ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೈತರಿಗೆ ಲಾಭ ತಂದ ಗಲಾಟೆ ಹೂ

Lingaraj Badiger
Updated On : 13 Dec 2013, 10:50 am

ಗಜೇಂದ್ರಗಡ: ನೋಡಲು ಸೇವಂತಿಗೆಯಂತೆ ಕಾಣುವ ಗಲಾಟೆ ಹೂ ಆರು ತಿಂಗಳ ಪುಷ್ಪ ಕೃಷಿ. ಹಳದಿ, ಕೆಂಪು ಬಣ್ಣದ ಈ ಪುಪ್ಪಕ್ಕೆ ಬಹು ಬೇಡಿಕೆಯಿದೆ.
ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಕೆಲವು ರೈತರು ಗಲಾಟೆ ಹೂ ಬೆಳೆದು ಲಾಭ ಕಂಡುಕೊಂಡಿದ್ದಾರೆ. ಚಿಲ್‌ಝರಿ, ರಾಜೂರ, ದಿಂಡೂರ, ಗೋಗೇರಿ, ಕಾಲಕಾಲೇಶ್ವರ, ಪುರ್ತಗೇರಿ, ರಾಮಾಪುರ, ಕಣವಿ, ನಾಗರಸಕೊಪ್ಪ, ನಾಗರಸಕೊಪ್ಪ ತಾಂಡಾ, ಲಕ್ಕಲಕಟ್ಟಿ, ನಾಗೇಂದ್ರಗಡ, ಕಲ್ಲಿಗನೂರ, ಬೇವಿನಕಟ್ಟಿ ಸೇರಿದಂತೆ ತಾಲೂಕಿನ 60ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸುಮಾರು 70 ಹೆಕ್ಟೇರ್ ಪ್ರದೇಶದಲ್ಲಿ ಕಳೆದ 5 ವರ್ಷದಿಂದ ಗಲಾಟೆ ಪುಷ್ಪ ಹೆಚ್ಚು ಬೆಳೆಯುತ್ತಿದ್ದಾರೆ. ಕೆಂಪು ಮಿಶ್ರಿತ ಜವಗು ಪ್ರದೇಶ ಹೂ ಬೆಳೆಗೆ ಸೂಕ್ತವಾಗಿರುವ ಹಿನ್ನೆಲೆಯಲ್ಲಿ ಈ ಭಾಗದ ರೈತರು ಎಕರೆ, ಎರಡೆಕರೆ ಜಮೀನು ಹೂ ಬೆಳೆಗೆ ಮೀಸಲಿಟ್ಟಿದ್ದಾರೆ.
ನಾಟಿ ಹೇಗೆ?: ಸಸಿ ಅಥವಾ ಬೀಜವನ್ನು ಬಿತ್ತುವ ಮೂಲಕ ಬೆಳೆಯಬಹುದಾಗಿದೆ. ನಾಟಿಗೆ ಬೇಕಾದ ಸಸಿ ಬೆಳೆಗಾರರ ಬಳಿ ಲಭ್ಯವಿದ್ದು, ಜಮೀನು ಉಳುಮೆಮಾಡಿ ಸಾಲು ತೆಗೆದು ಸಸಿಯನ್ನು ನಾಟಿ ಮಾಡಬೇಕು. ಬೆರಳುದ್ದ ಗಾತ್ರದ ಗುಣಿ ತೆಗೆದು ಅದರಲ್ಲಿ ಎರಡೆರಡು ಸಸಿಯನ್ನು ಗುಣಿಯಿಂದ ಗುಣಿಗೆ ಒಂದು ಅಡಿ ಅಂತರದಲ್ಲಿ ನಾಟಿ ಮಾಡಬೇಕು. ಒಂದು ವಾರಗಳ ನಂತರ ಬುಡಗಳಿಗೆ ಕೊಟ್ಟಿಗೆ ಗೊಬ್ಬರ ನೀಡಬೇಕು. 6 ತಿಂಗಳ ಪುಷ್ಪ ಬೆಳೆ ಇದಾಗಿದೆ. ಹಳದಿ, ಕೆಂಪು, ಬಿಳಿ, ನೀಲಿ ಹೀಗೆ 4 ಬಣ್ಣದ ತಳಿಗಳು ಅಭ್ಯವಿದ್ದು, ಹಳದಿ ಪುಪ್ಪಕ್ಕೆ ಸರ್ವಋತುಗಳಲ್ಲಿ ಬಹುಬೇಡಿಕೆ ಎನ್ನುತ್ತಾರೆ ಲಕ್ಷ್ಮವ್ವಾ ಶಿವಾಜಿ ನರೇಗಲ್ಲ
ಹಬ್ಬಗಳಲ್ಲಿ ಹೆಚ್ಚಿದ ಬೇಡಿಕೆ: ನಿತ್ಯ 50 ರಿಂದ 70 ಕೆಜಿ ಹೂ ಲಭಿಸುತ್ತಿದೆ. ಗದಗ, ಹುಬ್ಬಳ್ಳಿಗೆ ಇಲ್ಲಿಂದ ಹೂ ಕಳುಹಿಸಲಾಗುತ್ತದೆ. ಕೆಜಿಗೆ ರು. 20 ರಿಂದ 100 ದರವಿದೆ. 1 ಕೆಜಿ ಹೂವಿನಿಂದ 5 ಮಾಲೆ ತಯಾರಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಹೆಚ್ಚಿನ ಬೇಡಿಕೆ ಇದ್ದು, 1 ಮಾಲೆ ರು. 100ಕ್ಕೂ ಮಾರಾಟವಾಗುತ್ತದೆ. ವಾರಕ್ಕೊಮ್ಮೆ ಗಿಡಗಳಿಗೆ ನೀರುಣಿಸುವುದು ಅಗತ್ಯ. ಮುಕ್ಕಾಲು ಎಕರೆ ಭೂಮಿ ತುಂಬಾ 3 ಸಾವಿರ ಗಿಡಗಳಿದ್ದು, ಗೊಬ್ಬರ, ನೀರು, ಕೂಲಿಯಾಳು ಎಲ್ಲ ಸೇರಿ ಒಟ್ಟು ರು. 3 ಸಾವಿರ ಖರ್ಚು ತಗುಲಿದೆ. ಇದರಿಂದ ರು. 10-75 ಸಾವಿರದ ವರೆಗೆ ಅದಾಯ ಪಡೆದಿದ್ದಾರೆ.
ಖರ್ಚು ಕಡಿಮೆ: ಪೂಜೆ, ಶುಭ ಸಮಾರಂಭ ಮದುವೆ ಮಂಟಪ ಶೃಂಗಾರಗಳಲ್ಲಿ ಬಳಸಲ್ಪಡುವ ಗಲಾಟೆ ಹೂ 2 ದಿನಗಳವರೆಗೂ ಬಾಡುವುದಿಲ್ಲ. ವಾಹನ ಪೂಜೆಗೆ ಹೆಚ್ಚಾಗಿ ಬಳಸಲ್ಪಡುವ ಈ ಪುಷ್ಪಕ್ಕೆ ರೋಗ, ಕೀಟ ಬಾಧೆ ಕಾಡುವುದು ಕಡಿಮೆ. ಇನ್ನು ಗಲಾಟೆ ಹೂವಿನ ತೋಟದ ಸುತ್ತ ಬೇಲಿಯಾಗಿ ಚೆಂಡು ಹೂವನ್ನು ನಾಟಿ ಮಾಡಿದ್ದಲ್ಲಿ ಗಲಾಟೆ ಹೂವಿಗೆ ಯಾವ ರೋಗವು ಬಾಧಿಸುವುದಿಲ್ಲ. ಗಲಾಟೆ ಪುಷ್ಪದ ಮಧ್ಯೆ ಹುರುಳಿ ಚವರೆಯನ್ನು ಮಿಶ್ರ ಬೆಳೆಯಾಗಿ ಬೆಳೆಯಬಹುದಾಗಿದೆ. ಕೆಂಪು ಮಣ್ಣು ಬೆಳೆಗೆ ಸೂಕ್ತವಾಗಿದ್ದು, ಸೇವಂತಿಗೆಗೆ ಹೋಲಿಸಿದರೆ ಗಲಾಟೆ ಹೂವು ತೂಕದಲ್ಲಿ ಹೆಚ್ಚು ಗಿಡ ಎತ್ತರಕ್ಕೆ ಬೆಳೆಯುತ್ತಿದ್ದು, ಹೆಚ್ಚು ಬಗ್ಗದೇ ಹೂ ಕಟಾವು ಮಾಡಬಹುದಾಗಿದೆ. ಸೇವಂತಿ ಬೆಳೆಗಿಂತ ಖರ್ಚು ಕೂಡ ಕಡಿಮೆ. ಸರ್ವಋತುಗಳಲ್ಲೂ ಬೇಡಿಕೆ ಇರುವ ಗಲಾಟೆ ಹೂವನ್ನು ಎಲ್ಲ ಕಡೆಗಳಲ್ಲಿ ಬೆಳೆಯಬಹುದಾಗಿದೆ.
ರೈತರ ಅಭಿಪ್ರಾಯ: ಹೂ ಬೆಳೆದ ರೈತರಿಗೆ ಮಾರುಕಟ್ಟೆಯಲ್ಲಿ ಒಮ್ಮೊಮ್ಮೆ ದಿಢೀರನೆ ಬೆಲೆ ಕುಸಿತದಿಂದಾಗಿ ಹಾನಿಗೊಳಗಾಗುವ ಪರಿಸ್ಥಿತಿ ಎದುರಾಗುತ್ತದೆ. ಪಟ್ಟಣಗಳಲ್ಲಿ ಮಾರಾಟ ಮಾಡುವ ರೈತರಿಗೆ ಮಾರಾಟದಲ್ಲಿ ಶೋಷಣೆ ಮಾಡಿ ಶೇ. 12ರಷ್ಟು ಕಮಿಷನ್ ಪಡೆಯಲಾಗುತ್ತದೆ. ಅಲ್ಲದೇ ಹರಾಜಿನಲ್ಲಿ ವರ್ತಕರು ಹೇಳಿದ ದರಕ್ಕೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಗಜೇಂದ್ರಗಡ ಪಟ್ಟಣದಲ್ಲಿ ಹೂ ಹರಾಜು ಕೇಂದ್ರ ತೆರೆದಲ್ಲಿ ಪಟ್ಟಣಕ್ಕೆ ಹೋಗಿ ದಲ್ಲಾಳಿಗಳ ಕೈಯಲ್ಲಿ ಸಿಕ್ಕು ನಲುಗುವ ಪರಿಸ್ಥಿತಿಯಿಂದ ಮುಕ್ತಿಹೊಂದಿ ಅಧಿಕ ಲಾಭ ಗಳಿಸಬಹುದಾಗಿದೆ ಎಂಬುದು ಹೂ ಬೆಳೆದ ರೈತರ ಅಭಿಪ್ರಾಯವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement