ಗರಡಿಮನೆ ಜೀರ್ಣೋದ್ಧಾರಗೊಳಿಸಿ
ಗದಗ-ಬೆಟಗೇರಿ ಅವಳಿ ನಗರದ 31ನೇ ವಾರ್ಡಿನ ವ್ಯಾಪ್ತಿಯಲ್ಲಿ ಬರುವ ಕಿಲ್ಲಾ ನರಗರಡಿ ಓಣಿಯಲ್ಲಿ ಪುರಾತನ ಕಾಲದಿಂದ ಉಪಯೋಗಿಸಿಕೊಂಡು ಬಂದಿರುವ ಗರಡಿಮನೆ (ವ್ಯಾಯಾಮ ಶಾಲೆ)ಯು ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಈ ಗರಡಿಮನೆಗೆ ಸೂಕ್ತ ಕಾಯಕಲ್ಪ ಕಲ್ಪಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.
ಈ ಗರಡಿಮನೆ ಮತ್ತು ಅದರ ಪ್ರಾಂಗಣ ಸಿಟಿ ಸರ್ವೇ ದಾಖಲೆಗಳಲ್ಲಿ ಸಾರ್ವಜನಿಕ ತಾಲೀಮ ಖಾನಾ ಎಂದೆ ದಾಖಲಿದ್ದು, ಇತ್ತೀಚಿನವರೆಗೆ ಈ ಭಾಗದಲ್ಲಿ ವಾಸಿಸುತ್ತಿರುವ ಸಾರ್ವಜನಿಕರು, ಯುವಕರು ವ್ಯಾಯಮ ಮಾಡಲು ಈ ಗರಡಿ ಮನೆಯನ್ನು ಉಪಯೋಗಿಸುತ್ತ ಬಂದಿದ್ದಾರೆ. ಆದರೆ ಕಳೆದ 2-3 ವರ್ಷಗಳ ಹಿಂದೆ, ಈ ಭಾಗದಲ್ಲಿ ಸುರಿದ ಧಾರಾಕಾರ ಮಳೆಯ ಕಾರಣದಿಂದ ಗರಡಿ ಮನೆಯ ಇಮಾರತಿ ಹಾಗೂ ಅದರ ಸುತ್ತಮುತ್ತಲಿನ ಆವರಣ ಗೋಡೆ ಕುಸಿಯುತ್ತಾ ಹೊರಟಿದ್ದು, ಈಗ ಅಲ್ಲಿ ಭದ್ರತೆ ಇಲ್ಲದ ಕಾರಣ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿದೆ.
ಕಾರಣ ಈ ಭಾಗದ ಯುವ ಜನತೆಯ ಹಿತ ದೃಷ್ಟಿಯಿಂದ ಈ ಗರಡಿ ಮನೆಯ ಜೀರ್ಣೋದ್ಧಾರ ಮಾಡುವುದು ಅಗತ್ಯವಾಗಿರುತ್ತದೆ. ಈ ಆಸ್ತಿ ಸಾರ್ವಜನಿಕ ತಾಲೀಮ ಖಾನಾ ಆಗಿರುವುದರಿಂದ ಕ್ರೀಡೆ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರುವ, ಅನುದಾನದಡಿಯಲ್ಲಿ ಈ ಗರಡಿ ಮನೆಯನ್ನು ಜೀರ್ಣೋದ್ಧಾರ ಮಾಡಿ, ಇಂದಿನ ಯುವ ಜನರ ಅಗತ್ಯಕ್ಕೆ ತಕ್ಕಂತೆ ಒಂದು ಉತ್ತಮವಾದ ವ್ಯಾಯಮ ಶಾಲೆಯಾಗಿ ಪರಿವರ್ತಿಸಿದಲ್ಲಿ ಈ ಭಾಗದ ಸರ್ವ ಯುವಜನರಿಗೆ ಉಪಯುಕ್ತವಾಗುವುದು. ಅಷ್ಟೇ ಅಲ್ಲದೇ ಸಾರ್ವಜನಿಕರಿಗೆ ಕೂಡ ಸ್ವಚ್ಛವಾದ ವಾತಾವರಣ ದೊರೆಯುವುದು. ಕಾರಣ ಈ ಗರಡಿ ಮನೆಯ ಜೀರ್ಣೋದ್ಧಾರಕ್ಕೆ ಜಿಲ್ಲಾಡಳಿತ ಹಾಗೂ ನಗರಸಭೆ ಮುಂದಾಗಬೇಕಿದೆ.
-ಗದಗ-ಬೆಟಗೇರಿಯ 31ನೇ ವಾರ್ಡಿನ ಸಾರ್ವಜನಿಕರು.
ಅಂಗವಿಕಲರಿಗೆ ಪ್ರತ್ಯೇಕ ಗೋಷ್ಠಿ ಇರಲಿ
ಗದಗ: ಮಡಿಕೇರಿಯಲ್ಲಿ ಜನೆವರಿ 7, 8, 9 ರಂದು ನಡೆಸಲು ಉದ್ದೇಶಿಸಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೋಷ್ಠಿಯನ್ನು ಏರ್ಪಡಿಸಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ರಾಜ್ಯದಲ್ಲಿ ಇಲ್ಲಿಯವರೆಗೂ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಂಗವಿಕಲರ ಕುರಿತು ಪ್ರತ್ಯೇಕ ಗೋಷ್ಠಿಯನ್ನು ನಡೆಸಿದ ಯಾವುದೇ ಉದಾಹರಣೆಯಿಲ್ಲ. ಈ ವಿಚಾರದ ಕುರಿತಾಗಿ ಗಂಗಾವತಿಯಲ್ಲಿ ಜರುಗಿದ 78ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿ ನೀಡುವಂತೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ.
ಬಿಜಾಪುರದಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಕುರಿತಾದ ಗೋಷ್ಠಿಯನ್ನು ಏರ್ಪಡಿಸುವಂತೆ ಒತ್ತಾಯಿಸಲಾಗಿದೆ.
ಅಂಗವಿಕಲರ ಬಗ್ಗೆ ಅನುಕಂಪ ಪಡುವ ಬದಲಾಗಿ ಅವರಿಗೆ ಹೆಚ್ಚು ಅವಕಾಶವನ್ನು ಒದಗಿಸಿಕೊಡಬೇಕಿದೆ. ಅಂಗವೈಕಲ್ಯತೆಯನ್ನು ಮೆಟ್ಟಿ ನಿಂತು ಸಾಧನೆಯನ್ನು ಮಾಡಿದವರು ಹಲವರಿದ್ದಾರೆ. ಅಂಥವರಲ್ಲಿ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪಂಡಿತ ಪುಟ್ಟರಾಜ ಗವಾಯಿಗಳು, ಪ್ಯಾರ್ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕವನ್ನು ಪಡೆದ ಹಾಸನದ ಗಿರೀಶ ಹಾಗೂ ವಿಶ್ವಸಂಸ್ಥೆಯ ಯುವ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಅವಕಾಶ ಸಿಗದಿದ್ದರೆ ಅವರ ಪರಿಚಯ ಯಾರಿಗೂ ಆಗುತ್ತಿರಲಿಲ್ಲ.
ಆದ್ದರಿಂದ ಅಂಗವಿಕಲರ ಅಂಗವೈಕಲ್ಯತೆಯ ಬಗ್ಗೆ ನೋಡದೆ ಅವರಲ್ಲಿರುವ ಶಕ್ತಿ, ಸಾಮರ್ಥ್ಯವನ್ನು ಗುರುತಿಸಬೇಕಾದರೆ ಅವರಿಗೆ ಸೂಕ್ತ ವೇದಿಕೆಯ ಅವಶ್ಯವಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಮುಂಬರುವ ದಿನಗಳಲ್ಲಿ ಮಡಿಕೇರಿಯಲ್ಲಿ ಜರುಗುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೋಷ್ಠಿ ಏರ್ಪಡಿಸುವುದರೊಂದಿಗೆ ಅಂಗವಿಕಲರ ಸಮಸ್ಯೆಗಳ ಚರ್ಚೆಯ ಜತೆಗೆ ಅವರಲ್ಲಿರುವ ಪ್ರತಿಭೆಯ ಅನಾವರಣಕ್ಕೆ ಅವಕಾಶ ನೀಡಬೇಕು. ಅಂಗವಿಕಲರಲ್ಲಿರುವ ವಿಶೇಷ ಪ್ರತಿಭೆಗಳನ್ನು ಹೊರಹಾಕಲು ಅವಕಾಶ ಮಾಡಿಕೊಡಬೇಕು.
- ಬೀರಪ್ಪ ಅಂಡಗಿ
ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ