ನೆಹರು ಯುವ ಕೇಂದ್ರದಿಂದ ಉತ್ತಮ ಕೆಲಸ
ಗದಗ: ನೆಹರು ಯುವ ಕೇಂದ್ರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದು ತನ್ನ ಕೆಲಸವನ್ನು ಗದಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಾಡಲಿ, ಹೆಚ್ಚು ಹೆಚ್ಚು ಯುವ ಸಂಘಟನೆಗಳು ಪ್ರಾರಂಭವಾಗಿ ನೆಹರು ಯುವ ಕೇಂದ್ರದ ಮಾರ್ಗದರ್ಶನದಲ್ಲಿ ಕೆಲಸ ಮಾಡಬೇಕು. ಗದಗ ಜಿಲ್ಲೆಯನ್ನು ಸುವ್ಯವಸ್ಥಿತ ಜಿಲ್ಲೆಯನ್ನಾಗಿ ಮಾಡುವಲ್ಲಿ ಯುವ ಸಂಘಟನೆಗಳು ಪಣ ತೊಡಬೇಕೆಂದು ಮದರ್ ಎನ್.ಜಿ.ಓ ಅಧ್ಯಕ್ಷ ಸುರೇಶ ಕುಮಾರ ಹೇಳಿದರು. ಅವರು ಈಚೆಗೆ ನೆಹರು ಯುವ ಕೇಂದ್ರದಲ್ಲಿ ಭುವನೇಶ್ವರಿ ಸೇವಾ ಸಂಸ್ಥೆ, ನೆಹರು ಯುವಕೇಂದ್ರ, ಕಲ್ಮೇಶ್ವರ ಯುವ ಮಂಡಳ, ಸ್ವಾಮಿ ವಿವೇಕಾನಂದ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವ ಮಂಡಳ, ಕರುಣಾ ಮಹಿಳಾ ಸೇವಾ ಸಂಸ್ಥೆ ಇವರ ಆಶ್ರಯದಲ್ಲಿ ನಡೆಸಲಾದ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರಾಂಕ್ಲಿನ್ ಮಾತನಾಡಿ, ಯುವ ಮುಂದಾಳತ್ವದಿಂದ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಶಿಬಿರದಲ್ಲಿ ತಿಳಿದಿದ್ದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಭುವನೇಶ್ವರಿ ಸೇವಾ ಸಂಸ್ಥೆಯ ಅಧ್ಯಕ್ಷೆ ಸವಿತಾ ಕದಂ ಅಧ್ಯಕ್ಷತೆ ವಹಿಸಿದ್ದರು. ಅಂದಾನಯ್ಯ ಹಿರೇಮಠ, ಶೀಲಾ ಪಾಟೀಲ್, ರಾಜೇಶ ಸಿಂಧೆ ಮುಂತಾದವರು ಉಪಸ್ಥಿತರಿದ್ದರು. ಮೃತ್ಯುಂಜಯ ಕುಲಕರ್ಣಿ ಸ್ವಾಗತಿಸಿದರು. ಬಸಯ್ಯ ಗದಗಿನಮಠ ವಂದಿಸಿದರು.