ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಯಲು ಬಹಿರ್ದೆಸೆಗೆ ಯಾವಾಗ ಮುಕ್ತಿ?

Lingaraj Badiger
Updated On : 17 Dec 2013, 12:12 pm

ಗಜೇಂದ್ರಗಡ: ಪಟ್ಟಣ, ಸುತ್ತಲಿನ ಗ್ರಾಮವನ್ನು ಬಯಲು ಶೌಚಮುಕ್ತ ನಿರ್ಮಾಣ ಉದ್ದೇಶದಿಂದ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಆದರೆ, ನಿರೀಕ್ಷಿತ ಗುರಿ ತಲುಪಲು ಇನ್ನು ಸಾಧ್ಯವಾಗಿಲ್ಲ. ಗ್ರಾಮಗಳಲ್ಲಿ ವಾರ್ಡ್ ಸಭೆ, ಜನಸಂಪರ್ಕ ಸಭೆಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಅಧಿಕಾರಿಗಳು, ಜನಪ್ರತಿನಿಧಿಗಳ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ.
ಗಜೇಂದ್ರಗಡ ಸಮೀಪದ ಚಿಲಝರಿ, ವೀರಾಪುರ, ಕೊಡಗಾನೂರ, ಗೋಗೇರಿ, ದಿಂಡೂರ, ನಿಡಗುಂದಿ, ರಾಜೂರ, ವದೆಗೋಳ, ಜಿಗೇರಿ, ಕಾಲಸಕಾಲೇಶ್ವರ, ಬೈರಾಪುರ, ನಾಗೇಂದ್ರಗಡ, ಲಕ್ಕಲಕಟ್ಟಿ, ಇಟಗಿ, ಸೂಡಿ, ದ್ಯಾಮುಣಸಿ, ಬೇವಿನಕಟ್ಟಿ, ಕಳಕಾಪುರ, ಅಮರಗಟ್ಟಿ, ಕಲ್ಲಿಗನೂರ, ಮುಶಿಗೇರಿ, ನೆಲ್ಲೂರ ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಂಬಿಗೆ ಹಿಡಿದು ಬಯಲು ಹುಡುಕುತ್ತಾ ಹೋಗುವುದು ಇನ್ನೂ ಕಡಿಮೆಯಾಗಿಲ್ಲ.
ಗ್ರಾಮ ಪ್ರವೇಶಿಸುವ ರಸ್ತೆ ಬದಿ ಜನರು ಬಹಿರ್ದೇಸೆಗೆ ತೆರಳುವುದು ಜತೆಗೆ ಗ್ರಾಮಗಳ ಹತ್ತಿರದ ರಸ್ತೆಯಲ್ಲಿ ಜನ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ದುಸ್ಥಿತಿ ಇಂದಿಗೂ ತಪ್ಪಿಲ್ಲ. ಇದು ಬಯಲು ಶೌಚಮುಕ್ತ ನಿರ್ಮಾಣ ಉದ್ದೇಶ ವಿಫಲದತ್ತ ದಾರಿ ಹಿಡಿದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಶೌಚಾಲಯ ನಿರ್ಮಾಣಕ್ಕೆ ಧನಸಹಾಯ: ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಈ ಹಿಂದೆ ಸರ್ಕಾರ ರು. 4,500 ಸಹಾಯಧನ ನೀಡುತ್ತಿತ್ತು. ಇಂದು ಶೌಚಾಲಯ ನಿರ್ಮಾಣಕ್ಕೆ ರು. 9,200 ಸಹಾಯಧನ ನೀಡುತ್ತಿದೆಯಾದರೂ ಇಂದಿಗೂ ಶೇ. 65ಕ್ಕೂ ಹೆಚ್ಚು ಕುಟುಂಬಗಳು ಶೌಚಾಲಯವನ್ನು ನಿರ್ಮಿಸಿಕೊಳ್ಳದೇ ಬಯಲನ್ನೇ ಅವಲಂಬಿಸಿರುವುದು ಮಾತ್ರ ವಿಪರ್ಯಾಸವೇ ಸರಿ. ನರೇಗಲ್, ಗಜೇಂದ್ರಗಡ ಪುರಸಭೆ ಶೌಚಾಲಯ ನಿರ್ಮಾಣಕ್ಕೆ ರು. 20 ಸಾವಿರ ಸಹಾಯಧನ ನೀಡುತ್ತಿದೆ. ಆದರೆ, ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಮಾತ್ರ ಒಂದಿಲ್ಲೊಂದು ವಿಘ್ನಗಳು ಆವರಿಸಿವೆ.
ದೂರವಾಗದ ಸಂಕೋಚ: ಬಯಲಿನಲ್ಲಿ ಮಲವಿಸರ್ಜನೆ ಮಾಡುವುದನ್ನು ತಪ್ಪಿಸುವುದರೊಂದಿಗೆ ಜನತೆಯಲ್ಲಿ ಸುರಕ್ಷಿತ ಮತ್ತು ಸ್ವಚ್ಛತೆಯ ಅಭ್ಯಾಸ ಬೆಳೆಸುವ ಉದ್ದೇಶದಿಂದ ಸರ್ಕಾರ ನಿರ್ಮಲ ಗ್ರಾಮ, ಸ್ವಚ್ಛ ಗ್ರಾಮ, ಸುವರ್ಣ ಗ್ರಾಮ ಯೋಜನೆ ಜಾರಿಗೆ ತಂದಿದೆಯಾದರೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮನ್ಯಾಗ ಸಂಡಾಸು ಕಟ್ಟಿಸೋದು ಸರಿಯೇನ ರ್ರೀ. ಮನ್ಯಾಗ ದ್ಯಾವ್ರು, ದನ, ಕರ ಮಂದಿ ಮಕ್ಳು ಇರತ್ತಾರ. ಗಬ್ಬುವಾಸನಿ ಬ್ಯಾರೆ ಎನ್ನುವ ಭಾವನೆ ಇಂದಿಗೂ ಗ್ರಾಮೀಣ ಜನರಲ್ಲಿದೆ.
ಇನ್ನಿತರ ಸಮಸ್ಯೆ: ಜಾಗದ ಕೊರತೆ, ಶೌಚಾಲಯ ಸಂಸ್ಕೃತಿಯ ಬಗೆಗಿನ ಮಾಹಿತಿ ಹಾಗೂ ತಿಳಿವಳಿಕೆ ಕೊರತೆ, ಆರ್ಥಿಕ ದುರ್ಬಲತೆ, ಜನತೆಯ ನಿರ್ಲಕ್ಷ್ಯವೂ ಶೌಚಾಲಯ ನಿರ್ಮಾಣಕ್ಕೆ ತೊಡಕಾಗಿವೆ. ಹಲವು ಗ್ರಾಮಗಳಲ್ಲಿ ಸರ್ಕಾರದ ಸಹಾಯಧನ ಪಡೆದು ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೂ ಅವುಗಳ ಸದ್ಭಳಕೆ ಮಾಡಿಕೊಳ್ಳದೇ ಅವುಗಳಲ್ಲಿ ಹಳೆಯ ಸಾಮಾನುಗಳು, ಕಟ್ಟಿಗೆ, ಸಗಣಿ, ಕುಳ್ಳುಗಳು ಹಾಗೂ ಕೃಷಿ ಉಪಕರಣಗಳನ್ನು ಸಂಗ್ರಹಿಸಲು ಬಳಸುತ್ತಿದ್ದಾರೆ.
ಶೌಚಾಲಯ ಬಳಕೆ ಇಲ್ಲ: ಪಟ್ಟಣದ ಜನತಾಪ್ಲಾಟ್, ವಾಜಪೇಯಿನಗರ, ಸೇವಾಲಾಲ್ ನಗರ, ಜವಳಿಪ್ಲಾಟ್, ನವನಗರ, ಉಣಚಗೇರಿ, ಟಗರಿ ಗಲ್ಲಿಶಿವಾಜಿಪೇಟೆ, ನೇಕಾರ ಕಾಲೋನಿ ಸೇರಿ ಇನ್ನಿತರ ಬಡಾವಣೆಗಳಲ್ಲಿ ಜನತೆ ಶೇ. 25ರಿಂದ 35ರ ವರೆಗೆ ನಾಗರಿಕರು ಶೌಚಕ್ಕಾಗಿ ಬಯಲನ್ನೇ ಅವಲಂಬಿಸಿದ್ದಾರೆ. ಬೆಳಗಾಗುತ್ತಲೆ ಕೆಎಚ್‌ಡಿಸಿ ಕಾಲೋನಿ, ಜನತಾಪ್ಲಾಟ್, ಸೇವಾಲಾಲ್ ನಗರ, ಕಲಾಲ ಓಣಿ, ಹಿರೇಬಜಾರ ಜನರು ಬೆಳಗಾಗುತ್ತಲೇ ಚೊಂಬು ಹಿಡಿದು ಗುಡ್ಡದ ಮರುವಿಗೆ, ಎಪಿಎಂಸಿ ಬಯಲು ಜಾಗಕ್ಕೆ ಮೊರೆ ಹೋಗುತ್ತಾರೆ. ಸಮುದಾಯ ಶೌಚಾಲಯಗಳಿವೆ. ಶೌಚಾಲಯಕ್ಕೆ ನಾಗರಿಕರು ತೆರಳದೆ ಪಕ್ಕದ ಜಾಲಿಕಂಟಿಯ ಬಯಲು ಜಾಗಕ್ಕೆ ತೆರಳುತ್ತಾರೆ. ಶೌಚಾಲಯಗಳಿಗೆ ದುಡ್ಡು ಕೊಟ್ಟು ಹೋಗಬೇಕಾಗಿದ್ದರಿಂದ ವಿಶಾಲ ಬಯಲಿಗೆ ಬಹುತೇಕ ಜನ ಹೋಗುತ್ತಾರೆ. ಇದರಿಂದ ಸಮುದಾಯ ಶೌಚಾಲಯಗಳು ಇದ್ದು ಇಲ್ಲದಂತಾಗಿವೆ.
-ಡಿ.ಜೆ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement