ದುಶ್ಚಟ ಬಿಟ್ಟು ಪರಿಶುದ್ಧರಾಗಿ: ಶ್ರೀಗಳು
ಶಿರಹಟ್ಟಿ: ಮನುಷ್ಯನಿಗೆ ಅತಿ ಅವಶ್ಯವಾದ ದೇಹದ ಪ್ರತಿಯೊಂದು ಅವಯವಗಳು ಬಹಳ ಪ್ರಾಮುಖ್ಯತೆ ಪಡೆದಿದ್ದು, ತಂಬಾಕು, ಗುಟ್ಕಾ, ಸಿಗರೇಟ್, ಮಧ್ಯಪಾನ ಸೇವನೆಯಿಂದ ಆರೋಗ್ಯ ಹಾಳುಮಾಡಿಕೊಳ್ಳಬಾರದು ಎಂದು ಬಾಳೇಹೊಸೂರ ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಭಾನುವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ನೂತನಮಠ, ದಾಸೋಹ ಮಹಾಮನೆ ಲೋಕಾರ್ಪಣೆ ಮಹೋತ್ಸವ ಹಾಗೂ ಜನಜಾಗೃತಿ ಪಾದಯಾತ್ರೆ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಆಧುನಿಕ ಪ್ರಪಂಚದಲ್ಲಿ ಒತ್ತಡಕ್ಕೆ ಸಿಲುಕಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ದುಶ್ಚಟಗಳಿಗೆ ಬಲಿಯಾಗಿ ತೊಂದರೆ ಅನುಭವಿಸುತ್ತಿರುವುದನ್ನು ಮಾಧ್ಯಮಗಳಲ್ಲಿ ನಾವು ಪ್ರತಿನಿತ್ಯ ಕಾಣುತ್ತೇವೆ. ಇಂತಹ ತೊಂದರೆಗೆ ಸಿಲುಕದೇ ದುಶ್ಚಟಗಳಿಂದ ದೂರವಿರಬೇಕು. ಗ್ರಾಮೀಣ ಭಾಗದ ಮಹಿಳೆಯರು ಬಯಲು ಪ್ರದೇಶಕ್ಕೆ ಬಹಿರ್ದೆಸೆಗೆ ಹೋಗುತ್ತಿರುವುದು ಇಂದಿಗೂ ತಪ್ಪಿಲ್ಲ. ಮಹಿಳೆಯರಿಗೆ ನಿಜಕ್ಕೂ ಮರ್ಯಾದೆಯ ಪ್ರಶ್ನೆ ಇದಾಗಿದೆ. ಕೆಟ್ಟ ರೂಢಿ ಹೋಗಲಾಡಿಸುವ ದೃಷ್ಟಿಯಿಂದ ಸರ್ಕಾರ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ನೀಡಲು ಮುಂದಾಗಿದೆ. ಗ್ರಾಮಗಳ ಸ್ವಚ್ಛತೆ ಕಾಪಾಡಿ ನೈರ್ಮೈಲ್ಯ ಮುಕ್ತ ಹಾಗೂ ರೋಗರಹಿತ ಗ್ರಾಮವನ್ನಾಗಿ ಮಾಡುವ ಸಂಕಲ್ಪ ಮಾಡಬೇಕು. ಮನೆಗೊಂದು ಶೌಚಾಲಯವಾದರೆ ಗ್ರಾಮವೇ ದೇವಾಲಯವಾದಂತೆ ಎಂದರು.
ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಬಸವರಾಜ ಶ್ರೀಗಳು ಮಾತನಾಡಿ, ಚಟಗಾರರ ಚಟ ಬಿಡಿಸುವುದು ಇಂದಿನ ಸಮಾಜದಲ್ಲಿ ಪವಾಡವಾಗಿದ್ದು, ಅನೇಕ ಮಹಿಳೆಯರು ದುಶ್ಚಟಗಳ ದಾಸರಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಚಟಮುಕ್ತ ಸಮಾಜ ನಿರ್ಮಾಣ ಮಾಡುವುದು ಮಠಾಧೀಶರ ಕರ್ತವ್ಯವಾಗಿದ್ದು, ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದರು.
ಶಿವಲಿಂಗ ಶ್ರೀ, ನಿಜಲಿಂಗ ಶ್ರೀ, ಹಾರನಾಳ ಶ್ರೀ, ಅನ್ನದಾನ ಶಾಸ್ತ್ರಿಗಳು ಆಶೀರ್ವಚನ ನೀಡಿದರು. ಬಿ.ಎಸ್. ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ತಿಮ್ಮರಡ್ಡಿ ಮರಡ್ಡಿ, ಸದಸ್ಯ ಮೋಹನ ಗುತ್ತೆಮ್ಮನವರ, ಶಿವನಗೌಡ್ರ ಪಾಟೀಲ, ದೇವರಡ್ಡಿ ಅಳವಂಡಿ, ನಾಗರಾಜ ಅಕ್ಕೂರ, ಎಂ.ಬಿ. ಹಾವೇರಿ, ಮಹೇಶ ಶೆಟ್ಟಿಕೇರಿ, ಶಿವಯೋಗಿ ವಿಭೂತಿ ಇತರರಿದ್ದರು. ಜಿಪಂ. ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್ ಸ್ವಾಗತಿಸಿದರು. ಗಿರೀಶ ಕೋಡಬಾಳ ನಿರೂಪಿಸಿ, ವಂದಿಸಿದರು.