ಸುಸಂಸ್ಕೃತ ಸಮಾಜ ನಿರ್ಮಾಣವೇ ಮಠಗಳ ಗುರಿ
ಶಿರಹಟ್ಟಿ: ಸುಸಂಸ್ಕೃತ ಸಮಾಜ ನಿರ್ಮಾಣವೇ ಮಠಗಳ ಗುರಿಯಾಗಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಜ. ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಶನಿವಾರ ತಾಲೂಕಿನ ಬನ್ನಿಕೊಪ್ಪ ಬೃಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರ ರಜತ ಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಧರ್ಮ ಅಗತ್ಯ. ಸದ್ವಿಚಾರ, ಸಂಸ್ಕಾರಗಳಿಂದ ಮಾನವ ಜೀವನ ಉನ್ನತಿ ಕಾಣಲು ಸಾಧ್ಯ. ಉತ್ಕೃಷ್ಟ ಭಾರತೀಯ ಸಂಸ್ಕೃತಿಯಿಂದ ಸಮಾಜದಲ್ಲಿ ಸಾಮರಸ್ಯ ಸ್ಥಾಪನೆಯಾಗಬೇಕಿದೆ.
ಪ್ರಾಚೀನ ಇತಿಹಾಸ ಮತ್ತು ಪವಿತ್ರ ಪರಂಪರೆಯನ್ನು ವೀರಶೈವ ಧರ್ಮ ಹೊಂದಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಈ ಧರ್ಮದಲ್ಲಿ ಜನಜಾಗೃತಿ ಮತ್ತು ಧರ್ಮ ಜಾಗೃತಿ ಮಾಡುತ್ತಾ ಬರಲಾಗಿದೆ. ಆಧುನಿಕತೆ ಮತ್ತು ವೈಚಾರಿಕತೆ ಹೆಸರಿನಲ್ಲಿ ಧಾರ್ಮಿಕ ವಿಚಾರ, ಆಚರಣೆಗಳಿಗೆ ಆತಂಕವನ್ನು ಹೆಚ್ಚಿಸುವಂತ ಜನರು ಹೆಚ್ಚಾಗುತ್ತಿದ್ದಾರೆ. ಯಾವುದೇ ಗೊತ್ತು ಗುರಿಗಳಿಲ್ಲದ, ಆದರ್ಶ ಧರ್ಮಪರಿಪಾಲನೆ ಇಲ್ಲದ ಇಂಥವರ ಬಗೆಗೆ ಭಕ್ತರು ಜಾಗೃತರಾಗಿರಬೇಕು.
ಮಠಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಒಳಪಡಿಸುವ ವಿಚಾರಕ್ಕೆ ಸರ್ಕಾರ ಮುಂದಾಗುತ್ತಿರುವುದು ಸರಿಯಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಆಲೋಚನೆಗಳಿಗೆ ಮುಂದಾಗಬಾರದು. ಇದಕ್ಕೆ ಅವಕಾಶ ಕಲ್ಪಿಸಿದ್ದೇ ಆದಲ್ಲಿ ಜಾತಿ ಮಧ್ಯೆ ಸಂಘರ್ಷ ಹುಟ್ಟುಹಾಕಿದಂತಾಗುತ್ತದೆ. ಈ ವಿಚಾರ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ತಮ್ಮ ನಿರ್ಣಯ ಬದಲಿಸದೇ ಹೋದಲ್ಲಿ ಮುಂದಿನ ದಿನಮಾನದಲ್ಲಿ ಮಠಾಧೀಶರೆಲ್ಲರೂ ಒಂದಾಗಿ ಪ್ರತಿಭಟನೆಯಂತಹ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಬನ್ನಿಕೊಪ್ಪ ಬೃಹನ್ಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಗಳು ತಮ್ಮ ಅಧಿಕಾರದ 25 ವರ್ಷಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಭಕ್ತ ಸಮುದಾಯಕ್ಕೆ ಗೌರವ ತಂದಿದ್ದಾರೆ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ವೈಚಾರಿಕತೆ, ಜನಪರ ಕಾಳಜಿ ಮೂಡಲು ಸಾಧ್ಯವಾಗಿದೆ. ಧಾರ್ಮಿಕವಾಗಿ ನಾಡಿನ ಸಮುದಾಯವನ್ನು ಜಾಗೃತಿಗೊಳಿಸುವ ಕೈಂಕರ್ಯಕ್ಕೆ ಶ್ರಮಿಸಿದ ದಾರ್ಶನಿಕರ ಆಚರಣೆಗಳಲ್ಲಿ ಸರ್ವ ಧರ್ಮಗಳ ಜನರು ಪಾಲ್ಗೊಳ್ಳಬೇಕಾದ ಅಗತ್ಯವಿದೆ. ಜನಜಾಗೃತಿಗಾಗಿ ಮಠಗಳ ಅಗತ್ಯವಿದೆ. ದಿಕ್ಕು ತಪ್ಪಿ ಹೋಗುತ್ತಿರುವ ಜನತೆಗೆ ಧರ್ಮಪಾಠಗಳ ಮಾರ್ಗದರ್ಶನದ ಅಗತ್ಯತೆಯಿದೆ ಎಂದರು. ಚಂದ್ರಶೇಖರ ಶಿವಾಚಾರ್ಯರು, ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು, ಡಾ. ಸುಜ್ಞಾನದೇವ ಶಿವಾಚಾರ್ಯರು, ಜಡಿ ಸಿದ್ಧೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು. ವೀರಣ್ಣ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎ. ಬಳಿಗೇರ ಉಪನ್ಯಾಸ ನೀಡಿದರು. ತಾಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್, ಎಂ.ಎಚ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಗುರು ಸಿದ್ಧೇಶ್ವರ ಶಿವಾಚಾರ್ಯ ಶ್ರೀಗಳು ಸ್ವಾಗತಿಸಿ, ನಿರೂಪಿಸಿದರು.