ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಾಲ್ಯವಿವಾಹ ಸಮೃದ್ಧ ಸಮಾಜಕ್ಕೆ ಮಾರಕ: ಎಸ್ಪಿ ಶರಣಪ್ಪ

Lingaraj Badiger
Updated On : 13 Dec 2013, 10:50 am

ಕನ್ನಡಪ್ರಭ ವಾರ್ತೆ, ಗದಗ, ಡಿ. 12
ಬಾಲ್ಯವಿವಾಹಗಳು ಸಮೃದ್ಧ ಸಮಾಜ ನಿರ್ಮಾಣಕ್ಕೆ ಮಾರಕ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಹೇಳಿದರು.
ಅವರು ಗುರುವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವುಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಲ್ಯವಿವಾಹ ತಡೆಗಟ್ಟುವ ಕುರಿತ ಬೃಹತ್ ಆಂದೋಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಾಲ್ಯವಿವಾಹ ಸ್ವಾತಂತ್ರ್ಯ ಪೂರ್ವದಿಂದಲೂ ಜಾರಿಯಲ್ಲಿದ್ದು, ಇದು ಕೇವಲ ಭಾರತಕ್ಕಲ್ಲದೇ ವಿಶ್ವದಾದ್ಯಂತ ಜಾರಿಯಲ್ಲಿದೆ. ಶೇ. 47ರಷ್ಟು ಬಾಲ್ಯವಿವಾಹಗಳು ಭಾರತದಲ್ಲಿ ಜರುಗುತ್ತಿದ್ದ ಈ ಹಿನ್ನೆಲೆಯಲ್ಲಿ 1929ರಲ್ಲಿಯೇ ಈ ಕುರಿತು ಅಂದು ಕಾನೂನು ರಚಿಸಲಾಗಿತ್ತು. ಬಡತನ, ಅನಕ್ಷರತೆ, ಹೆಣ್ಣು ಹೊರೆ ಎಂಬ ಭಾವನೆಯಿಂದ ಮತ್ತು ಸಮಾಜದಲ್ಲಿ ತುಂಬಿರುವ ಮೌಢ್ಯತೆ ಹಾಗೂ ಅವೈಜ್ಞಾನಿಕ ಕಾರಣಗಳಿಂದಾಗಿ ಅಲ್ಲಲ್ಲಿ ಬಾಲ್ಯವಿವಾಹಗಳು ವರದಿಯಾಗುತ್ತಿರುವುದು ಸಾಮಾನ್ಯವಾಗಿದೆ. ಈ ಅನಿಷ್ಠ ಪದ್ಧತಿಯಿಂದಾಗಿ ಮಾನವ ಸಂಪನ್ಮೂಲಗಳ ಕೊರತೆ ಉಂಟಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬಾಲ್ಯವಿವಾಹಮುಕ್ತಗೊಳಿಸಲು ನಾವೆಲ್ಲ ಶ್ರಮಿಸಬೇಕಿದೆ. ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ವಿಶೇಷ ಘಟಕ ಪ್ರಾರಂಭಿಸಲಾಗಿದ್ದು, ಬಾಲಕಾರ್ಮಿಕರ ಮತ್ತು ಮಕ್ಕಳ ಸಮಸ್ಯೆಗಳ ಕುರಿತು ಈ ಘಟಕ ಕಾರ್ಯನಿರ್ವಹಿಸುತ್ತಿದ್ದು, 1098 ಸಹಾಯವಾಣಿ ಚಾಲನೆಯಲ್ಲಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ವಿವಿಧ ಹಂತಗಳಲ್ಲಿ ಜರಗುತ್ತಿರುವ ದೌರ್ಜನ್ಯ, ಬಾಲ್ಯವಿವಾಹದಂತಹ ಅನಿಷ್ಟ ಕಾರ್ಯಗಳ ಕುರಿತು ಇಲಾಖೆಯ ಗಮನಕ್ಕೆ ತರುವ ಮೂಲಕ ಅನಿಷ್ಠ ಪದ್ಧತಿಗಳ ತಡೆಗೆ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸಿ, ಬಾಲ್ಯವಿವಾಹ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ. ಈ ಸಾಮಾಜಿಕ ಪಿಡುಗು ನಿಯಂತ್ರಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಹಾಗೂ ಅಧಿಕಾರಿ ವರ್ಗ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಈ ಅನಿಷ್ಟತೆಯನ್ನು ಬಹಿರಂಗ ಸವಾಲಾಗಿ ಸ್ವೀಕರಿಸಿ ಕಾರ್ಯನಿರ್ವಹಿಸಬೇಕು ಎಂದರು.ಸಿಇಒ ವೀರಣ್ಣ ತುರಮರಿ ಮಾತನಾಡಿ, ಈ ಅನಿಷ್ಟ ಪದ್ಧತಿ ಜಾರಿಯಿಂದ ಸಮಾಜದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ತೊಂದರೆ ಮತ್ತು ಅನಾರೋಗ್ಯಕರ ಸಮಾಜ ನಿರ್ಮಾಣವಾಗುತ್ತಿದೆ. ಕಾಯ್ದೆ, ಕಾನೂನುಗಳನ್ನು ಮೀರಿ ಗ್ರಾಮೀಣ ಭಾಗಗಳಲ್ಲಿ ಬಾಲ್ಯವಿವಾಹ ಪದ್ಧತಿ ಜೀವಂತವಾಗಿರುವುದು ಕಂಡುಬರುತ್ತಿದೆ. ಈ ಪದ್ಧತಿಯಿಂದ ಮಹಿಳೆ ವಯಸ್ಸಿಗೆ ಮೀರಿದ ಹೊಣೆಗಾರಿಕೆಯಿಂದ ಸಂಕಷ್ಟದಲ್ಲಿ ಕಾಲ ಕಳೆಯುವಂತಾಗಿದ್ದು, ಈ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯೂನಿಸೆಫ್‌ನ ಸುಚಿತ್ರಾರಾವ್ ಹಾಗೂ ಕೊಪ್ಪಳ ಎಸ್‌ಜೆಪಿಯು ಘಟಕದ ಸೋಮಶೇಖರ ವಿಶೇಷ ಉಪನ್ಯಾಸ ನೀಡಿದರು.
ವಿಡಿಯೋ ಪ್ರದರ್ಶನದ ಮೂಲಕ ಬಾಲ್ಯವಿವಾಹದ ಕುರಿತು ಜಾಗೃತಿ ಮೂಡಿಸಲಾಯಿತು. ಶಿಕ್ಷಣ, ಕಾರ್ಮಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೊಲೀಸ್ ಇಲಾಖೆಗಳು ಸೇರಿದಂತೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿರಹಟ್ಟಿ ಸಿಡಿಪಿಒ ಎಸ್.ಕೆ. ಹೊನ್ನೇಗೌಡರ ಪ್ರಾರ್ಥಿಸಿದರು. ಗೀತಾಂಜಲಿ ಗೌಡರ ನಿರೂಪಿಸಿದರು. ಆರ್.ಎಸ್. ಬುರಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement