ಕುಡುಕ ಕಾರ್ಯದರ್ಶಿ ತರಾಟೆಗೆ
ಗಜೇಂದ್ರಗಡ: ಸಮೀಪದ ರಾಜೂರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶರಣಪ್ಪ ಬಂಡಿವಡ್ಡರ ನಿತ್ಯ ಮದ್ಯ ಕುಡಿದು ಪಂಚಾಯಿತಿ ಕಾರ್ಯಾಲಯಕ್ಕೆ ಬರುತ್ತಿದ್ದರಿಂದ ಕಾರ್ಯದರ್ಶಿಯನ್ನು ಶುಕ್ರವಾರ ಸಂಜೆ ಗ್ರಾಪಂ ಅಧ್ಯಕ್ಷ, ಸದಸ್ಯರು ಹಾಗೂ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು. ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿ, 2 ವರ್ಷದಿಂದ ರಾಜೂರು ಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶರಣಪ್ಪ ಬಂಡಿವಡ್ಡರ ದಿನನಿತ್ಯ ಕಂಠಪೂರ್ತಿ ಕುಡಿದು ಬರುತ್ತಾನೆ. ರಿಜಿಸ್ಟರ್‌ಗೆ ಸಹಿ ಮಾಡಿ ಮನೆಗೆ ಹೋಗಿ ಮೊಬೈಲ್ ಸ್ವೀಚ್‌ಆಫ್ ಮಾಡಿ ಮಲಗಿ ಬಿಡುತ್ತಾನೆ. ರಹವಾಸಿ ಸೇರಿದಂತೆ ಇನ್ನಿತರ ಕೆಲಸಕ್ಕೆಂದು ಎಲ್ಲ ಕೆಲಸ ಬಿಟ್ಟು ಬರುವ ಗ್ರಾಮಸ್ಥರು ಪರದಾಡುವಂತಾಗಿದೆ. ಈ ಕುರಿತು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಡಿ. ಪಿಡಿಶೆಟ್ಟಿ ಅವರಿಗೆ ಮೌಖಿಕವಾಗಿ ಹಲವಾರು ಬಾರಿ ಗಮನಕ್ಕೆ ತರಲಾಗಿದೆ. ಅಲ್ಲದೇ ಅರ್ಜಿ ಕೊಡಲು ಎಲ್ಲ ಸದಸ್ಯರೂ ಹೋದರೆ ಅರ್ಜಿ ತೆಗೆದುಕೊಂಡಿಲ್ಲ. ಕೂಡಲೇ ಸಂಬಂಧಿಸಿದ ಇಲಾಖೆ ಕ್ರಮಕೈಗೊಳ್ಳಬೇಕು ಎಂದರು. ಗ್ರಾಪಂ ಸದಸ್ಯ ಶಿವಕುಮಾರ ಜಾಧವ, ಗ್ರಾಪಂ ಸದಸ್ಯ ಪರಶುರಾಮ ಚಿಲಝರಿ, ಯಮನೂರಸಾಬ ಮುಜಾವರ, ಪಡಿಯಪ್ಪ ಲಮಾಣಿ, ಚಿನ್ನಪ್ಪ ಜಾಲಿಹಾಳ, ದೇವಪ್ಪ ರಾಠೋಡ, ಯಮನಪ್ಪ ಮೂಗನೂರ, ರಾಜೂರ ಗ್ರಾಮಸ್ಥರಾದ ದಾವಲ ಮುಜಾವರ, ಮುರ್ತುಸಾಬ್ ಮುಜಾವರ, ಮೂಖಪ್ಪ ಹಾದಿಮನಿ, ಹನುಮಂತ ಕಟ್ಟಿಮನಿ, ಹನುಮಪ್ಪ ಭಜಂತ್ರಿ, ಪರಸಪ್ಪ ಚವ್ಹಾಣ, ಪೀರು ರಾಠೋಡ, ಬಸವರಾಜ ಹೂಗಾರ, ಸುರೇಶ ಪಾಟೀಲ, ದಿಂಡೂರ ಗ್ರಾಮಸ್ಥರಾದ ಶರಣಪ್ಪ ರೋಣದ, ಚಿನ್ನಪ್ಪ ಬಂಡಿವಡ್ಡರ, ಸೋಮಲೆಪ್ಪ ಚವ್ಹಾಣ ಮುಂತಾದವರು ಉಪಸ್ಥಿತರಿದ್ದರು.