ಈರುಳ್ಳಿ ಬೆಲೆ ಕುಸಿತ: ಗದುಗಿನಲ್ಲಿ ಪ್ರತಿಭಟನೆ
ಗದಗ: ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ವಾರದಿಂದ ಈರುಳ್ಳಿ ಬೆಲೆಯು ಸಂಪೂರ್ಣ ಇಳಿಕೆಯಾಗಿದೆ. ಬೆಲೆ ಇಳಿಕೆಯಲ್ಲಿ ದಲ್ಲಾಳಿಗಳು ಹಾಗೂ ವ್ಯಾಪಾರಸ್ಥರು ಶಾಮೀಲಾಗಿದ್ದಾರೆಂದು ಆರೋಪಿಸಿ ಗುರುವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ನೂರಾರು ರೈತರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ರೈತ ಈರಯ್ಯ ಲಾಯಲಗುಂದಿ ಮಾತನಾಡಿ, 'ಬುಧವಾರ ದೊಡ್ಡ ಗಾತ್ರದ ಈರುಳ್ಳಿ ಕ್ವಿಂಟಲ್ಗೆ 2 ಸಾವಿರದಿಂದ ಹಿಡಿದು 2400, 2500 ವರೆಗೆ ಮಾರಾಟ ಮಾಡಲಾಗಿದೆ. ಆದರೆ, ಗುರುವಾರ ದೊಡ್ಡಗಾತ್ರದ ಈರುಳ್ಳಿಯನ್ನು ಕೇವಲ 500-800 ರವರೆಗೆ ಕೇಳಲಾಗುತ್ತಿದೆ' ಎಂದು ಆರೋಪಿಸಿದರು.
ಪೊಲೀಸರೊಂದಿಗೆ ವಾಗ್ವಾದ: ರೈತರು ಪ್ರತಿಭಟನೆ ನಡೆಸುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ರೈತರ ಮನವೊಲಿಕೆ ನಡೆಸಿ ಮತ್ತೆ ಈರುಳ್ಳಿ ವ್ಯಾಪಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮತ್ತೆ ದಲ್ಲಾಳಿಗಳು ಈರುಳ್ಳಿಗೆ ರು. 1000 ಸಾವಿರದಿಂದ 1200ಕ್ಕೆ ಕೇಳುತ್ತಿದ್ದಂತೆಯೇ ಆಕ್ರೋಶಗೊಂಡ ರೈತರು ಮತ್ತೆ ದಲ್ಲಾಳಿಗಳನ್ನು ಹಾಗೂ ವ್ಯಾಪಾರಸ್ಥರನ್ನು ತರಾಟೆಗೆ ತಗೆದುಕೊಂಡರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ರೈತರ ಮಧ್ಯೆ ಕೆಲಕಾಲ ಮಾತಿನ ವಾಗ್ವಾದ ಜರುಗಿತು. ನಂತರ ಪ್ರತಿಭಟನಾಕಾರರು ನಗರದ ಹಳೆ ಡಿಸಿ ಕಚೇರಿಯ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.