ಇಂದು ಕಾರ್ತಿಕೋತ್ಸವ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದ ಅಳೇಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ಹಾಗೂ ಕಾರ್ತಿಕೋತ್ಸವ ಡಿ. 16ರಂದು ಜರುಗಲಿದೆ. ಅಂದು ಬೆಳಗ್ಗೆ 6 ಗಂಟೆಗೆ ದೇವರಿಗೆ ವಿಶೇಷ ರುದ್ರಾಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಪೂಜೆ, ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಲಿದೆ. ಬಳಿಕ ಸಂಜೆ 7 ಗಂಟೆಗೆ ಕಾರ್ತಿಕೋತ್ಸವ ಜರುಗಲಿದೆ. ಡಿ. 17ರಂದು ಉಚ್ಚಾಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ. ಜಾತ್ರಾ ಮಹೋತ್ಸವದ ವಿಶೇಷತೆ ಸುತ್ತುಕಾಯಿ ಒಡೆಯುವ ಕಾರ್ಯಕ್ರಮ ನಡೆಯಲಿದೆ. ಸಂಜೆ ಅಮರಗಟ್ಟಿ ಗ್ರಾಮದಿಂದ ತೇರಿನ ಕಳಸ ಬರಲಿದ್ದು ಜತೆಗೆ ಹಿರೇಅಳಗುಂಡಿಯಿಂದ ತೇರಿನ ಹಗ್ಗ ಬರಲಿದೆ. ನಂತರ ಸಹಸ್ರಾರು ಭಕ್ತರ ಮಧ್ಯ ಸಂಜೆ 5 ಗಂಟೆಗೆ ಮಹಾರಥೋತ್ಸವ ನಡೆಯಲಿದೆ. ರಾತ್ರಿ 10 ಗಂಟೆಗೆ ಗ್ರಾಮದ ಕನಕದಾಸ ಯುವಕ ಸಂಘ ಕಲಾವಿದರಿಂದ 'ಕೆರಳಿದ ಅವಳಿ ಸರ್ಪಗಳು' ಹಾಗೂ ವೀರಭದ್ರೇಶ್ವರ ನಾಟ್ಯ ಸಂಘದಿಂದ 'ಹಾಲು ಮತದ ಹುಲಿ' ಎಂಬ ಸಾಮಾಜಿಕ ನಾಟಕ ಪ್ರದರ್ಶನ ಜರುಗಲಿದೆ ಎಂದು ಜಾತ್ರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಂಚಮ್ಮ ದೇವಿ ಕಾರ್ತಿಕೋತ್ಸವ
ಗದಗ: ನಗರದ ಡಿ.ಸಿ. ಮಿಲ್ ತಳಗೇರಿ ಓಣಿಯ ಕೆಂಚಮ್ಮ ದೇವಿಯ ಕಾರ್ತಿಕೋತ್ಸವ ಈಚೆಗೆ ಸಂಭ್ರಮದಿಂದ ನೆರವೇರಿತು. ಅಂದು ಬೆಳಗ್ಗೆ ದೇವಿಗೆ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮ ಜರುಗಿತು. ನಂತರ ನಿತ್ಯಾನಂದ ವಿಜಯದುರ್ಗ ಯುವಕ ಮಂಡಳದ ನೇತೃತ್ವದಲ್ಲಿ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೇರಿತು. ಪ್ರಕಾಶ ಕಲ್ಮನಿ, ವಿಜಯ ಕಲ್ಮನಿ, ಪರಶುರಾಮ ತಳಗೇರಿ, ರಾಘವೇಂದ್ರ ಪರಾಪುರ, ವೀರಪ್ಪ ಕೊಟ್ನಿಕಲ್ಲ, ಕನಕಪ್ಪ ದೊಡ್ಡಮನಿ, ಹನಮಂತಪ್ಪ ಕಟ್ಟಿಮನಿ, ಪಂಪಯ್ಯ ಕೊಟ್ನಿಕಲ್, ಯಗಪ್ಪ ಪೂಜಾರ, ತಾರವ್ವ ದೊಡ್ಡಮನಿ, ರಾಘವ್ವ ಗೌಡರ, ಉಮಾಬಾಯಿ ಕಲ್ಮನಿ, ಕಮಲಾ ಪರಾಪುರ, ನಾಗವ್ವ ಗೌಡರ ಮುಂತಾದವರು ಪಾಲ್ಗೊಂಡಿದ್ದರು.
ಅರ್ಜಿ ಆಹ್ವಾನ
ಗದಗ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರಿಗೆ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಸರ್ಕಾರದಿಂದ ಶೇರು ಸಹಾಯಧನದ ಅವಕಾಶ ಕಲ್ಪಿಸಲಾಗಿದೆ. ಅರ್ಹ ಆಸಕ್ತರು ಸದಸ್ಯತ್ವ ಪಡೆಯಲು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಕಾರ್ಯ ವ್ಯಾಪ್ತಿಯ ಸಹಕಾರ ಸಂಘಗಳ ಕಾರ್ಯದರ್ಶಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
24ರಂದು ಸಭೆ
ಗದಗ: ಜಿಲ್ಲಾಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರು ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿ ಅಧ್ಯಕ್ಷತೆಯಲ್ಲಿ ಡಿ. 24ರಂದು ಮಧ್ಯಾಹ್ನ 12.30ಗಂಟೆಗೆ ಗದಗ ಜಿಪಂ ಸಭಾಭವನದಲ್ಲಿ ಜಿಲ್ಲಾಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಯ ಸಭೆಯನ್ನು ಕರೆಯಲಾಗಿದೆ ಪ್ರಕಟಣೆ ತಿಳಿಸಿದೆ.