ರಸ್ತೆ ಅತಿಕ್ರಮಿಸಿ ಕಟ್ಟಿರುವ ಕಟ್ಟಡ ತೆರವುಗೊಳಿಸಿ
ಲಕ್ಷ್ಮೇಶ್ವರ: ಪಟ್ಟಣದ ವಿನಾಯಕ ನಗರದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ಇರುವ ರಸ್ತೆಯ ಮೇಲೆ ಪುರಸಭೆ ಅನುಮತಿ ಇಲ್ಲದೆ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸದಸ್ಯ ಗೋವಿಂದಪ್ಪ ಸೆರಸೂರಿ ಆಗ್ರಹಿಸಿದರು.
ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ನೆಲ್ಸನ್ ಮಂಡೇಲಾ ಹಾಗೂ ಮೈಸೂರಿನ ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸದಸ್ಯ ಗೋವಿಂದಪ್ಪ ಸೆರಸೂರಿ ಮಾತನಾಡಿ, ಸಾರ್ವಜನಿಕರಿಗೆ ಮುಕ್ತವಾಗಿ ಸಂಚರಿಸಲು ಇರುವ ರಸ್ತೆಯ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದು, ಅಧಿಕಾರಿಗಳು ಯಾಕೆ ಕ್ರಮಕೈಗೊಂಡಿಲ್ಲ, ನಿಮಗೇನಾದರೂ ಭಯವೇ ಎಂದು ಪ್ರಶ್ನಿಸಿದರು. ಅದಕ್ಕಾಗಿ ರಸ್ತೆಯ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡದ ಮಾಲೀಕರಿಗೆ ತುರ್ತು ನೋಟಿಸ್ ನೀಡಿ, ಅಲ್ಲದೆ ಕಟ್ಟಡವನ್ನು ಕೆಡವಿ ಸಾರ್ವಜನಿಕರಿಗೆ ರಸ್ತೆಯನ್ನು ಮುಕ್ತಗೊಳಿಸಿ ಎಂದು ಆಗ್ರಹಿಸಿದರು. ಮಹೇಶ ಹೊಗೆಸೊಪ್ಪಿನ, ಗಣಪತಿ ಬೇವಿನಮರದ, ರಾಮಣ್ಣ ರಿತ್ತಿ, ದಾದಾಪೀರ್ ಮುಚ್ಚಾಲೆ, ಜಯಕ್ಕ ಕಳ್ಳಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಹಮತ ವ್ಯಕ್ತಪಡಿಸಿದರು.
ಕರ್ನಾಟಕ ಗೃಹ ಮಂಡಳಿಯ ನಿವೇಶನಗಳನ್ನು ಪುರಸಭೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು. ಪಟ್ಟಣದ ವ್ಯಾಪ್ತಿಯನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಅನಿಲ ಮುಳಗುಂದ ಕೇಳಿದ ಪ್ರಶ್ನೆಗೆ, ವಿ.ಜಿ. ಪಡಗೇರಿ ಮಾತನಾಡಿ, ಗೃಹ ಮಂಡಳಿಯವರು ಲಕ್ಷ್ಮೇಶ್ವರ ವ್ಯಾಪ್ತಿಯಿಂದ ದೊಡ್ಡೂರು ಗ್ರಾಪಂ ವ್ಯಾಪ್ತಿಗೆ ಸೇರುವ ಯತ್ನ ನಡೆಸಿದ್ದಾರೆ ಎಂಬುದು ಕೇಳಿಬರುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಗೃಹ ಮಂಡಳಿಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ತಿಳಿಸಿದರು.
ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಗೆ ತಕರಾರುಗಳು ಕೇಳಿ ಬರುತ್ತಿವೆ. ಅದಕ್ಕಾಗಿ ಪಟ್ಟಣದ ಹೊರವಲಯದಲ್ಲಿ 18 ಎಕರೆ ಭೂಮಿ ನೀಡಲು ಹಲವರು ಸಿದ್ಧರಿದ್ದಾರೆ ಎಂದು ಸದಸ್ಯ ರಾಜು ಕುಂಬಿ ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಗಂಗಮ್ಮ ಫಕ್ಕಿರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ ಹಾಗೂ ಎಲ್ಲ ಸದಸ್ಯರು, ಪುರಸಭೆಯ ಮುಖ್ಯಾಧಿಕಾರಿ ಉಮೇಶ ಗುಡ್ಡದ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಆರೋಗ್ಯ ನಿರೀಕ್ಷಕ ಬಿ. ಮಂಜುನಾಥ ಸ್ವಾಗತಿಸಿ, ನಿರೂಪಿಸಿದರು.