ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೇಡಿಕೆಗಳ ಈಡೇರಿಕೆಗೆ ಸಿಐಟಿಯು ಪ್ರತಿಭಟನೆ

Lingaraj Badiger
Updated On : 13 Dec 2013, 10:55 am

ಗದಗ: ಬೆಲೆ ಏರಿಕೆ ನಿಯಂತ್ರಣಕ್ಕಾಗಿ, ಗುತ್ತಿಗೆ ಕಾರ್ಮಿಕ ಪದ್ಧತಿ ರದ್ದತಿಗಾಗಿ, ರು. 10 ಸಾವಿರ ಕನಿಷ್ಠ ಕೂಲಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗುರುವಾರ ಸಿಐಟಿಯು ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಮಹೇಶ ಹಿರೇಮಠ ಮಾತನಾಡಿ, ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಅಸಂಘಟಿತ ಕಾರ್ಮಿಕರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ಈ ಕೂಡಲೇ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ ವೇತನ ರು. 10 ಸಾವಿರ ಮತ್ತು ಅಕ್ಷರ ದಾಸೋಹ ನೌಕರರಿಗೆ ತಿಂಗಳ 5ನೇ ತಾರೀಖಿನ ಒಳಗಾಗಿ ವೇತನ ನೀಡಬೇಕು. ಸುಮಾರು 2 ತಿಂಗಳಾದರೂ ಬಿಸಿಯೂಟ ಪಡಿತರವನ್ನು ಸರಬರಾಜು ಮಾಡದೇ ಇರುವುದು ನೌಕರರಿಗೆ ಅಡುಗೆ ಮಾಡಲು ಬಹಳ ತೊಂದರೆಯಾಗುತ್ತಿದೆ. ಕಾರಣ ಶಿಕ್ಷಣ ಇಲಾಖೆಯವರು ತಕ್ಷಣದಲ್ಲಿ ಎಲ್ಲ ಶಾಲೆಗಳಿಗೆ ಅಗತ್ಯ ಪಡಿತರ ಬಿಡುಗಡೆ ಮಾಡಬೇಕು ಮತ್ತು ಎಲ್ಲ ಕಾರ್ಮಿಕರ ಸ್ಥಳೀಯ ಮೂಲ ಬೇಡಿಕೆಗಳನ್ನು ಈಡೇರಿಸಲು ಸಂಬಂಧಪಟ್ಟ ಅಧಿಕಾರಿಗಳ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು. ಮುಖಂಡ ಮಾರುತಿ ಚಿಟಗಿ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಚನೆಯಾಗಿ ಸುಮಾರು ವರ್ಷ ಕಳೆದರೂ ಯಾವುದೇ ಯೋಜನೆಗಳು ಕಾರ್ಮಿಕರಿಗೆ ದೊರೆಯದೇ ಇರುವುದು ನೋವಿನ ಸಂಗತಿ. ಕಲ್ಯಾಣ ಮಂಡಳಿಯ ಹಣವನ್ನು ಯಾವುದೇ ಕಾರಣಕ್ಕೂ ಶಾದಿಮಹಲ್‌ದಂತಹ ಕಟ್ಟಡಗಳನ್ನು ಕಟ್ಟಲಿಕ್ಕೆ ಬಳಸಬಾರದು. ಕಲ್ಯಾಣಮಂಡಳಿ ಹಣವನ್ನು ಕಾರ್ಮಿಕರ ಕಲ್ಯಾಣಕ್ಕೋಸ್ಕರ ಮಾತ್ರ ಉಪಯೋಗಿಸಬೇಕು. ಮದುವೆ ಧನಸಹಾಯವನ್ನು ಸುಮಾರು 8 ತಿಂಗಳಿಂದ ಕೊಟ್ಟಿರುವುದಿಲ್ಲ. ತಕ್ಷಣ ಮದುವೆ ಧನಸಹಾಯವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪೀರು ರಾಠೋಡ, ಮಾಗುಂಡಪ್ಪ ಅಂಗಡಿ, ಬಸವರಾಜ ಮಂತೂರ ಮಾತನಾಡಿ, ಗ್ರಾಪಂ ನೌಕರರಿಗೆ ಸುಮಾರು 18 ತಿಂಗಳಾದರೂ ವೇತನವನ್ನು ನೀಡದೇ ಇರುವುದು ವಿಷಾದಕರ ಮತ್ತು ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ವೇತನ ಜಮೆ ಆಗಬೇಕು. ಆದರೆ, ಸರ್ಕಾರದ ಆದೇಶಗಳನ್ನು ಗ್ರಾಪಂ ಪಿಡಿಒಗಳು ಗಾಳಿಗೆ ತೂರುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಜಿಲ್ಲಾ ಪಂಚಾಯತ್‌ನ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.  ವಿಠ್ಠಲ ನಾಯಕ, ಯಶೋದಾ ಬೆಟಗೇರಿ, ರಾಜಪ್ಪ ಚಿಟಗಿ, ಸಿದ್ಧಾರೂಡ ಪಾತ್ರೋಟಿ, ಮಾರುತಿ ನಲವಡೆ, ಫಾರೂಕಅಲಿ ಲೋಧಿ, ಸಾವಿತ್ರಿ ಲಮಾಣಿ, ನೀಲಮ್ಮ ಹಡಪದ, ಲತಾ ಬಡಿಗೇರ, ರೇಣುಕಾ ಹೆಗಡೆ, ಪುಷ್ಪಾ ಚವ್ಹಾಣ, ಕರಿಯಪ್ಪ ಕಲಗೋಡಿ, ಕೆ.ಜಿ. ಮೋಮಿನ್, ಬಸವರಾಜ ತಿರಕೋಜಿ, ಭರಮಪ್ಪ ವಡ್ಡರ, ಸಿದ್ಧಪ್ಪ ವಡ್ಡರ, ಸುರೇಶ ದೇವಟಗಿ, ಎಚ್ಚರಪ್ಪ ಬಡಿಗೇರ, ಮೈಲಾರಪ್ಪ ಕಲಕೇರಿ, ಲಕ್ಷ್ಮಣ ನಂದಿ, ಶೇಖಪ್ಪ ದೊಡ್ಡಮನಿ, ವೈ.ಜಿ. ಯಾವಗಲ್ಲ, ಎಚ್.ಬಿ. ಹೊಸಮನಿ ಮುಂತಾದವರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement