಗಲಿ ಎಂದು ಜಿಲ್ಲಾ ದ.ಸಂ.ಸ ನಾಯಕ ಆರ್.ಎಸ್. ಪೂಜಾರ ಹೇಳಿದರು. ಅವರು ಈಚೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ಶಾಖೆ ವತಿಯಿಂದ ಸಮಿತಿಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರ 57ನೇ ಮಹಾಪರಿನಿರ್ವಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಎನ್. ಬಳ್ಳಾರಿ ಮಾತನಾಡಿ, ಡಾ. ಅಂಬೇಡ್ಕರ್ ತತ್ವ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತ. ಶಿಕ್ಷಣವೆಂಬುದು ಅಗಾಧವಾದ ಆಸ್ತಿ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ತಮ್ಮ ಹಕ್ಕುಗಳನ್ನು ಪಡೆಯಲು ತಿಳಿಸಿದರಲ್ಲದೇ ಸ್ವಾವಲಂಬನೆ, ಸ್ವಾಭಿಮಾನ ಇಲ್ಲದ ಮನುಷ್ಯ ಜೀವಂತ ಶವವಿದ್ದಂತೆ. ಹಾಗಾಗಿ ಸ್ವಾಭಿಮಾನ ಹಾಗೂ ಸ್ವಾವಲಂಬನೆಯನ್ನು ಬೆಳೆಸಿಕೊಂಡು ಛಲದಿಂದ ಬದುಕಲು ಕರೆ ನೀಡಿದರು. ವಿದ್ಯಾಧರ ದೊಡ್ಡಮನಿ, ಬಸವರಾಜ ಕಡೇಮನಿ, ಆರ್.ಎಸ್. ಗುಜ್ಜಲ, ಪರಶುರಾಮ ಪೂಜಾರ, ಸತೀಶ ಹೂಲಿ, ಮಾರುತಿ ಗುಡಿಮನಿ, ಧರ್ಮಣ್ಣ ಹೊಸಮನಿ, ವಿಶ್ವನಾಥ ದೊಡ್ಡಮನಿ, ರವಿ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಬಳ್ಳಾರಿ ಸ್ವಾಗತಿಸಿದರು. ಚಂದ್ರಶೇಖರ ಮೇಲಿನಮನಿ ನಿರೂಪಿಸಿದರು. ಮಂಜುನಾಥ ಪೂಜಾರ ವಂದಿಸಿದರು.
ಸೆಮಿನಾರ್ಗಳು ವ್ಯಕ್ತಿತ್ವ ವಿಕಸನಕ್ಕೆ ಪೂರಕ: ಸಂಕನೂರ
ಗದಗ: ಸೆಮಿನಾರ್ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವೇದಿಕೆಯ ಮೇಲೆ ನಿಂತು ಮಾತನಾಡುವಾಗ ಇರುವ ಭಯ ದೂರವಾಗುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆದು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ ಎಂದು ಪ್ರಾ. ಎಸ್.ವಿ.ಸಂಕನೂರ ಹೇಳಿದರು. ಅವರು ನಗರದ ಶಿವಾನಂದ ವಿಜ್ಞಾನ ಪಪೂ ಕಾಲೇಜಿನಲ್ಲಿ ಸಿ.ಎನ್.ಆರ್. ರಾವ್ ಇಕೋ ಕ್ಲಬ್ನ ಆಶ್ರಯದಲ್ಲಿ ಈಚೆಗೆ ಜರುಗಿದ ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ ವಿಷಯ ಕುರಿತು ಏರ್ಪಡಿಸಿದ ಸೆಮಿನಾರ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸೆಮಿನಾರ್ಗಳಿಂದ ಮಾತನಾಡುವ ಕೌಶಲ್ಯ ಬೆಳೆಯುವುದರ ಜತೆಗೆ ಸಂಬಂಧಿಸಿದ ವಿಷಯದ ಕುರಿತು ಸ್ಪಷ್ಟ ಹಾಗೂ ಹೆಚ್ಚಿನ ಜ್ಞಾನ ಲಭಿಸಲು ಸಾಧ್ಯ. ವಿದ್ಯಾರ್ಥಿಗಳು ಜಾಗತಿಕ ತಾಪಮಾನದ ಏರಿಕೆಯಿಂದ ಹವಾಮಾನದಲ್ಲಿ ಬಹಳಷ್ಟು ಬದಲಾವಣೆ ಉಂಟಾಗುತ್ತಿದ್ದು ಇದರಿಂದ ಭೂಮಿಯ ಮೇಲಿರುವ ಜೀವರಾಶಿಗಳಿಗೆ ಹಾನಿ ಉಂಟಾಗಿದೆ. ಇದನ್ನು ನಿಯಂತ್ರಿಸಲು ಪಳೆಯುಳಿಕೆ ಇಂಧನಗಳನ್ನು ಮಿತವಾಗಿ ಬಳಸುವುದು, ಹೆಚ್ಚು ಹೆಚ್ಚು ಗಿಡ ಮರಗಳನ್ನು ಬೆಳೆಸುವುದು, ಅಸಂಪ್ರದಾಯಿಕ ಶಕ್ತಿ ಮೂಲಗಳಾದ ಪವನ ಶಕ್ತಿ ಹಾಗೂ ಸೌರಶಕ್ತಿಗಳನ್ನು ಬಳಸಿಕೊಳ್ಳುವ ಅವಶ್ಯಕತೆಯಿದೆ ಎಂದರು. ಸುಷ್ಮಿತಾ ಜೋಶಿ, ಮೇಘಾ ಕಾಜಗಾರ ಮುಂತಾದವರು ಉಪಸ್ಥಿತರಿದ್ದರು. ಕೌಸಲ್ಯ ರಡ್ಡೇರ ಸ್ವಾಗತಿಸಿ, ನಿರೂಪಿಸಿದರು. ಮುರಲೀಧರ ಸಂಕನೂರ ವಂದಿಸಿದರು.
---