ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೆಣಸಿನಕಾಯಿ ಇಳುವರಿ ಕುಂಠಿತ

Lingaraj Badiger
Updated On : 16 Dec 2013, 11:27 am

ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ. ಡಿ. 15
ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ಮೆಣಸಿನಕಾಯಿ ಬೆಳೆ ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಇಳುವರಿಯಲ್ಲಿ ಸಾಕಷ್ಟು ಕುಸಿತವಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎನ್ನುವ ರೈತರ ಆಸೆಗೆ ಇಳುವರಿ ಕಡಿಮೆಯಾಗುತ್ತಿರುವುದು ತಣ್ಣೀರೆರಚಿದೆ.
ಸಕಾಲದಲ್ಲಿ ಮಳೆಯಾಗದ ಪರಿಣಾಮವಾಗಿ ಮೆಣಸಿನಕಾಯಿಯ ಇಳುವರಿ ಕುಂಠಿತಗೊಂಡಿದ್ದು, ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಕೆಂಪು ಮೆಣಸಿನಕಾಯಿಗೆ ಈಗ ಕ್ವಿಂಟಾಲ್‌ಗೆ ರು. 16-18 ಸಾವಿರ ಬೆಲೆ ಇದ್ದು, ರೈತರ ಬೆಳೆಗೆ ಇಳುವರಿ ಮಾತ್ರ ಕಡಿಮೆಯಾಗಿದ್ದು ಚಿಂತೆಗೆ ಕಾರಣವಾಗಿದೆ.
ಮುಂಗಾರು ಹಂಗಾಮಿನಲ್ಲಿ ಒಂದೆರೆಡು ಉತ್ತಮ ಮಳೆಯಾಗಿದ್ದು, ಮೆಣಸಿನ ಸಸಿ ನಾಟಿ ಮಾಡಿದ ರೈತರಲ್ಲಿ ಆಶಾಭಾವನೆ ಮೂಡುವಂತೆ ಮಾಡಿತ್ತು. ಮೆಣಸಿನಕಾಯಿ ಬೆಳೆಯನ್ನು ಮುಂಗಾರು ಹಂಗಾಮಿನ ಅರ್ಧಭಾಗ ಮುಕ್ತಾಯಗೊಂಡ ನಂತರ ನಾಟಿ ಮಾಡಲಾಗುತ್ತದೆ. ಏಕೆಂದರೆ ಹೆಚ್ಚಿನ ಮಳೆಗೆ ಮೆಣಸಿನ ಬೆಳೆಯು ಸಿಡಿದು ಹೋಗುವ ಅಪಾಯವಿರುತ್ತದೆ. ಆದರೆ, ಈ ಬಾರಿ ಲಕ್ಷ್ಮೇಶ್ವರ ಹೋಬಳಿಯಲ್ಲಿ ಹಿಂಗಾರು ಮಳೆಗಳು ಸಂಪೂರ್ಣವಾಗಿ ವಿಫಲವಾಗಿ, ಮೆಣಸಿನ ಗಿಡಗಳು ಹೂವು, ಹೀಚು ಬಿಡುವ ಹಂತಕ್ಕೆ ಬಂದಾಗ ಮಳೆಯು ಬಾರದೇ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಬರದೇ ರೈತರು ಕಂಗಾಲಾಗಿದ್ದಾರೆ. ಲಕ್ಷ್ಮೇಶ್ವರ ಹೋಬಳಿಯಲ್ಲಿ ರಾಮಗೇರಿ, ಬಸಾಪುರ, ಲಕ್ಷ್ಮೇಶ್ವರ, ಗೊಜನೂರು, ಬಟ್ಟೂರು, ಶಿಗ್ಲಿ, ಗೋವನಾಳ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ ಮೊದಲಾದ ಕಡೆಗಳಲ್ಲಿ ಮೆಣಸಿನಕಾಯಿ ಬೆಳೆಯಲು ಯೋಗ್ಯವಾದ ಕಪ್ಪು ಭೂಮಿ ಇದ್ದು, ಇಲ್ಲಿನ ರೈತರು ಪ್ರಮುಖವಾದ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬೆಳೆದು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮೆಣಸಿನಕಾಯಿ ಬೆಳೆಯು ಕುಂಠಿತಗೊಂಡಿರುವುದು ಸಹಜವಾಗಿ ರೈತರ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ.


4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆ
ಲಕ್ಷ್ಮೇಶ್ವರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 4 ಸಾವಿರ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು (ಬಿತ್ತನೆ) ನಾಟಿ ಮಾಡಲಾಗಿದ್ದು, ಇಳುವರಿ ಮಾತ್ರ ಆಶಾದಾಯಕವಾಗಿಲ್ಲ ಎಂಬುದು ನೋವಿನ ಸಂಗತಿ. ಕಳೆದ ನಾಲ್ಕೈದು ವರ್ಷಗಳಿಂದಲೂ ಮೆಣಸಿನಕಾಯಿ ಬೆಳೆವ ರೈತರಿಗೆ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ಪ್ರಸಕ್ತ ಸಾಲಿನಲ್ಲಾದರೂ ಉತ್ತಮ ಇಳುವರಿ ಬರಬಹುದು ಎನ್ನುವ ರೈತರ ನಿರೀಕ್ಷೆ ಹುಸಿಯಾಗಿದೆ.
- ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement