ನೋಟಿಸ್ ಜಾರಿಗೊಳಿಸಲು ನಿರ್ಧಾರ
ಗದಗ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಜಿಪಂ ವತಿಯಿಂದ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆ ಅಸಮರ್ಪಕವಾಗಿದ್ದು, ಈ ಘಟಕಗಳನ್ನು ನಿರ್ಮಿಸಲು ಗುತ್ತಿಗೆ ಪಡೆದಿರುವ ಕಂಪನಿಗೆ ನೋಟಿಸ್ ನೀಡಲು ಜಿಪಂ ಕೆಡಿಪಿ ಸಭೆಯಲ್ಲಿ ನಿರ್ಧರಿಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಜಿಪಂ ಸಭಾಭವನದಲ್ಲಿ ಶುಕ್ರವಾರ ಜಿಪಂ ಪ್ರಭಾರಿ ಅಧ್ಯಕ್ಷ ರಮೇಶ ಮುಂದಿನಮನಿ ಅಧ್ಯಕ್ಷತೆಯಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಕುರಿತು ಜಿಪಂ ಅಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಹೈದ್ರಾಬಾದ್ ಮೂಲದ ಕಂಪನಿಯೊಂದು ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ತಾಂತ್ರಿಕ ದುರಸ್ತಿಯಲ್ಲಿದ್ದು, ಇವುಗಳ ರಿಪೇರಿಗಾಗಿ ಇದುವರೆಗೂ ಕಂಪನಿಯ ಸಿಬ್ಬಂದಿಗಳು ಕ್ರಮಕೈಗೊಂಡಿಲ್ಲ. ಹೀಗಾಗಿ, ಇವರ ಮೇಲೆ ತೆಗೆದುಕೊಳ್ಳುವಂತೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಸೂಚಿಸಿದರು.
ಪ್ರಸಕ್ತ ಆರ್ಥಿಕ ವರ್ಷದ ಅನುದಾನ ನಿಗದಿತ ಅವಧಿಯಲ್ಲಿ ಪೂರ್ಣವಾಗಿ ವೆಚ್ಚ ಮಾಡಿ ಶೇ. ನೂರರ ಆರ್ಥಿಕ ಹಾಗೂ ಭೌತಿಕ ಸಾಧನೆ ಜತೆಗೆ ಯಾವುದೇ ಕಾಮಗಾರಿ ಅಥವಾ ಯೋಜನಾ ಜಾರಿಯ ಕುರಿತು ದೂರು ಬರದಂತೆ ಎಲ್ಲ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಿಇಓ ವೀರಣ್ಣ ತುರಮರಿ ಅಧಿಕಾರಿಗಳಿಗೆ ಸೂಚಿಸಿದರು.
ಅನುದಾನ ಇನ್ನೂ ಬಿಡುಗಡೆ ಆಗದೇ ಇದ್ದಲ್ಲಿ ತಕ್ಷಣವೇ ಇಲಾಖೆಯ ಮೇಲಾಧಿಕಾರಿ ಸಂಪರ್ಕಿಸಿ ಕ್ರಮ ಜರುಗಿಸಬೇಕು. ಮಾಧ್ಯಮಗಳಲ್ಲಿ ವಿವಿಧ ಇಲಾಖೆಗಳ ಯೋಜನೆ ಹಾಗೂ ಕಾಮಗಾರಿಗಳ ಕುರಿತ ದೂರು ದುಮ್ಮಾನ ಹಾಗೂ ಇತರೆ ವರದಿಗಳ ಕುರಿತು ತಕ್ಷಣವೇ ಸ್ಪಂದಿಸಬೇಕು. ಕ್ರಮಕೈಕೊಂಡ ಕುರಿತು ಸಂಬಂಧಿತ ಮಾಧ್ಯಮದವರೆಗೆ ಉತ್ತರ ನೀಡಲು ಆದ್ಯತೆ ನೀಡಬೇಕು ಎಂದರು.
ಜಿಲ್ಲೆಯ ರೈತರು ಬರೀ ವಿಮಾ ಕಂತು ಕಟ್ಟುವುದೇ ಆಗಿದ್ದು, ಜಿಲ್ಲೆಯನ್ನು ಬರಗಾಲವೆಂದು ಘೋಷಿಸಿದರು. ವಿಮೆ ಹಣ ಸೂಕ್ತವಾಗಿ ಸಂದಾಯವಾಗುತ್ತಿಲ್ಲ. ಇದಕ್ಕೆ ಆಡಳಿತಾತ್ಮಕವಾಗಿ ಇರುವ ಸಮಸ್ಯೆ ನಿವಾರಿಸಬೇಕು. ಕೃಷಿ ಇಲಾಖೆಯಿಂದ ತಾಲೂಕಾವಾರು ಪರಿಶಿಷ್ಟ ಕೃಷಿ ಫಲಾನುಭವಿಗಳಿಗೆ ರಿಯಾಯ್ತಿ ದರದ ಯಂತ್ರೋಪಕರಣ ಹಾಗೂ ಇತರೆ ಸೌಲಭ್ಯ ನೀಡುವ ಕಾರ್ಯ ತ್ವರಿಗೊಳಿಸಬೇಕೆಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್.ದೊಡ್ಡಗೌಡರ ಹೇಳಿದರು.
ಜಿಲ್ಲೆಯಲ್ಲಿ ಒಟ್ಟಾರೆ ಸರಾಸರಿ 641 ಮಿ.ಮೀ ಪೈಕಿ ಡಿಸೆಂಬರ್ 12ರ ವರೆಗೆ ಶೇ. 80ರಷ್ಟು ಅಂದರೆ 518 ಮಿ.ಮೀ ಮಾತ್ರ ಮಳೆಯಾಗಿದೆ. ಹಿಂಗಾರು ಕಡಲೆ, ಗೋದಿ, ಕುಸುಬಿ, ಬೆಳೆ ಚೆನ್ನಾಗಿದ್ದು ಶೇಂಗಾ ಬಿತ್ತನೆ ನಡೆದಿದೆ. ಬೆಳೆಗಳ ರೋಗಗಳ ಕುರಿತು ನಿಗಾವಹಿಸಿದ್ದು, ಚಿಕಿತ್ಸೆ ಕ್ರಮ ಕುರಿತು ರೈತರಿಗೆ ತಿಳಿಸಲಾಗುತ್ತಿದೆ. ಕಳೆದ ಮುಂಗಾರುವಿನಲ್ಲಿ ಬೆಳೆಹಾನಿ ಆದ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸರ್ವೇ ಮಾಡಿ ವರದಿ ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಜಿಪಂ ಪ್ರಭಾರಿ ಅಧ್ಯಕ್ಷ ರಮೇಶ ಮುಂದಿನಮನಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿರ್ಮಲಾ ಬರದೂರ, ಕಮಲವ್ವ ಸಜ್ಜನರ ಸೇರಿದಂತೆ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಪಾಲ್ಗೊಂಡಿದ್ದರು.