ಪೋಸ್ಕೋ ಸ್ಥಾಪನೆಗೆ ಒತ್ತಾಯಿಸಿ ಮನವಿ
ಮುಂಡರಗಿ: ತಾಲೂಕಿನ ಹಳ್ಳಿಗುಡಿ ಗ್ರಾಮದಲ್ಲಿ ಪೋಸ್ಕೋ ಸ್ಥಾಪನೆಗೆ ಒತ್ತಾಯಿಸಿ ಭಾನುವಾರ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಮನವಿ ಸಲ್ಲಿಸಲಾಯಿತು. ಹಳ್ಳಿಗುಡಿ ಗ್ರಾಮದಲ್ಲಿ ಶೇ. 85ರಷ್ಟು ರೈತರು ಹಳ್ಳಿಗುಡಿ ಭಾಗದಲ್ಲಿ ಪೋಸ್ಕೋ ಉಕ್ಕು ಘಟಕ ಸ್ಥಾಪಿಸಲು, ಅದಕ್ಕೆ ಬೇಕಾದ ಭೂಮಿ ಕೊಡಲಿಕ್ಕೆ ನಮ್ಮಲ್ಲಿ 536 ಜನರಲ್ಲಿ ಸುಮಾರು 436 ಜನರು 3,382 ಎಕರೆ ಭೂಮಿಯನ್ನು ಷರತ್ತು ಬದ್ಧವಾಗಿ ಕೊಡಲಿಕ್ಕೆ ತಯಾರಿದ್ದರೂ ಕೆಲವು ರಾಜಕೀಯ ಉದ್ದೇಶ ಹಾಗೂ ಗದಗ ತೋಂಟದಾರ್ಯ ಶ್ರೀಗಳಿಂದ ಮತ್ತು ಕೆಲವೇ ಕೆಲವು ರೈತರಿಂದ ವಿರೋಧ ವ್ಯಕ್ತವಾಗಿದ್ದರಿಂದ ನಮ್ಮ ಗ್ರಾಮಕ್ಕೆ ಹಾಗೂ ನಮ್ಮ ಜಿಲ್ಲೆಗೆ ಬರುವಂತಹ ಒಂದು ಉಕ್ಕುಘಟಕ ಹೊರಹೋಗುವಂತಾಯಿತು. ಆದ್ದರಿಂದ ಹಳ್ಳಿಗುಡಿ ಗ್ರಾಮದಲ್ಲಿ ಉಕ್ಕು ಘಟಕದ ಕುರಿತು ಪುನರ್ಪರಿಶೀಲಿಸಿ ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳಬೇಕಿದೆ.
ಹಳ್ಳಿಗುಡಿ ಗ್ರಾಮದ ಹತ್ತಿರ ಪೋಸ್ಕೋ ಉಕ್ಕು ಕಾರ್ಖಾನೆ ಸ್ಥಾಪಿಸುವುದರಿಂದ ಉತ್ತರ ಕರ್ನಾಟಕದ ಭಾಗದಲ್ಲಿ ಲಕ್ಷಾಂತರ ಜನತೆಗೆ ಉದ್ಯೋಗ ಸೃಷ್ಟಿಯಾಗುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಹಿಂದುಳಿದ ಜಿಲ್ಲೆಯೂ ಅಭಿವೃದ್ಧಿ ಆದಂತಾಗುತ್ತದೆ. ಆದ್ದರಿಂದ ನಮ್ಮ ಮನವಿಯ ಕುರಿತು ಈ ಕೂಡಲೇ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ, ಪೋಸ್ಕೋ ಉಕ್ಕು ಘಟಕ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲು ಸರ್ಕಾರಕ್ಕೆ ತಾವು ಆಗ್ರಹಿಸಬೇಕೆಂದು ಶಾಸಕರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಈ ಭಾಗದಲ್ಲಿ ಪೋಸ್ಕೋ ಸ್ಥಾಪನೆಗೆ ಸಾಕಷ್ಟು ಪರ-ವಿರೋಧವಿದೆ. ಈಗಾಗಲೇ ಈ ಕಂಪನಿಯು ಕಪ್ಪುಪಟ್ಟಿಯಲ್ಲಿದೆ ಎಂದು ಈ ಹಿಂದೆಯೇ ಕೇಳಿ ಬಂದಿದೆ. ಈ ಕುರಿತು ತಾವು ರೋಣ ಹಾಗೂ ನರಗುಂದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರೊಂದಿಗೆ, ಜ.ಡಾ. ತೋಂಟದಸಿದ್ಧಲಿಂಗ ಶ್ರೀಗಳು ಹಾಗೂ ಜ.ಡಾ. ಅನ್ನದಾನೀಶ್ವರ ಶ್ರೀಗಳೊಂದಿಗೆ, ಪರಿಸರವಾದಿಗಳೊಂದಿಗೆ ಹಾಗೂ ಈ ಹಿಂದೆ ಪೋಸ್ಕೋ ಬೇಡವೆಂದ ರೈತರೊಂದಿಗೆ ಚರ್ಚಿಸಿ, ಇಲ್ಲಿನ ಇತರೆ ಜನರ ಭಾವನೆಯನ್ನು ತಿಳಿದುಕೊಂಡು, ತಾವು ಈ ವಿಷಯವನ್ನು ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾಪಿಸುವುದಾಗಿ ತಿಳಿಸಿದರು. ಸೋಮನಗೌಡ ಕರಮುಡಿ, ಯಲ್ಲಪ್ಪ ರಾಮೇನಹಳ್ಳಿ, ಚೆನ್ನಪ್ಪ ಪುರದ, ವೀರಣ್ಣ ಕುರುಡಗಿ, ಎಸ್.ಜಿ. ಅಂಗಡಿ, ಬಾಬು ಚೆನ್ನಳ್ಳಿ, ಬಿ.ಜಿ. ಪುರದ, ಸಿ.ಎ.ಬಳಗಾನೂರ, ಎಂ.ಬಿ. ಗೌಡರ, ಹೊನ್ನಪ್ಪ ಚೆನ್ನಳ್ಳಿ ಮುಂತಾದವರು ಉಪಸ್ಥಿತರಿದ್ದರು.