ಇಂದು ಕೃಷಿ ಉತ್ಸವ, ವಸ್ತುಪ್ರದರ್ಶನ
ಗದಗ: ಕೃಷಿ ಸಂಬಂಧಿತ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆ ಅಡಿಯಲ್ಲಿ ನೀಡುವ ಮೂಲಕ ಕೃಷಿ ಉತ್ಸವವನ್ನು ಕೃಷಿಕರಿಗೆ ಸಹಕಾರಿಯಾಗುವ ರೀತಿಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಹೇಳಿದರು.
ಅವರು ಶುಕ್ರವಾರ ಸಂಜೆ ನಗರದ ಕೃಷಿ ಇಲಾಖೆಯ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿ. 14ರ ಬೆಳಗ್ಗೆ 10 ಗಂಟೆಗೆ ನಗರದ ಎಪಿಎಂಸಿ ಆವರಣದಲ್ಲಿರುವ ಸ್ವಾಮಿವಿವೇಕಾನಂದ ಸಭಾಭವನದ ಎದುರಿನ ಪ್ರಾಂಗಣದಲ್ಲಿ ಆಯೋಜಿಸಿರುವ ಕೃಷಿ ವಸ್ತುಪ್ರದರ್ಶನವನ್ನು ಧಾರವಾಡ ಕೃಷಿ ವಿವಿಯ ಕುಲಪತಿ ಡಾ. ಎಚ್.ಎಸ್. ವಿಜಯಕುಮಾರ ಉದ್ಘಾಟಿಸುವರು. ಕೃಷಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ತಾಂತ್ರಿಕ ಅಧಿವೇಶನಗಳನ್ನು ಏರ್ಪಡಿಸಲಾಗಿದ್ದು, ಕೃಷಿ ವಿವಿಯ ತಂತ್ರಜ್ಞರಿಂದ ಪ್ರಮುಖ ಹಿಂಗಾರು ಬೆಳೆಗಳ ಬಗ್ಗೆ ತಾಂತ್ರಿಕ ಮಾಹಿತಿ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರಿಂದ ಕೃಷಿ ಮತ್ತು ಕೃಷಿಗೆ ಸಂಬಂಧಿತ ಇಲಾಖೆಗಳ ಯೋಜನೆಗಳ ಕುರಿತು ಮಾಹಿತಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರಿಂದ ಆರ್ಥಿಕ ಮತ್ತು ಆರೋಗ್ಯ ಭದ್ರತೆ ಹಾಗೂ ಮಹಿಳಾ ಸಬಲೀಕರಣ ಕುರಿತು ತಾಂತ್ರಿಕ ಅಧಿವೇಶನಗಳು ಜರುಗಲಿದ್ದು, ವಸ್ತುಪ್ರದರ್ಶನದಲ್ಲಿ ಕೃಷಿ ಪರಿಕರಗಳು, ಉಪಕರಣಗಳು, ತಯಾರಿಕಾ ಮತ್ತು ಪೂರೈಕೆ ಸಂಸ್ಥೆಯಿಂದ ಮಾಹಿತಿ ಹಾಗೂ ಸಾವಯವ ಕೃಷಿ ಕುರಿತು ರೈತರಿಗೆ ತಿಳಿವಳಿಕೆ ಮುಂತಾದ ಅತ್ಯವಶ್ಯಕ ಮಾಹಿತಿ ಒದಗಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ಜಲಾನಯನ ಅಭಿವೃದ್ಧಿ, ಅರಣ್ಯ ಮುಂತಾದ ಇಲಾಖೆಗಳು ವಸ್ತುಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದು, ಕೃಷಿಕರಿಗೆ ಬೇಕಾದ ಸಂಪೂರ್ಣ ಮಾಹಿತಿ ದೊರಕಿಸುವ ಪ್ರಯತ್ನ ಮಾಡಲಾಗಿದೆ ಎಂದರು.