ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈರುಳ್ಳಿ ಖರೀದಿ ಸ್ಥಗಿತ: ರೈತ ಕಂಗಾಲು

Lingaraj Badiger
Updated On : 16 Dec 2013, 11:31 am

ಕನ್ನಡಪ್ರಭ ವಾರ್ತೆ, ಗದಗ, ಡಿ. 15
ರಾಜ್ಯದ ಉತ್ತರ ಕರ್ನಾಟಕ ರೈತರ ಆರ್ಥಿಕ ಬೆನ್ನೆಲುಬಾದ ಈರುಳ್ಳಿಯ ಬೆಲೆ ಏರಿಳಿತ ಸಾಮಾನ್ಯ. ಆದರೆ, ಈ ಏರಿಳಿತದೊಂದಿಗೆ ಈರುಳ್ಳಿ ಖರೀದಿದಾರರು ಎಪಿಎಂಸಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಏಕಪಕ್ಷೀಯವಾಗಿ 4 ದಿನಗಳಿಂದ ಈರುಳ್ಳಿ ಖರೀದಿ ಸ್ಥಗಿತಗೊಳಿಸಿದ್ದು, ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಈರುಳ್ಳಿ ಬೆಲೆಯಲ್ಲಿ ಸಾಕಷ್ಟು ಕುಸಿತವಾದ ಹಿನ್ನೆಲೆಯಲ್ಲಿ ಡಿ. 9 ಹಾಗೂ 10ರಂದು ಬೆಳಗಾವಿಯಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಿದರು. ಮರು ದಿನದಿಂದಲೇ ಅಲ್ಲಿ ಈರುಳ್ಳಿ ಖರೀದಿ ನಿಂತು ಹೋಯಿತು. ಹುಬ್ಬಳ್ಳಿಯಲ್ಲಿಯೂ ಖರೀದಿ ನಿಲ್ಲಿಸಿದರು. ಡಿ. 12ರಂದು ಗದಗ ಮಾರುಕಟ್ಟೆಯಲ್ಲಿಯೂ ತೀವ್ರ ದರ ಕುಸಿತದಿಂದ ರೈತರು ಬೀದಿಗಿಳಿದರು. ಇದರಿಂದ ಈರುಳ್ಳಿ ಖರೀದಿದಾರರು ಖರೀದಿ ಮಾಡುವುದನ್ನೇ ನಿಲ್ಲಿಸಿದ್ದು, ನೇರವಾಗಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಸದ್ಯ ಖರೀದಿ ಇಲ್ಲ: ಉತ್ತರ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುವುದು ಹೆಚ್ಚು. ಪ್ರಮುಖ ಈರುಳ್ಳಿ ಮಾರುಕಟ್ಟೆಗಳಾದ ಬೆಳಗಾವಿ, ಹುಬ್ಬಳ್ಳಿ, ಗದಗನಲ್ಲಿ 4 ದಿನಗಳಿಂದ ಈರುಳ್ಳಿ ಖರೀದಿಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ ಹಲವಾರು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ತರಲು ಸಿದ್ಧ ಮಾಡಿಕೊಂಡಿರುವ ಈರುಳ್ಳಿಯನ್ನು ಏನು ಮಾಡಬೇಕು ಎನ್ನುವುದೇ ರೈತರಿಗೆ ತಿಳಿಯದಾಗಿದೆ.
ಎಪಿಎಂಸಿಗೆ ಧೈರ್ಯವಿಲ್ಲವೇ?: ಈ ಎಲ್ಲ ಖರೀದಿದಾರರು, ಎಪಿಎಂಸಿ ಕಾಯ್ದೆ ಅಡಿಯಲ್ಲಿಯೇ ಪರವಾನಗಿ ಪಡೆದು ವಹಿವಾಟು ನಡೆಸುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಏಕಾಏಕಿ ದರ ಕುಸಿತವಾದಾಗ ರೈತರು ಸಹಜವಾಗಿ ಆಕ್ರೋಶಗೊಳ್ಳುತ್ತಾರೆ. ಅವರ ಆಕ್ರೋಶವನ್ನು ಹತ್ತಿಕ್ಕಲು, ರೈತರ ಬೆನ್ನೆಲು ಮುರಿಯಲು ಹೊಂಚು ಹಾಕಿ ಕುಳಿತವರಂತೆ ವರ್ತಿಸುತ್ತಿರುವ ಖರೀದಿದಾರರು, ರೈತರ ಪ್ರತಿಭಟನೆ ನಡೆದ ಮರು ದಿನವೇ ನಾವು ಈರುಳ್ಳಿ ಖರೀದಿಸುವುದಿಲ್ಲ ಎನ್ನುವ ಹೇಳಿಕೆ ನೀಡಿ, ತಕ್ಷಣದಿಂದಲೇ ಖರೀದಿ ಸ್ಥಗಿತಗೊಳಿಸಿದ್ದಾರೆ. ಇವರ ಈ ಏಕಪಕ್ಷೀಯ ನಿರ್ಧಾರವನ್ನು ಪ್ರಶ್ನಿಸಿ, ಈ ರೀತಿ ವರ್ತಿಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ಎಪಿಎಂಸಿ ಅಧಿಕಾರಿಗಳಿಗೆ ಧೈರ್ಯವಿಲ್ಲವೇ? ಅಥವಾ ಸರ್ಕಾರ, ಎಪಿಎಂಸಿಗಳೇ ಈರುಳ್ಳಿ ಖರೀದಿದಾರರ ಅಣತಿಯಂತೆ ವರ್ತಿಸುತ್ತಿವೆಯೋ ಎನ್ನುವುದನ್ನು ಸರ್ಕಾರವೇ ಸ್ಪಷ್ಟಪಡಿಸಬೇಕಿದೆ.

ತಕ್ಷಣವೇ ಈರುಳ್ಳಿ ಖರೀದಿ ಪ್ರಾರಂಭಿಸಬೇಕು. ಸರ್ಕಾರ ಈರುಳ್ಳಿ ಖರೀದಿದಾರರಿಗೆ ಎಪಿಎಂಸಿಗಳ ಮೂಲಕ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಮಾರುಕಟ್ಟೆಯಲ್ಲಿ ಎಷ್ಟೇ ಏರಿಳಿತವಾದರೂ ಖರೀದಿ ಪ್ರಕ್ರಿಯೆ ನಿರಂತರವಾಗಿರಬೇಕು. ಅವಶ್ಯವಿದ್ದ ರೈತ ಮಾರಾಟ ಮಾಡುತ್ತಾನೆ. ಇಲ್ಲವೇ ಬೆಲೆ ಹೆಚ್ಚಾದಾಗ ಮಾರಾಟಕ್ಕೆ ತರುತ್ತಾನೆ. ಆದರೆ, ದರ ಕುಸಿಯುತ್ತಿದ್ದಂತೆ ಈರುಳ್ಳಿ ಖರೀದಿದಾರರು ನಾವು ಖರೀದಿಯನ್ನು ಸ್ಥಗಿತಗೊಳಿಸಿದ್ದೇವೆ ಎನ್ನುತ್ತಿದ್ದು, ಇದು ಕಾನೂನು ಬಾಹಿರ. ಅವರಿಗೆ ಬೇಕಾದಾಗ ಖರೀದಿಸುವುದು, ಬೇಡವಾದಾಗ ಸ್ಥಗಿತಗೊಳಿಸುತ್ತಿದ್ದಾರೆ. ಇದು ಗಂಭೀರ ಸಮಸ್ಯೆಯಾಗಿದ್ದು ಸರ್ಕಾರ ಗಮನ ನೀಡಬೇಕು.
- ಕೆ.ಜಿ. ಶಾಂತಸ್ವಾಮಿಮಠ, ರೈತ ಸಂಘದ ರಾಜ್ಯ ಉಪಾಧ್ಯಕ್ಷ
ಈರುಳ್ಳಿ ಖರೀದಿ ಸ್ಥಗಿತಗೊಳಿಸಿರುವ ಕುರಿತು ಈಗಾಗಲೇ ಈರುಳ್ಳಿ ಖರೀದಿದಾರರೊಂದಿಗೆ ಖರೀದಿ ಪುನಾರಾರಂಭಿಸುವಂತೆ ತಿಳಿಸಲಾಗಿದೆ. ಅವರಿಂದಲೂ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ. ಸೋಮವಾರ ನಂತರವೂ ಖರೀದಿ ಸ್ಥಗಿತಗೊಳಿಸಿದಲ್ಲಿ, ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
- ನಂಜುಂಡಸ್ವಾಮಿ, ಸೆಕ್ರೆಟರಿ, ಗದಗ ಎಪಿಎಂಸಿ
- ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement