ಕಲೆಗಳು ಸಾತ್ವಿಕ ಬದುಕಿನ ಸಂಪತ್ತು
ಕನ್ನಡಪ್ರಭ ವಾರ್ತೆ, ಗದಗ, ಡಿ. 15
ಕಲೆಗಳಿಂದ ಮಾನವನ ಬದುಕಿನ ತಿರುಳು ಅರಿಯಲು ಸಹಕಾರಿಯಾಗುವುದರ ಜತೆಗೆ ಜಂಜಾಟದ ಜಗತ್ತಿನಲ್ಲಿ ಸಹನೆ, ಶಾಂತಿ, ನೆಮ್ಮದಿ ದೊರೆಯುತ್ತದೆ. ಆದ್ದರಿಂದ ಕಲೆಗಳು ಸಾರ್ಥಕ ಬದುಕಿನ ಸತ್ಯಗಳನ್ನು ತಿಳಿಸುವ ಸಂಪತ್ತು ಎಂದು ನಾಡೋಜ ವಿ.ಟಿ. ಕಾಳೆ ಹೇಳಿದರು.
ಶನಿವಾರ ಸ್ಥಳೀಯ ರಾಜೀವ್ ಗಾಂಧಿ ನಗರದಲ್ಲಿರುವ ವಿಜಯ ಕಲಾ ಮಂದಿರ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕಲಾ ಉತ್ಸವದಲ್ಲಿ ಕಲಾ ಮಹರ್ಷಿ ಟಿ.ಪಿ. ಅಕ್ಕಿ ಚಿನ್ನದ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ವಿಜಯಕಲಾ ಮಂದಿರ ಸಂಸ್ಥೆ ಹಲವು ಕಲೆಗಳ ಬೀಡು. ನಿತ್ಯ ನಾಟ್ಯ, ನಾಟಕ, ನಾದ, ವರ್ಣ, ವೈಭವಗಳಿಂದ ಈ ಕಲಾ ದೇಗುಲ ಬೆಳಗುತ್ತಿದೆ. ಬಹು ಕಲಾವಿದರ ಬದುಕು ಕಟ್ಟಿಕೊಟ್ಟ ಕಲಾಗುರುವನ್ನು ಮರೆಯಲು ಅಸಾಧ್ಯ. ಯಾವುದೇ ಯಶಸ್ಸು ದೊರೆಯಬೇಕಾದರೆ ಮನಸ್ಸು ಮತ್ತು ದೇಹಗಳ ಸಂಯೋಗದಿಂದ ಮನಸ್ಸು ಒಳ್ಳೆಯ ವಿಚಾರ ಮಾಡಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಮಾತನಾಡಿ, ಕಲೆಗಳು ಆತ್ಮಾನಂದ ನೀಡುವುದರ ಜತೆಗೆ ಮನಸ್ಸಿನ ಚೈತನ್ಯ, ಮನೋಲ್ಲಾಸಕ್ಕಾಗಿ, ಮನರಂಜನೆಗಾಗಿ ಕಲೆಗಳು ಪ್ರೇರಕವಾಗಿವೆ. ಅಂತಹ ಕಲೆಗಳ ಶಿಕ್ಷಣವನ್ನು ನೀಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಕಲಾವಿದರು ಹಾಗೂ ಕಲೆಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿರುವ ಕಲಾಮಂದಿರ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಡಾ. ಎಸ್.ಎನ್. ಕಿರುಮಕ್ಕಿ ಚಿನ್ನದ ಪದಕ ಪ್ರಶಸ್ತಿ ಪಡೆದ ಪ್ರವೀಣ ಗಾಯಕರ ಹಾಗೂ ಸಂಸ್ಥೆಯ ನಿರ್ದೇಶಕ ಅಶೋಕ ಅಕ್ಕಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಟಿ.ಡಿ. ಮೆಹರ್ವಾಡೆ, ವಿ.ಇ. ಬಡಿಗೇರ, ಶಶಿಕಲಾ ಬಡಿಗೇರ, ಪಿ.ಎ. ಕುಲಕರ್ಣಿ, ಅಶೋಕ ಬಣ್ಣದ, ಹರ್ಷದಾ ಕೇರಕರ, ರಾಜೇಂದ್ರ ಗಡಾದ, ಎ.ಎಂ. ಕಿತ್ಲಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ, ಡಾ. ಪ್ರದೀಪ್ ಅಗಲಾಟದ, ಅನ್ನಪೂರ್ಣ ವರವಿ, ಬಿ.ಬಿ. ಗಿಡ್ನಂದಿ, ಬಿ.ಎಂ. ಬಿಳೆಯಲಿ, ಐ.ಐ. ಪಟ್ಟಣಶೆಟ್ಟಿ, ಮನೋಹರ ಗಾಯ್ಕರ, ಎ.ಎ. ಶಿರಹಟ್ಟಿ ಇತರರು ಇದ್ದರು. ಪ್ರೇಮಾ ಹಿರೇಮಠ ಸ್ವಾಗತಿಸಿದರು. ಬಸವರಾಜ ನೆಲಜೇರಿ ನಿರೂಪಿಸಿದರು. ಆರ್.ಡಿ. ಕೊಡ್ಲಿಕೊಪ್ಪ ವಂದಿಸಿದರು.